ಕನ್ನಡಪ್ರಭ ವಾರ್ತೆ ಕುಣಿಗಲ್ ಸೇನೆಯಲ್ಲಿ 38 ವರ್ಷ ಸಾರ್ಥಕ ಸೇವೆ ಮಾಡಿದ್ದು ಇನ್ನು ಮುಂದೆ ಯುವ ಜನತೆಯನ್ನು ಸೇನೆಗೆ ಆಕರ್ಷಿಸುವ ಸಲುವಾಗಿ ಸೇವೆ ಮಾಡುವುದಾಗಿ ಭಾರತೀಯ ಗಡಿ ಭದ್ರತಾ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ವೀರ ಯೋಧ ದೇವರಾಜ ಗೌಡ ತಿಳಿಸಿದ್ದಾರೆ. ಸೇವೆಯಿಂದ ನಿವೃತ್ತಿ ಪಡೆದ ಅಧಿಕಾರಿಗೆ ಕುಣಿಗಲ್‌ ನಿವೃತ್ತ ಯೋಧರ ಸಂಘ, ಹಾಗೂ ಸ್ಥಳಿಯರು ಏರ್ಪಡಿಸಿದ್ದ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಸೇನೆಯಲ್ಲಿ ವಿವಿಧ ಹಂತಗಳಲ್ಲಿ ಹಾಗೂ ವಿವಿಧ ಆಯಾಮದ ಜೊತೆಗೆ ಸೇವೆ ಸಲ್ಲಿಸಿ ಇಂದು ನಿವೃತ್ತ ಇನ್ಸ್‌ಪೆಕ್ಟರ್ ಆಗಿದ್ದೇನೆ ನನ್ನ ಕರ್ತವ್ಯ ಸಮಯದಲ್ಲಿ ಸಹಕಾರ ನೀಡಿದ ಅಧಿಕಾರಿಗಳು ಹಾಗೂ ಪ್ರತಿಯೊಂದು ವಿಭಾಗದ ಎಲ್ಲರಿಗೂ ಕೂಡ ಅಭಿನಂದಿಸುತ್ತೇನೆ. ಮುಂದಿನ ಜೀವನವನ್ನು ಈ ಸಮಾಜದ ಒಳಿತಿಗಾಗಿ ದೇಶದ ಭದ್ರತೆಗಾಗಿ ಹಾಗೂ ಯುವಕರಿಗೆ ಸೇನೆಗೆ ಸೇರುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆ ಮಾರ್ಗದರ್ಶನ ಇವುಗಳನ್ನು ನೀಡುತ್ತಾ ನನ್ನ ಜೀವನದ ಸಾರ್ಥಕತೆ ಕಾಣುತ್ತೇನೆ ಎಂದರು. ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟಗಳಲ್ಲಿ ನಿವೃತ್ತಿ ಯೋಧರ ಕಚೇರಿಗಳನ್ನು ಪ್ರಾರಂಭಿಸಿ ಸ್ಥಳೀಯ ಯುವಕರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡುವ ಕಾರ್ಯಕ್ಕೆ ಮುಂದಾಗಲು ಬಯಸಿದ್ದೇನೆ. ಕುಣಿಗಲ್ ತಾಲೂಕಿನ ಸಾರ್ವಜನಿಕರು ನನಗೆ ನೀಡಿದ ಈ ಅದ್ದೂರಿ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದ ಋಣವನ್ನು ನಾನು ತೀರಿಸಲು ಸಾಧ್ಯವಿಲ್ಲ ಈ ಮಣ್ಣಿನಲ್ಲಿ ಹುಟ್ಟಿದ ನನಗೆ ಸಂತಸ ತೃಪ್ತಿ ಇದೆ ಎಂದರು. ಪಟ್ಟಣದ ಜಿ ಕೆ ಬಿ ಎಂ ಎಸ್ ಮೈದಾನದಲ್ಲಿ ಸೇನೆಯ ಬ್ಯಾಂಡ್ ಸೆಟ್ ಮುಖಾಂತರ ಗೌರವ ಸೂಚಕವನ್ನು ನೀಡಲಾಯಿತು. ಗ್ರಾಮಸ್ಥರು ಸಾರ್ವಜನಿಕರು ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ನಿವೃತ್ತ ಸೇನಾ ಇನ್ಸ್‌ಪೆಕ್ಟರ್ ರವರಿಗೆ ಹಾರ ಹಾಕಿ ಶಾಲು ಹೊದಿಸಿ ಹಣ್ಣು ನೀಡಿ ಗೌರವಿಸಿದರು. ನಂತರ ಹಲವಾರು ಬೈಕ್ ಕಾರುಗಳ ಮುಖಾಂತರ ಕುಣಿಗಲ್ ಪಟ್ಟಣದ ಬೀದಿಗಳಲ್ಲಿ ಪಥ ಸಂಚಲನ ನಡೆಸುವುದರ ಜೊತೆಗೆ ತೆರೆದ ವಾಹನದಲ್ಲಿ ನಿವೃತ್ತ ಸೇನಾಧಿಕಾರಿಗಳನ್ನು ಮೆರವಣಿಗೆ ಮಾಡಿ ಅಭಿನಂದಿಸಲಾಯಿತು. ಮೆರವಣಿಗೆಯ ನಂತರ ತಮ್ಮ ಹುಟ್ಟೂರಾದ ಶೆಟ್ಟಿಗೆರೆಯಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಸೇರಿದಂತೆ ಪಠ್ಯ ಸಾಮಗ್ರಿಗಳನ್ನು ತಮ್ಮ ನಿವೃತ್ತಿ ಜೀವನದ ನೆನಪಿಗಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಸೇನಾ ವೈದ್ಯಾಧಿಕಾರಿಗಳಾದ ಹೇಮಂತ್ ರಾಜ್ ಎಸ್ ಎಲ್, ಕುಣಿಗಲ್ ಸಿಪಿಐ ಮಾಧ್ಯನಾಯಕ್ ನಿವೃತ್ತ ಅಧಿಕಾರಿಗಳಾದ ಗುರುಮೂರ್ತಿ,ನಾಗರಾಜ್ ಸೇರಿದಂತೆ ಹಲವಾರು ಗ್ರಾಮಸ್ಥರು ಅಧಿಕಾರಿಗಳು ಇದ್ದರು.