ಸಾರಾಂಶ
ಶುಕ್ರವಾರ ಗ್ರಾಪಂ ಅಧ್ಯಕ್ಷರು ಹಾಗೂ ಮಹಿಳೆಯರು ಮುಂಡಗೋಡ ಠಾಣೆ ಪೊಲೀಸ್ ನಿರೀಕ್ಷಕರಿಗೆ ಮನವಿ
ಮುಂಡಗೋಡ:
ತಾಲೂಕಿನ ಕೋಡಂಬಿ ಗ್ರಾಪಂ ವ್ಯಾಪ್ತಿಯ ಹಳ್ಳದಮನೆ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಶುಕ್ರವಾರ ಗ್ರಾಪಂ ಅಧ್ಯಕ್ಷರು ಹಾಗೂ ಮಹಿಳೆಯರು ಮುಂಡಗೋಡ ಠಾಣೆ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.ಈ ಹಿಂದೆ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಮದ್ಯ ಮಾರಾಟ ಮಾಡುವವರಿಂದ ಮುಚ್ಚಳಿಕೆ ಪತ್ರ ಸಹ ಪಡೆದಿರುತ್ತೀರಿ. ಆದರೂ ಗ್ರಾಮದಲ್ಲಿ ಕೆಲ ಅಂಗಡಿಕಾರರು ಮತ್ತೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಗ್ರಾಮಸ್ಥರಿಗೆ ಅವಾಚ್ಯವಾಗಿ ನಿಂದಿಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮಕೈಗೊಂಡು ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಮನವಿ ಸಲ್ಲಿಸಲಾಗಿದೆ. ಈ ವೇಳೆ ಕೋಡಂಬಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಕೃಷ್ಣ ಕೊರವರ, ಗ್ರಾಮಸ್ಥರಾದ ಕಾವ್ಯಾ ಡೊಳ್ಳೇಶ್ವರ, ಲಕ್ಷ್ಮಿ ಡೊಳ್ಳೇಶ್ವರ, ಕುಸುಮವ್ವ ದೊಡ್ಮನಿ, ಕೃಷ್ಣಪ್ಪ ಕೋರವರ, ಮಂಜುನಾಥ, ದೇವರಾಜ ಮುಂತಾದವರು ಇದ್ದರು.