೪ ತಿಂಗಳಲ್ಲಿ ದಾಖಲೆಯ ೧೦೩೮ ಅಗ್ನಿ ಅವಘಡಗಳು..!

| Published : May 06 2024, 12:33 AM IST

ಸಾರಾಂಶ

ಮಂಡ್ಯ ಜಿಲ್ಲಾ ಅಗ್ನಿ ಶಾಮಕ ದಳದ ಮಾಹಿತಿಯನುಸಾರ ಜನವರಿಯಲ್ಲಿ ೮೯, ಫೆಬ್ರವರಿಯಲ್ಲಿ ೨೪೬, ಮಾರ್ಚ್‌ನಲ್ಲಿ ೩೩೧, ಏಪ್ರಿಲ್‌ನಲ್ಲಿ ೩೬೭ ಅಗ್ನಿ ಅವಘಡಗಳು ಸಂಭವಿಸಿರುವುದಾಗಿ ತಿಳಿಸಿವೆ. ಈ ಅಗ್ನಿ ದುರಂತ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು, ೬ ಪ್ರಾಣಿಗಳು ಮೃತಪಟ್ಟಿವೆ. ೮.೩೪ ಕೋಟಿ ರು. ಮೌಲ್ಯದ ಆಸ್ತಿ ನಾಶವಾಗಿದ್ದರೆ, ೧೯.೫೬ ಕೋಟಿ ರು. ಮೌಲ್ಯದ ಆಸ್ತಿಯನ್ನು ಸಂರಕ್ಷಿಸಿರುವುದಾಗಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಬೇಸಿಗೆ ಸಮಯದಲ್ಲಿ ಅಗ್ನಿ ಅವಘಡಗಳು ಸಂಭವಿಸುವುದು ಸಾಮಾನ್ಯ. ಆದರೆ, ಈ ಬಾರಿ ಬೇಸಿಗೆಯಲ್ಲಿ ಸಂಭವಿಸಿರುವ ಅಗ್ನಿ ದುರಂತ ಪ್ರಕರಣಗಳು ಹಿಂದೆಂದೂ ಸಂಭವಿಸಿಲ್ಲದಿರುವುದು ವಿಶೇಷ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ೧೦೩೮ ಅಗ್ನಿ ಅವಘಡ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯ ಮಟ್ಟಿಗೆ ಹೊಸ ದಾಖಲೆಯಾಗಿದೆ..!

ಜಿಲ್ಲಾ ಅಗ್ನಿ ಶಾಮಕ ದಳದ ಮಾಹಿತಿಯನುಸಾರ ಜನವರಿಯಲ್ಲಿ ೮೯, ಫೆಬ್ರವರಿಯಲ್ಲಿ ೨೪೬, ಮಾರ್ಚ್‌ನಲ್ಲಿ ೩೩೧, ಏಪ್ರಿಲ್‌ನಲ್ಲಿ ೩೬೭ ಅಗ್ನಿ ಅವಘಡಗಳು ಸಂಭವಿಸಿರುವುದಾಗಿ ತಿಳಿಸಿವೆ. ಈ ಅಗ್ನಿ ದುರಂತ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು, ೬ ಪ್ರಾಣಿಗಳು ಮೃತಪಟ್ಟಿವೆ. ೮.೩೪ ಕೋಟಿ ರು. ಮೌಲ್ಯದ ಆಸ್ತಿ ನಾಶವಾಗಿದ್ದರೆ, ೧೯.೫೬ ಕೋಟಿ ರು. ಮೌಲ್ಯದ ಆಸ್ತಿಯನ್ನು ಸಂರಕ್ಷಿಸಿರುವುದಾಗಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಈ ಬಾರಿಯ ಬೇಸಿಗೆಯ ತಾಪ ತೀವ್ರತೆಯಿಂದ ಕೂಡಿದ್ದ ಕಾರಣ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅಗ್ನಿ ದುರಂತ ಪ್ರಕರಣಗಳ ಸಂಖ್ಯೆ ಪ್ರತಿ ತಿಂಗಳು ಏರಿಕೆಯಾಗುತ್ತಲೇ ಇದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಅಗ್ನಿ ಶಾಮಕ ಇಲಾಖೆ ಕಂಟ್ರೋಲ್ ರೂಂಗೆ ಕರೆಗಳು ಬರುತ್ತಲೇ ಇವೆ. ಕಳೆದ ವರ್ಷ ಬೇಸಿಗೆಯಲ್ಲಿ ಇಡೀ ವರ್ಷಕ್ಕೆ ೧೦೫೮ ಅಗ್ನಿ ಅವಘಡಗಳು ಸಂಭವಿಸಿದ್ದರೆ ಈ ಬಾರಿ ನಾಲ್ಕೇ ತಿಂಗಳಲ್ಲಿ ೧೦೩೮ ಅಗ್ನಿ ದುರಂತಗಳು ಸಂಭವಿಸಿರುವುದು ಆತಂಕ ಮೂಡಿಸಿದೆ.

ಕಬ್ಬು, ಹುಲ್ಲಿನ ಮೆದೆ ಬೆಂಕಿ ಪ್ರಕರಣಗಳೇ ಹೆಚ್ಚು:

ಪ್ರಸ್ತುತ ಕಬ್ಬು ಬೆಳೆ ಮತ್ತು ಹುಲ್ಲಿನ ಮೆದೆಗಳು ಬೆಂಕಿ ಅವಘಡಗಳಿಗೆ ತುತ್ತಾಗುತ್ತಿರುವ ಪ್ರಕರಣಗಳೇ ಹೆಚ್ಚು ವರದಿಯಾಗುತ್ತಿವೆ. ಕಬ್ಬಿನ ಗದ್ದೆಗಳೊಳಗೆ ವಿದ್ಯುತ್ ತಂತಿಗಳು ಹಾದುಹೋಗಿರುತ್ತವೆ. ಹಲವೆಡೆ ತಂತಿಗಳು ಜೋತು ಬಿದ್ದಿರುತ್ತವೆ. ಗಾಳಿ ಬೀಸುವ ವೇಳೆ ಅಥವಾ ಇನ್ಯಾವುದೋ ಸಂದರ್ಭದಲ್ಲಿ ತಂತಿಗಳು ಸ್ಪರ್ಶಗೊಂಡು ಹಾರುವ ಬೆಂಕಿಯ ಕಿಡಿ ದುರಂತಗಳಿಗೆ ಕಾರಣವಾಗುತ್ತಿವೆ. ವಿದ್ಯುತ್ ಇಲಾಖೆಯವರು ಇದರ ಬಗ್ಗೆ ಗಮನ ಹರಿಸಬೇಕು. ಇಲ್ಲವೇ, ರೈತರೇ ಮುಂಜಾಗ್ರತೆ ವಹಿಸಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯುತ್ ತಂತಿಗಳು ಜೋತು ಬೀಳದಂತೆ ಎಚ್ಚರ ವಹಿಸಿದರೆ ದುರಂತಗಳನ್ನು ತಪ್ಪಿಸಬಹುದು ಎನ್ನುವುದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೇಳುವ ಮಾತು.

ಇದರೊಂದಿಗೆ ಜನರ ಸ್ವಯಂಕೃತ ಅಪರಾಧಗಳಿಂದಲೂ ಬೆಂಕಿ ದುರಂತಗಳು ಸಂಭವಿಸುತ್ತವೆ. ಬೀಡಿ, ಸಿಗರೇಟ್ ಸೇದಿ ಸುರಕ್ಷಿತ ಜಾಗಗಳಲ್ಲಿ ಎಸೆಯದೆ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಬಿಸಿಲ ಶಾಖ. ಉಷ್ಣ ಹವೆಯ ವೇಳೆ ಬೆಂಕಿಯ ಕಿಡಿ ತೀವ್ರಗತಿಯಲ್ಲಿ ಹರಡಿ ಅಕ್ಕ-ಪಕ್ಕದ ಬೆಳೆಗೆ, ಹುಲ್ಲಿನ ಮೆದೆಗಳಿಗೂ ಬೆಂಕಿ ತಗುಲುವ ಸಾಧ್ಯತೆಗಳಿವೆ. ಇದರ ಬಗ್ಗೆಯೂ ಜನರು ಜಾಗೃತರಾಗುವುದು ಅವಶ್ಯಕವಾಗಿದೆ.

ಹೆಚ್ಚುತ್ತಿರುವ ಶಾರ್ಟ್‌ ಸರ್ಕ್ಯೂಟ್:

ತಾಪಮಾನ ಏರಿಕೆ, ಉಷ್ಣ ಹವೆಯ ಪರಿಣಾಮದಿಂದ ಶಾರ್ಟ್‌ ಸರ್ಕ್ಯೂಟ್ ಪ್ರಕರಣಗಳೂ ಹೆಚ್ಚುತ್ತಿವೆ. ತಾಪ ಹೆಚ್ಚಾದಂತೆ ಮನೆಗಳಲ್ಲಿರುವ ಫ್ರಿಡ್ಜ್, ಫ್ಯಾನ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು ಹೆಚ್ಚು ಬಿಸಿಯಾಗಿರುತ್ತವೆ. ಒಮ್ಮೊಮ್ಮೆ ತಾಪಕ್ಕೆ ವೈರ್‌ಗಳು ಕರಗಿ ಶಾರ್ಟ್‌ಸರ್ಕ್ಯೂಟ್ ಸಂಭವಿಸುತ್ತಿವೆ. ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಸಾಧ್ಯವಾದಷ್ಟು ಮನೆಯೊಳಗೆ ಗಾಳಿ ಬರುವಂತೆ ಕಿಟಕಿಗಳನ್ನು ತೆರೆದಿರಬೇಕು. ಮುಕ್ತವಾಗಿ ಗಾಳಿ ಬೀಸಿದರೆ ಮನೆಯೊಳಗಿರುವ ತಾಪ ಕಡಿಮೆಯಾಗಿ ಸಂಭವನೀಯ ದುರಂತಗಳನ್ನು ತಡೆಯಲು ಅವಕಾಶಗಳಿವೆ ಎನ್ನುವುದು ಅಧಿಕಾರಿಗಳ ಅನುಭವದ ಮಾತಾಗಿದೆ.

ಸಿಬ್ಬಂದಿಗೆ ರಜೆ ಇಲ್ಲ:

ಅಗ್ನಿ ಅವಘಡಗಳ ಕರೆಗಳು ನಿರಂತರವಾಗಿ ಬರುತ್ತಿರುವುದರಿಂದ ಇಲಾಖೆ ಸಿಬ್ಬಂದಿಗೆ ರಜೆ ನೀಡದೆ ಕರ್ತವ್ಯದಲ್ಲಿ ತೊಡಗಿಸಲಾಗಿದೆ. ದಿನಕ್ಕೆ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ೨೫ ರಿಂದ ೩೦ ಕರೆಗಳು ಬರುತ್ತಿವೆ. ಎಲ್ಲಾ ಕರೆಗಳಿಗೂ ಏಕಕಾಲದಲ್ಲಿ ಸ್ಪಂದಿಸುವುದು ಕಷ್ಟವಾಗಿದೆ. ಆದರೂ ಇರುವ ಸಿಬ್ಬಂದಿ ಮೂಲಕ ಸಾಧ್ಯವಾದಷ್ಟು ಸಾರ್ವಜನಿಕರ ಆಸ್ತಿ, ರೈತರ ಬೆಳೆ, ಜೀವಹಾನಿ ತಪ್ಪಿಸುವುದಕ್ಕೆ ಶ್ರಮ ವಹಿಸಲಾಗುತ್ತಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ತಿಂಗಳಿಂದ ಬೆಂಕಿ ದುರಂತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಸಿಬ್ಬಂದಿ ರಜೆಯನ್ನೇ ಪಡೆಯದೆ ಹಗಲು-ರಾತ್ರಿ ಎನ್ನದೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ವಾಹನಗಳಿಗೆ ನೀರು ತುಂಬಿಸಿಕೊಂಡು ಅಗತ್ಯ ಉಪಕರಣಗಳೊಂದಿಗೆ ಸದಾ ಸಿದ್ಧರಾಗಿರುವ ಅಗ್ನಿಶಾಮಕ ಸಿಬ್ಬಂದಿ ಕರೆ ಬಂದೊಡನೆ ಸ್ಥಳಕ್ಕೆ ತೆರಳಿ ಬೆಂಕಿನಂದಿಸುವ, ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯದಲ್ಲಿ ನಿರತರಾಗುತ್ತಿದ್ದಾರೆ. ಸಿಬ್ಬಂದಿ ಕೊರತೆ ನಡುವೆಯೂ ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದು ವಿಶೇಷವಾಗಿದೆ.

ಸದ್ಯಕ್ಕೆ ನೀರಿಗೆ ಕೊರತೆ ಇಲ್ಲ:

ಅಗ್ನಿಶಾಮಕ ವಾಹನಗಳಿಗೆ ನೀರು ತುಂಬಿಸುವುದಕ್ಕೆ ಇದುವರೆಗೂ ಜಿಲ್ಲೆಯ ಯಾವ ಭಾಗದಲ್ಲೂ ಸಮಸ್ಯೆ ಎದುರಾಗಿಲ್ಲ. ನಗರಸಭೆ ಆಯುಕ್ತರು ಮತ್ತು ಜಲಮಂಡಳಿ ಅಧಿಕಾರಿಗಳು ನಗರದ ಮೂರು ಕಡೆಗಳಲ್ಲಿ ನೀರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಗ್ನಿಶಾಮಕ ಇಲಾಖೆಗೆ ಸೇರಿದ ಪ್ರತ್ಯೇಕ ಟ್ಯಾಂಕ್ ವ್ಯವಸ್ಥೆ ಇರುವುದರಿಂದ ಇದುವರೆಗೆ ನೀರಿಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ತುರ್ತು ಸೇವೆ ವಾಹನಗಳಿಗೆ ವಿನಾಯ್ತಿ ಅಗತ್ಯ:

ಹಾಲಿ ಅಗ್ನಿಶಾಮಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನಗಳ ಪೈಕಿ ೧೧ ವಾಹನಗಳು ೧೫ ವರ್ಷ ಮೇಲ್ಪಟ್ಟವಾಗಿವೆ. ಕೇಂದ್ರ ಸರ್ಕಾರದ ನಿಯಮಾನುಸಾರ ೧೫ ವರ್ಷ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ, ಜಿಲ್ಲಾ ಅಗ್ನಿಶಾಮಕ ಇಲಾಖೆ ತುರ್ತು ಸೇವೆಗಳ ವ್ಯಾಪ್ತಿಯೊಳಗೆ ಬರುವಂತಹದ್ದು. ಬೇಸಿಗೆ ಸಮಯದಲ್ಲಿ ಅಗ್ನಿ ದುರಂತ ಪ್ರಕರಣಗಳು ಹೆಚ್ಚು ವರದಿಯಾಗುವುದರಿಂದ ವಾಹನಗಳ ಬಳಕೆ ಅನಿವಾರ್ಯವಾಗಿದೆ. ತುರ್ತು ಸೇವೆಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಕೇಂದ್ರ ಸರ್ಕಾರ ಈ ನಿಯಮದಿಂದ ವಿನಾಯ್ತಿ ನೀಡುವುದು ಉತ್ತಮ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ಅಗ್ನಿ ಶಾಮಕ ಇಲಾಖೆಯಲ್ಲಿರುವ ವಾಹನಗಳ ಕೊರತೆಯನ್ನು ಮೈಸೂರು ಪ್ರಾದೇಶಿಕ ವಿಭಾಗ ಸರಿದೂಗಿಸುತ್ತಿದೆ. ಹೆಚ್ಚುವರಿ ವಾಹನಗಳನ್ನು ಕಳುಹಿಸಿಕೊಡುವ ಮೂಲಕ ದುರಂತಗಳ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸುವುದಕ್ಕೆ ನೆರವಾಗಿದೆ. ಕೇಂದ್ರ ಸರ್ಕಾರ ತುರ್ತು ಸೇವೆಗೊಳಪಡುವ ಇಲಾಖೆಗಳಿಗೆ ೧೫ ವರ್ಷ ಮೇಲ್ಪಟ್ಟ ವಾಹನಗಳನ್ನು ಬಳಸುವುದಕ್ಕೆ ಅವಕಾಶ ನೀಡಿದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದೆಂಬುದು ಜನಮಾನಸದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

ಬಿಸಿ ಗಾಳಿಯಿಂದ ವಾತಾವರಣದ ತುಂಬಾ ಉಷ್ಣತೆ ಹೆಚ್ಚಿರುವುದರಿಂದ ಜಿಲ್ಲಾದ್ಯಂತ ಏಕ ಕಾಲದಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದು ಎಲ್ಲ ಕರೆಗಳು ಅಗ್ನಿಶಾಮಕ ಇಲಾಖೆ ಕಂಟ್ರೋಲ್ ರೂಂಗೆ ಏಕ ಕಾಲದಲ್ಲಿ ಬರುತ್ತಿರುವುದರಿಂದ ಎಲ್ಲರಿಗೂ ಕೂಡಲೇ ಸ್ಪಂದಿಸಲು ಕಷ್ಟ ಸಾಧ್ಯವಾಗುತ್ತಿದೆ. ಸಾರ್ವಜನಿಕರು ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಅಗ್ನಿ ಅನಾಹುತ ಸಂಭವಿಸದಂತೆ ನೋಡಿಕೊಳ್ಳಬೇಕು. ಇಲಾಖೆಯಿಂದಲೂ ಅಗ್ನಿ ಅನಾಹುತ ತಡೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

- ಬಿ.ಎಂ.ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಮಂಡ್ಯ ಜಿಲ್ಲೆ