ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.17ರಂದು ನಡೆಯವ ಸಚಿವ ಸಂಪುಟ ಸಭೆಯ ಪೂರ್ವಭಾವಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ರೈತರ ಸಮಸ್ಯೆಗಳ ಬಗ್ಗೆ ಸಭೆ ಕರೆದು ಪಟ್ಟಿ ಮಾಡಿ ಸರ್ಕಾರಕ್ಕೆ ನೀಡಿ ವ್ಯವಸ್ಥಿತವಾಗಿ ಸಚಿವ ಸಂಪುಟ ಸಭೆ ನಡೆಸಬೇಕು ಇಲ್ಲದಿದ್ದರೆ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಹಾಗೂ ಟ್ರಾಕ್ಟರ್ ರ್‍ಯಾಲಿ ನಡೆಸಿ ರೈತರ ಪ್ರತ್ಯೇಕ ಸಭೆ ನಡೆಸುತ್ತೇವೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ರೈತರ ಸಮಸ್ಯೆಗಳ ಕುರಿತು ಹಾಗೂ ಮುಂದಿನ ಹೋರಾಟದ ಬಗ್ಗೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಪರಿಹಾರ ಸೂಚಿಸಬೇಕು, ಇದಕ್ಕೆ ಪೂರ್ವಭಾವಿಯಾಗಿ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತ ರೈತರ ಸಭೆ ಕರೆದು ಚರ್ಚಿಸಿ ಸಮಸ್ಯೆಳನ್ನು ಪಟ್ಟಿ ಸಿದ್ದಪಡಿಸಿಕೊಳ್ಳಬೇಕು ಎಂದರು.ರೈತರ ವಿವಿಧ ಬೇಡಿಕೆಗಳಾದ ಪ್ರಸಕ್ತ ಸಾಲಿನ ಕಬ್ಬಿಗೆ ೫೫೦೦ ನಿಗದಿ ಮಾಡಬೇಕು. ಕಳೆದ ಸಾಲಿನ ₹೯೫೦ ಕೋಟಿ ರೈತರಿಗೆ ತಕ್ಷಣ ಕೊಡಬೇಕು. ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಹಾಲಿನ ಪ್ರೋತ್ಸಾಹಧನ ಸುಮಾರು ₹೮೦೦ ಕೋಟಿ ನಷ್ಟು ಬರಬೇಕಾಗಿದೆ ತಕ್ಷಣ ಅದನ್ನು ಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಮೈಕ್ರೋ ಫೈನಾನ್ಸ್ ಹಾವಳಿಯಿಂದ ತತ್ತರಿಸಿರುವ ರೈತರಿಗೆ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಸಾಲ ಸಿಗುವಂತೆ ಕ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿ ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ಮೇಲೆ ಕ್ರಮ ಕೈಗೊಳ್ಳಬೇಕು ಬಗರ್‌ಹುಕುಂ ಸಾಗುವಳಿದಾರರ ಸಾಗುವಳಿ ಚೀಟಿಯನ್ನು ತಕ್ಷಣ ನೀಡಬೇಕು. ಇಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ಮಾಡಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಎಂಎಸ್ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕು. ಕೃಷಿ ವಿದ್ಯುತ್ ಖಾಸಗಿಕರಣ ಮಾಡುವುದನ್ನು ತಕ್ಷಣ ಕೈ ಬಿಟ್ಟು ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳ ಸಂಪರ್ಕವನ್ನು ಕಡಿತ ಮಾಡುತ್ತಿರುವುದನ್ನು ತಕ್ಷಣ ಕೈಬಿಡಬೇಕು. ರೈತರಿಂದ ಹಣವನ್ನು ಕಟ್ಟಿಸಿಕೊಂಡು ಕೃಷಿ ಪಂಪ್ಸೆಟ್ಟುಗಳಿಗೆ ಸಂಪರ್ಕವನ್ನು ಮುಂದುವರಿಸಬೇಕು ಎಂದರು.ಕೃಷಿಸಾಲಕ್ಕೆ ಸಿಬಿಲ್ ಸ್ಕೋರನ್ನು ಪರಿಗಣಿಸಬಾರದು, ಆರ್‌ಟಿಸಿಗಳಲ್ಲಿ ವಕ್ಫ್ ಮಂಡಳಿಯ ಹೆಸರು ಬಂದಿರುವುದನ್ನು ತಿದ್ದುಪಡಿ ಮಾಡಲು ಆದೇಶವನ್ನು ಗೆಜೆಟ್ ನೋಟಿಫಿಕೇಶನ್ ಅಲ್ಲಿ ಪ್ರಕಟಿಸಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಹೊಂದಿರುವ ರೈತರಿಗೆ ವೈಜ್ಞಾನಿಕ ಬೆಳೆ ನಷ್ಟವನ್ನು ನೀಡಬೇಕು ಅತಿವೃಷ್ಟಿ ಅನಾವೃಷ್ಟಿಯಿಂದ ನೊಂದಿರುವ ರೈತರಿಗೆ ವೈಜ್ಞಾನಿಕವಾಗಿ ಬೆಳ ನಷ್ಟನೀಡಲು ಕ್ರಮ ಕೈಗೊಳ್ಳಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಹಗಲು ವೇಳೆ ೧೦ ಗಂಟೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯ ರೈತರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರಾಜ್ಯಾಧ್ಯಕ್ಷ ಭಾಗ್ಯರಾಜ್ ಮನವಿ ಮಾಡಿದರು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಉಪಾಧ್ಯಕ್ಷ ಪ್ರವೀಣ್, ತಾಲೂಕು ಅಧ್ಯಕ್ಷ ಅರಳಿ ಕಟ್ಟೆ ಕುಮಾರ್, ಪ್ರಕಾಶ್ ಗಾಂಧಿ, ಪ್ರಭುಸ್ವಾಮಿ ಕಿಳಲೀಪುರ, ಶ್ರೀಕಂಠ, ನಂದೀಶ್ ನಂಜಾಪುರರಾಜು, ಬಸವರಾಜ್, ಮುಕಡಳ್ಳಿ ರಾಜು ಗೌಡ, ದೇವಲಾಪುರ ವೆಂಕಟರಾಮ್ ಇತರರು ಇದ್ದರು.