ಅಂಬೆಗಾಲಿಡುತ್ತ ಜಗತ್ತನ್ನು ಅರಿಯುವ ವಯಸ್ಸಿನಲ್ಲೇ ಹುಬ್ಬಳ್ಳಿಯ ಪುಟಾಣಿ ಸುವಿಕ್ಷಾ ವಿನಾಯಕ ಹಳಪೇಟಿ ವಿಶಿಷ್ಟ ಸಾಧನೆ ಮಾಡಿದ್ದಾಳೆ.

1 ವರ್ಷ 8 ತಿಂಗಳ ಸುವಿಕ್ಷಾ ಟ್ರೆಡ್‌ಮಿಲ್‌ನಲ್ಲಿ 600 ಮೀಟರ್ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಂಬೆಗಾಲಿಡುತ್ತ ಜಗತ್ತನ್ನು ಅರಿಯುವ ವಯಸ್ಸಿನಲ್ಲೇ ಹುಬ್ಬಳ್ಳಿಯ ಪುಟಾಣಿ ಸುವಿಕ್ಷಾ ವಿನಾಯಕ ಹಳಪೇಟಿ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಕೇವಲ 1 ವರ್ಷ 8 ತಿಂಗಳ ವಯಸ್ಸಿನಲ್ಲಿ ಟ್ರೆಡ್‌ಮಿಲ್‌ನಲ್ಲಿ 600 ಮೀಟರ್ ದೂರವನ್ನು 9 ನಿಮಿಷ 27 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ.

ಎಳೆಯ ವಯಸ್ಸಿನಲ್ಲೇ ಗಮನ ಸೆಳೆದಿರುವ ಈ ಬಾಲಕಿ, ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಿದರೆ ಅವರ ಸಾಮರ್ಥ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾಳೆ. 2024ರ ಡಿಸೆಂಬರ್ 3ರಂದು ಜನಿಸಿದ ಸುವಿಕ್ಷಾ ಸಾಧನೆಯನ್ನು "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ "ನ ಸಂಪಾದಕೀಯ ಮಂಡಳಿ 2026ರ ಆಗಸ್ಟ್ 31ರಂದು ದೃಢೀಕರಿಸಿದೆ. ಈ ಸಾಧನೆಗಾಗಿ ಆಕೆಗೆ "ಐಬಿಆರ್ ಅಚೀವರ್‌ " ಗೌರವ ಲಭಿಸಿದೆ.

ಮೂರು ತಿಂಗಳ ಅಭ್ಯಾಸ:

ಇಲ್ಲಿನ ಇಂದ್ರಪ್ರಸ್ಥ ನಗರದ ನಿವಾಸಿ, ಸ್ಕೇಟಿಂಗ್ ಮತ್ತು ಸೈಕ್ಲಿಂಗ್ ತರಬೇತುದಾರ ವಿನಾಯಕ ಹಳಪೇಟಿ ಹಾಗೂ ಸುಷ್ಮಾ ದಂಪತಿಯ ಪುತ್ರಿ ಸುವಿಕ್ಷಾ, ತಂದೆಯ ಮಾರ್ಗದರ್ಶನದಲ್ಲಿ ಮನೆಯಲ್ಲಿ ಸುಮಾರು 3 ತಿಂಗಳ ಕಾಲ ಅಭ್ಯಾಸ ನಡೆಸಿದ್ದಳು.

ಈಜಿನ ಆಸೆಯಿಂದ ಟ್ರೆಡ್‌ಮಿಲ್‌ ವರೆಗೆ:

ಮಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆಯ ಪರಿಚಯ ಮಾಡಿಸಬೇಕೆಂಬ ಆಸೆಯಿಂದ ವಿನಾಯಕ ಅವರು ಮೊದಲು ಈಜು ತರಬೇತಿ ಕೊಡಿಸಲು ಪ್ರಯತ್ನಿಸಿದ್ದರು. ಆದರೆ, ಹುಬ್ಬಳ್ಳಿಯಲ್ಲಿ ಪುಟ್ಟ ಮಕ್ಕಳಿಗೆ ಸೂಕ್ತವಾದ ಬೇಬಿ ಸ್ವಿಮ್ಮಿಂಗ್ ಪೂಲ್ ಲಭ್ಯವಿರಲಿಲ್ಲ. ಸ್ಥಳೀಯ ಈಜುಕೊಳಗಳಲ್ಲಿ ಬಳಸುವ ಕ್ಲೋರಿನ್‌ನಿಂದ ಮಗುವಿನ ಸೂಕ್ಷ್ಮ ಚರ್ಮಕ್ಕೆ ತೊಂದರೆಯಾಗುವ ಸಾಧ್ಯತೆ ಕುರಿತು ವೈದ್ಯರು ಸಲಹೆ ನೀಡಿದ್ದರಿಂದ ತಾಯಿ ಸುಷ್ಮಾ ಈ ಪ್ರಯತ್ನವನ್ನು ಮುಂದೂಡಿದರು. ಬಳಿಕ ಮಗುವಿನ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಚಟುವಟಿಕೆಗಳತ್ತ ಗಮನ ಹರಿಸಿ ನೀಡಿದ ಪ್ರೋತ್ಸಾಹ ಸುವಿಕ್ಷಾಳ ಪ್ರಯತ್ನಕ್ಕೆ ಬೆಂಬಲವಾಯಿತು.

ಅಣ್ಣನೂ ಕ್ರೀಡಾ ಸಾಧಕ:

ಸುವಿಕ್ಷಾ ಅಣ್ಣ ಸುಷ್ವಿನ್ ಹಳಪೇಟಿ ಕೂಡ ಸ್ಕೇಟಿಂಗ್ ಮತ್ತು ಸೈಕ್ಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದು, ರಾಜ್ಯ ಮಟ್ಟದ ಪದಕಗಳನ್ನು ಗೆದ್ದಿದ್ದಾನೆ. ಮಕ್ಕಳ ಆಸಕ್ತಿ ಗುರುತಿಸಿ ಸೂಕ್ತ ಅವಕಾಶ ಕಲ್ಪಿಸುವ ಕುಟುಂಬದ ಮನೋಭಾವ ಇಬ್ಬರ ಕ್ರೀಡಾ ಪಯಣಕ್ಕೂ ಪ್ರೇರಣೆಯಾಗಿದೆ. ಮಗುವಿಗೆ ಮೊದಲು ತರಬೇತಿ ನೀಡುವುದು ಸ್ವಲ್ಪ ಕಷ್ಟವಾಯಿತು. ನಂತರದ ದಿನಗಳಲ್ಲಿ ಮಗುವಿನ ಆಸಕ್ತಿಯಂತೆ ತರಬೇತಿ ನೀಡಲಾಯಿತು. ಸೂಕ್ತ ತರಬೇತಿ ಪಡೆದುಕೊಳ್ಳುವ ಮೂಲಕ ಈ ಸಾಧನೆ ತೋರಿರುವುದು ಸಂತಸ ತಂದಿದೆ.

ವಿನಾಯಕ ಹಳಪೇಟಿ, ಸುವಿಕ್ಷಾಳ ತಂದೆ