ಭೂತ ಬಂಗಲೆಯಾದ ವಸತಿ ಗೃಹ

| Published : Apr 24 2025, 11:52 PM IST

ಸಾರಾಂಶ

70 ವರ್ಷ ಹಳೆಯದಾದ 20 ಮನೆಯಲ್ಲಿ 9 ಮನೆ ಶಿಥಿಲಗೊಂಡಿವೆ. ಬಿರುಕು ಬಿಟ್ಟು ಎಲ್ಲೆಂದರಲ್ಲಿ ಗಿಡಗಳು ಬೆಳೆದಿವೆ. ಹೀಗಾಗಿ ಪಂಚಾಯಿತಿ ಸಿಬ್ಬಂದಿ ವಸತಿ ಸೌಕರ್ಯವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದೀಪದ ಬುಡದಲ್ಲಿ ಕತ್ತಲು ಎಂಬಂತೆ ಸಿಬ್ಬಂದಿಗೆ ಸೂರು ಕಲ್ಪಿಸಲು ಆಗದ ಪಂಚಾಯಿತಿ ನಗರದ ಜನತೆಗೆ ಸೂರು ಕಲ್ಪಿಸಲು ಸಾಧ್ಯವೇ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಿವೆ.

ರಾಮಮೂರ್ತಿ ನವಲಿ

ಗಂಗಾವತಿ

ತಾಲೂಕು ಪಂಚಾಯಿತಿ ಸಿಬ್ಬಂದಿಗಳ ವಸತಿ ಗೃಹ ಭೂತ ಬಂಗಲೆಯಂತೆ ಕಾಣುತ್ತಿದ್ದು ಎಲ್ಲೆಂದರಲ್ಲಿ ಗಿಡ-ಕಂಠಿ ಬೆಳೆದು ಶಿಥಿಲಗೊಂಡಿವೆ. ಇದರಿಂದ ಸಿಬ್ಬಂದಿ ವಸತಿ ಗೃಹದಲ್ಲಿ ವಾಸಿಸಲು ಹಿಂಜರಿಯುತ್ತಿದ್ದು ಮನೆ ತೊರೆಯುತ್ತಿದ್ದಾರೆ.

70 ವರ್ಷ ಹಳೆಯದಾದ 20 ಮನೆಯಲ್ಲಿ 9 ಮನೆ ಶಿಥಿಲಗೊಂಡಿವೆ. ಬಿರುಕು ಬಿಟ್ಟು ಎಲ್ಲೆಂದರಲ್ಲಿ ಗಿಡಗಳು ಬೆಳೆದಿವೆ. ಹೀಗಾಗಿ ಪಂಚಾಯಿತಿ ಸಿಬ್ಬಂದಿ ವಸತಿ ಸೌಕರ್ಯವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದೀಪದ ಬುಡದಲ್ಲಿ ಕತ್ತಲು ಎಂಬಂತೆ ಸಿಬ್ಬಂದಿಗೆ ಸೂರು ಕಲ್ಪಿಸಲು ಆಗದ ಪಂಚಾಯಿತಿ ನಗರದ ಜನತೆಗೆ ಸೂರು ಕಲ್ಪಿಸಲು ಸಾಧ್ಯವೇ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಿವೆ.

ಬಹುತೇಕ ಮನೆಗಳ ಮೇಲೆ ಗಿಡ-ಮರ ಬೆಳೆದಿವೆ. ಈ ಮರದ ಬೇರು ಮನೆಯೊಳಗೆ ಹಬ್ಬಿವೆ. ಮಳೆಯಾದಾಗ ಈ ಬೇರುಗಳ ಮೂಲಕ ನೀರು ಮನೆ ಹೊಕ್ಕುತ್ತಿದ್ದು ಸಿಬ್ಬಂದಿ ಇಲ್ಲದ ಸಂಕಷ್ಟ ಎದುರಿಸುವಂತೆ ಆಗಿದೆ. ಮರದ ಕೊಂಬೆ ಕತ್ತರಿಸಲು ಮನೆ ಮೇಲೆ ಹತ್ತಿದ್ದರೆ ಮೇಲ್ಚಾವಣಿಯೇ ಕುಸಿಯುವ ಭಯ ಸಿಬ್ಬಂದಿಗಳಿದ್ದು, ಆದರೂ ಆತಂಕದಿಂದ ಅದರಲ್ಲಿಯೇ ವಾಸವಾಗಿದ್ದಾರೆ.

ಸೋರುತ್ತಿರುವ ಮನೆ:ಒಟ್ಟು 20ರಲ್ಲಿ ಕೆಲ ಮನೆಗಳಲ್ಲಿ ಮಾತ್ರ ಸಿಬ್ಬಂದಿ ವಾಸಿಸುತ್ತಿದ್ದಾರೆ. ಉಳಿದ ಮನೆಗಳ ಹೆಂಚು ಗಾಳಿ-ಮಳೆಯಿಂದ ಹಾರಿ ಹೋಗಿವೆ. ಮಳೆ ನೀರಿನಿಂದ ಮನೆಗಳು ಸಂಪೂರ್ಣ ಶಿಥಿಲಗೊಂಡು ಧರೆಗುರುಳಲು ಕಾಯುತ್ತಿವೆ. ಕೆಲವರು ಸೋರುತ್ತಿರುವ ಮನೆಯನ್ನು ಸ್ವಂತ ಖರ್ಚಿನಲ್ಲಿಯೇ ರಿಪೇರಿ ಮಾಡಿಸಿಕೊಂಡಿದ್ದಾರೆ. ಇಷ್ಟಾದರೂ ಸಹ ಪಂಚಾಯಿತಿ ಅಧಿಕಾರಿಗಳು ಮಾತ್ರ ಸಿಬ್ಬಂದಿಗಳ ಸಮಸ್ಯೆ ನಿವಾರಿಸುವ ಗೋಜಿಗೆ ಹೋಗದೆ ಸುಮ್ಮನಿದ್ದಾರೆ.

ಓಬಿರಾಯನ ಕಾಲದ ವಸತಿಗೃಹ:

70 ವರ್ಷಗಳ ಹಿಂದೆ ನಿರ್ಮಿಸಿರುವ ವಸತಿ ಗೃಹಗಳು ಕಾಲಕ್ಕೆ ಸಿಕ್ಕು ನಲುಗಿವೆ. ಸುಣ್ಣ-ಬಣ್ಣ ಕಂಡು ಎಷ್ಟೋ ವರ್ಷಗಳಾಗಿವೆ. ಕಿಟಕಿಗಳು ಕಳ್ಳಕಾಕರ ಪಾಲಾಗಿವೆ. ಮನೆಯೊಳಗೆ ಗಿಡ-ಗಂಟಿ ಬೆಳೆದು ವಿಷಜಂತುಗಳ ತಾಣವಾಗಿ ಮಾರ್ಪಟ್ಟಿದ್ದು ಸಿಬ್ಬಂದಿ ಅಲ್ಲಿ ಹೋಗಲು ಭಯಪಡುತ್ತಿದ್ದಾರೆ. ಸುಸಜ್ಜಿತ ವಸತಿ ಸೌಲಭ್ಯವಿಲ್ಲದ ಕಾರಣ ತಾಪಂ ಸಿಬ್ಬಂದಿ ವಸತಿ ಗೃಹ ತೋರೆದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಈ ವಸತಿ ಗೃಹಗಳ ಮಾರ್ಗದಲ್ಲಿಯೇ ಸಚಿವರು, ಶಾಸಕರು, ಅಧಿಕಾರಿಗಳು ತೆರಳಿದರೂ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳದೆ ಇರುವುದು ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಸಿಬ್ಬಂದಿಗಳ ವಸತಿ ಗೃಹ ಶಿಥಿಲಗೊಂಡಿದ್ದು ವಸತಿ ಸೌಕರ್ಯ ದೊರೆತಿಲ್ಲ. ತಾಲೂಕು ಪಂಚಾಯಿತಿ ಕಟ್ಟಡ ಬಹಳ ಹಳೆಯದಾಗಿದ್ದು, ಹೊಸ ಪಂಚಾಯಿತಿ ಕಟ್ಟಡ ಮತ್ತು ಸಿಬ್ಬಂದಿಗಳ ವಸತಿ ಸೌಕರ್ಯಗಳ ಬಗ್ಗೆ ಸರ್ಕಾರಕ್ಕೆ ಅಂದಾಜು ಪಟ್ಟಿ ಜತೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ರಾಮರೆಡ್ಡಿ ತಾಪಂ ಇಒ ಗಂಗಾವತಿತಾಲೂಕು ಪಂಚಾಯಿತಿಯಲ್ಲಿ ಕೆಲಸ ಮಾಡುವವರಿಗೆ ಸರಿಯಾದ ರೀತಿಯಲ್ಲಿ ವಸತಿಗಳು ಇಲ್ಲ. ಕೆಲವು ವಸತಿಗಳಿದ್ದರೂ ಸಹ ಮನೆಯ ಮೇಲೆ ಗಿಡ-ಮರ ಬೆಳೆದು ಮನೆಯೊಳಗೆ ಬೇರು ಬಿಟ್ಟಿವೆ. ಹಾವು-ಚೇಳುಗಳ ಕಾಟ ಸಾಕಾಗಿದೆ. ಮನೆಗಳು ಶಿಥಿಲಗೊಂಡಿವೆ.

ತಾಲೂಕು ಪಂಚಾಯಿತಿ ಸಿಬ್ಬಂದಿ