ಸಾರಾಂಶ
- ದೇಶದಲ್ಲೇ ಕರ್ನಾಟಕ ಮೊದಲ ರಾಜ್ಯವೆಂಬ ಹೆಮ್ಮೆ: ಸಚಿವ ಮಧು । 10ನೇ ತರಗತಿಯಲ್ಲಿ 1.16 ಲಕ್ಷ, ಪಿಯುನಲ್ಲಿ 86 ಸಾವಿರ ಮಕ್ಕಳು ಉತ್ತೀರ್ಣ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ಜಾರಿಗೆ ತಂದ ಮೂರು ಬಾರಿ ಪರೀಕ್ಷಾ ನೀತಿಯು ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. 2 ಮತ್ತು 3 ಬಾರಿ ಪರೀಕ್ಷಾ ನೀತಿ ಜಾರಿಗೊಳಿಸುವಲ್ಲಿ ಕರ್ನಾಟಕ ರಾಜ್ಯ ದೇಶಕ್ಕೆ ಮೊದಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಕರ್ನಾಟಕ ಅನುದಾನರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.ನಮ್ಮ ಸರ್ಕಾರದ ಹೊಸ ಪರೀಕ್ಷಾ ನೀತಿಯಿಂದಾಗಿ ಅನುತ್ತೀರ್ಣರಾದ ಮಕ್ಕಳಿಗೆ ಆಯಾ ಶಾಲೆ, ಕಾಲೇಜಿನಲ್ಲೇ ಪಾಠ ಮಾಡಲಾಗುತ್ತದೆ. ಹೊಸ ಪರೀಕ್ಷಾ ನೀತಿಯಿಂದಾಗಿ ಪ್ರಸಕ್ತ ಸಾಲಿನಲ್ಲಿ 10ನೇ ತರಗತಿಯಲ್ಲಿ 1.16 ಲಕ್ಷ ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪಿಯು ಪರೀಕ್ಷೆಯಲ್ಲಿ 86 ಸಾವಿರ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉತ್ತೀರ್ಣರಾಗಿ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗೆ ದಾಖಲಾಗಿದ್ದಾರೆ. ಅಲ್ಲದೇ, ಗೌರಿಬಿದನೂರಿನ ಓರ್ವ ವಿದ್ಯಾರ್ಥಿ ಐಐಟಿಗೆ ಪ್ರವೇಶ ಪಡೆದಿರುವುದು ಸಂತಸದ ಸಂಗತಿ ಎಂದು ಹೇಳಿದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುವುದು. ಬಿಜೆಪಿ ಸರ್ಕಾರವಿದ್ದಾಗ 308 ಕೆಪಿಎಸ್ ಶಾಲೆಗಳು ಆರಂಭವಾಗಿದ್ದವು. ನಾವು ಹೊಸದಾಗಿ 800 ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಬಜೆಟ್‌ನಲ್ಲಿ ₹3500 ಕೋಟಿ ಕಾಯ್ದಿರಿಸಿದ್ದೇವೆ. ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸಿದ್ದೇವೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಿ, ಉನ್ನತ ಸ್ಥಾನವನ್ನು ಅಲಂಕರಿಸುವಂತಾಗಬೇಕು ಎಂದು ಮಧು ಬಂಗಾರಪ್ಪ ತಿಳಿಸಿದರು.ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ (ಕೆಯುಪಿಎಂಎ) ರಾಜ್ಯಾಧ್ಯಕ್ಷ ಡಾ. ಎಂ.ಮೋಹನ ಆಳ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಪ್ಮಾ ರಾಜ್ಯ ಗೌರವಾಧ್ಯಕ್ಷ ಎಂ.ಬಿ.ಪುರಾಣಿಕ್, ಕಾರ್ಯದರ್ಶಿ ನರೇಂದ್ರ ಎಲ್.ನಾಯಕ್, ಜಿಲ್ಲಾಧ್ಯಕ್ಷ, ಸರ್ ಎಂ.ವಿ.ಕಾಲೇಜಿನ ಎಸ್.ಜಿ. ಶ್ರೀಧರ್, ಕಾರ್ಯದರ್ಶಿ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಡಾ. ಡಿ.ಎಸ್. ಜಯಂತ್, ದವನ ಮತ್ತು ನೂತನ ಕಾಲೇಜಿನ ಕಕ್ಕರಗೊಳ್ಳ ವೀರೇಶ ಪಟೇಲ್, ಮಾಗನೂರು ಬಸಪ್ಪ ಪಿಯು ಕಾಲೇಜಿನ ಕುಮಾರ, ಪ್ರಾಚಾರ್ಯ ಪ್ರಸಾದ ಎಸ್.ಬಂಗೇರಾ, ಸೈನ್ಸ್ ಅಕಾಡೆಮಿ ಕಾಲೇಜಿನ ವೈ.ವಿ.ವಿನಯ್, ಆನಂದ್ ಕಾಲೇಜಿನ ಆನಂದ್, ಪ್ರಶಾಂತ್ ಇತರರು ಇದ್ದರು.
- - -(ಬಾಕ್ಸ್) * ಚರ್ಚೆಯಾದ ವಿಷಯಗಳು
ಕೆ.ಯು.ಪಿ.ಎಂ.ಎ. ಬಲವರ್ಧನೆ, ಪದವಿಪೂರ್ವ ಬೋಧನೆಯಲ್ಲಿ ಗುಣಮಟ್ಟದ ಉನ್ನತೀಕರಣ, ಖಾಸಗಿ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ನಿರ್ವಹಣೆಯ ಸವಾಲುಗಳು, ಶಿಕ್ಷಣ ಮತ್ತು ಶಿಕ್ಷಣಾ ಸಂಸ್ಥೆಯ ನಿರ್ವಹಣೆಯಲ್ಲಿ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯ ಪಾತ್ರ ವಿಷಯವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ, ರಾಜ್ಯ ಅನುದಾನ ರಹಿತ ಪಿಯು ಕಾಲೇಜುಗಳ ಜವಾಬ್ದಾರಿ, ಕುಪ್ಮಾ ಸಂಘಟನೆ ಮತ್ತು ಬಲವರ್ಧನೆ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾದವು.- - -
-13ಕೆಡಿವಿಜಿ7, 8, 9:ದಾವಣಗೆರೆಯಲ್ಲಿ ಶನಿವಾರ ಕರ್ನಾಟಕ ಅನುದಾನರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶದ ಸಮಾರೋಪದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಕುಪ್ಮಾ ಅಧ್ಯಕ್ಷ ಡಾ. ಎಂ.ಮೋಹನ ಆಳ್ವಾ ಇತರರು ಇದ್ದರು. -13ಕೆಡಿವಿಜಿ10:
ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು.