ಸಾರಾಂಶ
ಪಟ್ಟಣದ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ (ಎಸ್.ಸಿ.ಐ) ಬುಧವಾರ ಆಯೋಜಿಸಿದ್ದ ರಕ್ಷಾಬಂಧನ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಅಣ್ಣ, ತಂಗಿಯರು ರಕ್ಷಾಬಂಧನದ ಮೂಲಕ ಆಚರಿಸಿ ಪ್ರತೀ ವರ್ಷ ಗಟ್ಟಿಗೊಳಿಸುವ ಸಹೋದರತ್ವದ ಸಂಬಂಧ ಕಲ್ಪನೆಗೂ ಮೀರಿದ್ದಾಗಿದೆ ಎಂದು ಜಯಪುರ ಬಿಜಿಎಸ್ ಕಾಲೇಜಿನ ಉಪನ್ಯಾಸಕ ಸೋಮೇಶ್‌ಗೌಡ ಹೇಳಿದರು.
ಪಟ್ಟಣದ ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಸಂಸ್ಥೆ (ಎಸ್.ಸಿ.ಐ) ಬುಧವಾರ ಆಯೋಜಿಸಿದ್ದ ರಕ್ಷಾಬಂಧನ ಹಾಗೂ ಸ್ನೇಹಿತರ ದಿನದ ಸನ್ಮಿತ್ರ ಸೋದರ ಸಂಭ್ರಮದಲ್ಲಿ ಮಾತನಾಡಿದರು. ಅಣ್ಣ, ತಂಗಿ ಎಂಬುದು ಕೇವಲ ಒಂದು ಸಂಬಂಧವಲ್ಲ ಅದು ಭಾವನಾತ್ಮಕ ಅನ್ಯೋನ್ಯತೆ ಬಂಧವಾಗಿದೆ. ಅಣ್ಣನ ಸಂಕಷ್ಟದಲ್ಲಿ ತಂಗಿ, ತಂಗಿಗೆ ತೊಂದರೆಯಾದಾಗ ಅಣ್ಣ ಜೊತೆಗೆ ನಿಲ್ಲುವುದೇ ಈ ಸಂಬಂಧದ ವಿಶೇಷತೆ. ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದ ಮೌಲ್ಯವಿದ್ದು, ಪೌರಾಣಿಕ ಕಾಲದಿಂದಲೂ ಅಣ್ಣ, ತಂಗಿಗೆ ವಿಶೇಷವಾದ ಮಹತ್ವವಿದೆ.ಪ್ರತೀ ವರ್ಷ ಆಚರಿಸುವ ಶ್ರಾವಣ ಮಾಸದ ಪೌರ್ಣಿಮೆ ದಿನ ರಕ್ಷಾಬಂಧನವನ್ನು ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದು, ಈ ದಿನ ಸಹೋದರಿ ತನ್ನ ಸಹೋದರನಿಗೆ ಬಾಂಧವ್ಯದ ರಕ್ಷೆ ಕಟ್ಟಿದರೆ ಅದರಲ್ಲಿ ದೊರೆವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.
ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿ ಮಮತಾ ಮಾತನಾಡಿ, ಸ್ನೇಹವೆಂಬುದು ಸಹ ಸಮಾಜದಲ್ಲಿ ವಿಶೇಷವಾದ ಸಂಬಂಧ. ಓರ್ವ ವ್ಯಕ್ತಿ ಸ್ನೇಹಿತನಿಲ್ಲದೇ ಜೀವನದಲ್ಲಿ ಬದುಕಲು ಸಾಧ್ಯವೇ ಇಲ್ಲ. ಕುಟುಂಬದಲ್ಲಿ ಇರುವ ಸಂಬಂಧಗಳಿಗಿಂತಲೂ ಸ್ನೇಹ ಸಂಬಂಧ ಶ್ರೇಷ್ಠ ಎಂದರು.ಒಬ್ಬ ವ್ಯಕ್ತಿ ತನ್ನ ಕುಟುಂಬದಲ್ಲಿ ಹೇಳಿಕೊಳ್ಳಲಾಗದ ಅನೇಕ ಕಷ್ಟ, ಸುಖಗಳನ್ನು ತನ್ನ ಸ್ನೇಹಿತರ ಬಳಿ ಹೇಳಿ ನೆಮ್ಮದಿ ಕಂಡುಕೊಳ್ಳುತ್ತಾನೆ. ಸ್ನೇಹಿತರಿ ಗಾಗಿ ಅನೇಕ ತ್ಯಾಗ, ಕಷ್ಟ, ಸುಖ ಎದುರಿಸಿದ ಹಲವಾರು ಉದಾಹರಣೆ ನಿತ್ಯವೂ ನಮ್ಮ ಕಣ್ಣ ಮುಂದೆ ಬರುತ್ತವೆ. ಸ್ನೇಹ ಎಂಬುದು ಕೇವಲ ಇಂದಿನ ಸಂಬಂಧವಲ್ಲ. ಪೌರಾಣಿಕ ಕಾಲದಲ್ಲೂ ಸಹ ದೇವಾನುದೇವತೆಗಳು ಹಲವರ ಸ್ನೇಹ ಹೊಂದಿರುವ ಉಲ್ಲೇಖ ನಮ್ಮ ಮುಂದಿದೆ ಎಂದರು.
ಸೀನಿಯರ್ ಚೇಂಬರ್ ಅಧ್ಯಕ್ಷ ಡಿ.ರಾಜೇಂದ್ರ ಕೆಸವಿನಮನೆ ಮಾತನಾಡಿ, ಎಸ್‌ಸಿಐ ಸಂಸ್ಥೆ ರಕ್ಷಾಬಂಧನ ಹಾಗೂ ಸ್ನೇಹಿತರ ದಿನವನ್ನು ಒಗ್ಗೂಡಿ ಆಚರಿಸುವ ಮೂಲಕ ಹೊಸ ಭಾಷ್ಯ ಬರೆದು ಸ್ನೇಹ, ಸಹೋದರತ್ವದ ಮಹತ್ವ ಸಾರಿದೆ. ಆ.28ರಂದು ಸಂಸ್ಥೆಯಿಂದ ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಆರ್.ಪುರ ತಾಲೂಕಿನ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು.ಮೇಲ್ಪಾಲ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ವಿಶ್ವನಾಥ್ ವಿವಿಧ ವಿಶೇಷತೆ ಕೌತುಕಗಳ ಪ್ರದರ್ಶನ ನೀಡಿದರು. ಗಾಯಕ ರಾಜೇಶ್ ಅವರಿಂದ ಗೀತಗಾಯನ ನಡೆಯಿತು. ಸೀನಿಯರ್ ಚೇಂಬರ್ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಎ.ಆರ್.ಸುರೇಂದ್ರ, ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಖಜಾಂಚಿ ಎಚ್.ಗೋಪಾಲ್, ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ, ಅರ್ಪಿತಾ, ದೀಪಾ, ಪ್ರತಿಮಾ ಮತ್ತಿತರರು ಹಾಜರಿದ್ದರು.೨೨ಬಿಹೆಚ್‌ಆರ್ ೨:
ಬಾಳೆಹೊನ್ನೂರಿನ ಸೀನಿಯರ್ ಚೇಂಬರ್ ಸಂಸ್ಥೆಯಿಂದ ಆಯೋಜಿಸಿದ್ದ ಸನ್ಮಿತ್ರ ಸೋದರ ಸಂಭ್ರಮ ರಕ್ಷಾಬಂಧನ, ಸ್ನೇಹಿತರ ದಿನಾಚರಣೆ ಯನ್ನು ಎಸ್‌ಸಿಐ ಅಧ್ಯಕ್ಷ ಡಿ.ರಾಜೇಂದ್ರ ಉದ್ಘಾಟಿಸಿದರು. ಸೋಮೇಶ್, ಮಮತಾ, ಸುರೇಂದ್ರ, ಚೈತನ್ಯ ವೆಂಕಿ, ರಾಘವೇಂದ್ರ ಇದ್ದರು.