ಗಮನಸೆಳೆದ ಜಾನಪದ ವೈಭವ ಸಂಭ್ರಮ

| Published : Apr 04 2025, 12:47 AM IST

ಸಾರಾಂಶ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಾನಪದ ವೈಭವ ಕಾರ್ಯಕ್ರಮ ಸಂಪೂರ್ಣವಾಗಿ ಗ್ರಾಮೀಣ ಸೊಗಡಿನಿಂದ ವಿಶೇಷ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಾನಪದ ವೈಭವ ಕಾರ್ಯಕ್ರಮ ಸಂಪೂರ್ಣವಾಗಿ ಗ್ರಾಮೀಣ ಸೊಗಡಿನಿಂದ ವಿಶೇಷ ಗಮನ ಸೆಳೆಯಿತು.

ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಶ್ವೇತ ವರ್ಣದ ಶರ್ಟ್, ಪಂಚೆ ಧರಿಸಿ, ತಲೆಗೆ ರುಮಾಲಿನಿಂದ ಪೇಟ ಸುತ್ತಿಕೊಂಡು ಪ್ರವಾಸಿಮಂದಿರದಿಂದ ಸ್ವತ ಎತ್ತಿನಗಾಡಿ ಮೇಲೆ ನಿಂತು ಚಲಾಯಿಸಿಕೊಂಡು ಕಾರ್ಯಕ್ರಮ ಸ್ಥಳವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಗಮಿಸಿದ್ದು ವಿಶೇಷವಾಗಿತ್ತು.

ಕಬ್ಬು ತಳಿರು ತೋರಣಗಳು, ನವಧಾನ್ಯಗಳಿಂದ ಸಿಂಗರಿಸಿದ್ದ ಜಾನಪದ ಹಿನ್ನೆಲೆಯ ವೇದಿಕೆಯಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಂಬೂರಿ ನುಡಿಸುವ ಮೂಲಕ ಜಾನಪದ ವೈಭವಕ್ಕೆ ಚಾಲನೆ ನೀಡಿದರು. ಸಂಪ್ರಾದಾಯಿಕವಾಗಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.

ಕಾಲೇಜು ಪ್ರಾಂಶುಪಾಲರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಎಲ್ಲರು ಸಾಂಪ್ರದಾಯಿಕ ಧಿರಿಸುಗಳನ್ನು ಧರಿಸಿ ಜಾನಪದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.ಜಾನಪದ ಕಲೆಗಳ ತವರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಜಾನಪದ ಕಲೆಗಳ ತವರೂರೆಂದೇ ನಮ್ಮ ಚಾಮರಾಜನಗರ ಜಿಲ್ಲೆ ಹೆಸರುವಾಸಿಯಾಗಿದೆ. ಇಲ್ಲಿನ ಶೇ. 70 ರಿಂದ 80 ರಷ್ಟು ಜನ ರೈತರೇ ಆಗಿದ್ದಾರೆ. ನಾನೂ ರೈತ ಕುಟುಂಬದಿಂದ ಬಂದಿದ್ದೇನೆ. ನನಗೆ ಅತ್ಯಂತ ಪ್ರೀತಿಯೆಂದರೆ ಕೃಷಿ. ಇದರಿಂದ ಸಿಗುವ ಶಾಂತಿ, ನೆಮ್ಮದಿ ಇನ್ನೆಲ್ಲೂ ಸಿಗಲಾರದು ಎಂದರು.

ಸಂಕ್ರಾಂತಿ, ಯುಗಾದಿ ನಮ್ಮ ಜನಪದಕ್ಕೆ ಅತ್ಯಂತ ಹತ್ತಿರವಾಗಿದೆ. ಸಂಕ್ರಾಂತಿಯಂದು ಧಾನ್ಯಗಳು ಗೋವನ್ನು ಪೂಜೆ ಮಾಡುತ್ತೇವೆ. ಯುಗಾದಿಯಂದು ರೈತರು ಹೊನ್ನೇರು ಕಟ್ಟಿ ಭೂತಾಯಿಗೆ ನಮಿಸಿ ಹೊಸ ವರ್ಷ ಬರಮಾಡಿಕೊಳ್ಳುತ್ತಾರೆ. ಇಂತಹ ಸಂಭ್ರಮದ ಕಾಲದಲ್ಲಿಯೇ ಜಾನಪದ ವೈಭವವನ್ನು ಕಾಲೇಜಿನಲ್ಲಿ ಆಯೋಜನೆ ಮಾಡಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಹೇಳಿದರು.

ವಿಶಿಷ್ಟವಾಗಿ ಜಾನಪದ ವೈಭವ ಕಾರ್ಯಕ್ರಮಕ್ಕೆ ಕಾಲೇಜಿನ ಉಪನ್ಯಾಸಕರು, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಎಲ್ಲರೂ ಸೇರಿದ್ದಾರೆ. ಸಂಪ್ರಾದಾಯ ಪರಂಪರೆಗಳನ್ನು ಸ್ಮರಿಸುವ ಸಂಭ್ರಮದ ಹಬ್ಬದ ವಾತಾವರಣ ಕಂಡು ಬಂದಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸುವುದಾಗಿ ಅವರು ನುಡಿದರು.

ಪ್ರಾಂಶುಪಾಲ ಪ್ರೊ. ಪಿ.ಎಸ್. ಗುರುಪ್ರಸಾದ್ ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆ ಆದೇಶದಂತೆ ಜಾನಪದ ವೈಭವ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಜನಪದ ಸೊಗಡು ಆವರಿಸಬೇಕೆಂಬ ಉದ್ದೇಶದಿಂದ ಗ್ರಾಮೀಣ, ದೇಸಿ ವಸ್ತುಗಳಿಂದ ವೇದಿಕೆಯನ್ನು ಅಲಂಕರಿಸಿದ್ದೇವೆ. ವಿದ್ಯಾರ್ಥಿಗಳೊಂದಿಗೆ ಇಡೀ ದಿನ ನಾನಾ ಜನಪದ ಚಟುವಟಿಕೆಗಳನ್ನು ಆಯೋಜಿಸಿದ್ದೇವೆ ಎಂದರು.

ದೊಡ್ಡಮೋಳೆಯ ಜಾನಪದ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ದೊಡ್ಡಗವಿಬಸಪ್ಪ, ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಲೋಕೇಶ, ಉಪನ್ಯಾಸಕರಾದ ಗುರುರಾಜ್, ಶಿವಸ್ವಾಮಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರಾದ ಜಿ. ಬಂಗಾರು, ಮತ್ತಿತ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಜೊತೆಗೂಡಿ ದೇಸಿ ಆಟಗಳಾದ ಚೌಕಭಾರ (ಘಟ್ಟಮನೆ), ಅಳಿಗುಳಿ ಮನೆ, ಗೋರಿ, ಬುಗುರಿ ಆಡಿ ಸಂಭ್ರಮಿಸಿದರು. ದೇಸಿ ಅಡುಗೆ ತಿನಿಸುಗಳನ್ನು ತಯಾರಿಸಿ ಖುಷಿಪಟ್ಟರು.