ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ಭಕ್ತಿ ಹಾಗೂ ಸಂತಸ ಸಡಗರದಿಂದ ಆಚರಿಸಲಾಯಿತು.ನಗರದ ಕೋಟೆಕೇರಿ, ನಡುವಲಪೇಟೆ, ಮರಾಠಗಲ್ಲಿ, ಪೇಟೆ ಆಂಜನೇಯ ದೇವಸ್ಥಾನ, ಶಿಬಾರ ಕೇರಿ, ಬರಂಪುರ ಸೇರಿದಂತೆ ಹಲವು ಕಡೆ ಬಣ್ಣಗಳ ಸಂಭ್ರಮ ಮನೆಮಾಡಿತು. ಮಕ್ಕಳು, ಯುವಕರು, ಯುವತಿಯರು ಹಾಗೂ ಮಹಿಳೆಯರು ಪರಸ್ಪರ ಗುಲಾಬಿ, ಹಸಿರು, ನೀಲಿ, ಹಳದಿ ಸೇರಿದಂತೆ ವಿವಿಧ ಬಣ್ಣಗಳನ್ನು ಎರಚಿ ಹಬ್ಬಕ್ಕೆ ರಂಗು ತುಂಬಿದರು.
ಕೆಲವೆಡೆ ಡಿಜೆ ಸಂಗೀತದ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ನೀರಿನ ಕಾರಂಜಿಗಳ ನಡುವೆ ನೃತ್ಯ ಮಾಡಿ ಹಬ್ಬದ ಉತ್ಸಾಹಕ್ಕೆ ಕಳೆ ನೀಡಿದರು. ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಶಾಂತಿಯುತವಾಗಿ ಹೋಳಿ ಆಚರಣೆ ನಡೆಯಿತು.ಹಬ್ಬದ ಅಂಗವಾಗಿ ಹಿಂದಿನ ದಿನ ವಿವಿಧ ಬಡಾವಣೆಗಳಲ್ಲಿ ಸಂಪ್ರದಾಯಬದ್ಧವಾಗಿ ಕಾಮ ದಹನ ನೆರವೇರಿಸಲಾಯಿತು. ಹಬ್ಬದ ಪ್ರಯುಕ್ತ ಮಂಗಳವಾರ ರಾತ್ರಿ ಅದ್ದೂರಿಯಾಗಿ ಕಾಮ ದಹನ ನಡೆಯಿತು. ನಗರದ ನಡುವಲ ಪೇಟೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಪೂಜೆಗಳ ಮೂಲಕ ರತಿ ಹಾಗೂ ಕಾಮಣ್ಣರ ಪ್ರತಿಮೆ ಪ್ರತಿಷ್ಠಾಪನಾ ಕಾರ್ಯ ಸಂಭ್ರಮ ಭಕ್ತಿಭಾವ ಮತ್ತು ಸಾಂಪ್ರದಾಯಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.
ನಗರದ ಪ್ರಮುಖ ವೃತ್ತಗಳಲ್ಲಿ ರತಿ ಕಾಮಣ್ಣರ ಭಾವ ಚಿತ್ರಕ್ಕೆ ಭಕ್ತರು ಸಾಮೂಹಿವಾಗಿ ಸೇರಿ ಪೂಜೆ ಸಲ್ಲಿಸಿ, ಕಾಮನ ದಹನದ ಮೂಲಕ ಕೆಟ್ಟದ್ದರ ವಿರುದ್ದ ವಿಜಯದ ಸಂಕೇತವನ್ನು ಸಾರಿದರು.
ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದ ಕಾಮ ದಹನಕ್ಕೆ ಶಾಸಕ ಬಿ.ಪಿ. ಹರೀಶ್ ಶಾಸ್ತ್ರೊಹಕವಾಗಿ ಪೂಜೆ ಸಲ್ಲಿಸಿ ಕಾಮ ದಹನಕ್ಕೆ ಚಾಲನೆ ನೀಡಿದರು. ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ ಜತೆಗೆ ಸಹಕಾರ ನೀಡಿದರು. ಅಂತೆಯೆ ನಗರದ ವಿವಿದೆಡೆ ತೆರಳಿ ಕಾಮ ದಹನಕ್ಕೆ ಚಾಲನೆ ನೀಡಿದರು.
ಯುವಕರ ಜಯಘೋಷಗಳ ನಡುವೆ ಕಾಮನ ಮೂರ್ತಿಗೆ ಅಗ್ನಿ ಹಚ್ಚಿ ಸಂಪ್ರದಾಯ ಬದ್ಧವಾಗಿ ದಹನ ಕಾರ್ಯಕ್ರಮ ನಡೆಸಲಾಯಿತು. ಹಲವೆಡೆ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು.