ಮನೆಯ ದೀಪವನ್ನೇ ನಂದಿಸಿದ ವಿಧಿಯಾಟ!

| Published : Oct 08 2025, 01:01 AM IST

ಸಾರಾಂಶ

ಸೋಮವಾರ ತಡರಾತ್ರಿ ಕೊಪ್ಪಳ ಜಿಲ್ಲೆಯ ಕುಕನಪಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಪಾದಯಾತ್ರಿಗಳ ಮೇಲೆ ಖಾಸಗಿ ಬಸ್‌ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟವರೆಲ್ಲವರು ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರು.

ಗದಗ: ಮಂಗಳವಾರ ರೋಣ ತಾಲೂಕಿನ ತಳ್ಳಿಹಾಳ ಗ್ರಾಮವಿಡೀ ನೀರವ ಮೌನದಿಂದ ಕೂಡಿತ್ತು. ಗ್ರಾಮವಿಡೀ ಶೋಕಸಾಗರದಲ್ಲಿ ಮುಳುಗಿತ್ತು. ಇನ್ನೊಂದೆಡೆ ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.

ಸೋಮವಾರ ತಡರಾತ್ರಿ ಕೊಪ್ಪಳ ಜಿಲ್ಲೆಯ ಕುಕನಪಳ್ಳಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಪಾದಯಾತ್ರಿಗಳ ಮೇಲೆ ಖಾಸಗಿ ಬಸ್‌ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟವರೆಲ್ಲವರು ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರು.

ಅನ್ನಪೂರ್ಣ(40), ಪ್ರಕಾಶ (25) ಹಾಗೂ ಶರಣಪ್ಪ(19) ಮೃತಪಟ್ಟ ನತದೃಷ್ಟ ಪಾದಯಾತ್ರಿಗಳು.

ದುರ್ಘಟನೆಯು ಕೇವಲ ಮೂರು ಜೀವಗಳನ್ನು ಬಲಿ ಪಡೆದಿಲ್ಲ; ಬದಲಿಗೆ ಅವರ ಆಪ್ತರ ಬದುಕಿನ ಆಧಾರವನ್ನೇ ಕಳಚಿ ಹಾಕಿದೆ ಎಂದು ಗ್ರಾಮಸ್ಥರು ದುಃಖ ವ್ಯಕ್ತಪಡಿಸಿದರು.

ಕನಸು ಭಸ್ಮ: ತನ್ನೊಬ್ಬ ಮಗನೇ ಮನೆಗೆ ದೀಪ, ಆಧಾರಸ್ತಂಭ ಎಂದು ನಂಬಿದ್ದ ತಾಯಿ ರೇಣವ್ವ ಮಾಡಲಗೇರಿ ಅವರ ಕನಸುಗಳು ಕಣ್ಮುಂದೆಯೇ ಸುಟ್ಟು ಭಸ್ಮವಾಗಿವೆ. ಅಪಘಾತದಲ್ಲಿ ಅಸುನೀಗಿದ ಪುತ್ರ ಪ್ರಕಾಶ ಮಾಡಲಗೇರಿ (23)ಯ ಮೃತದೇಹದ ಬಳಿ ತಾಯಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

​ಯಾಕಿಂಗ್ ಮಾಡಿದಿ ದೇವ್ರೆ, ನಿನಗ್ ನಾವೇನ ಅನ್ಯಾಯ ಮಾಡಿದ್ವಿ.! ಇದ್ದೊಬ್ಬ ಮಗನ್ ಕಿತ್ತುಕೊಳ್ಳಾಕ್ ಮನಸ್ಸಾದ್ರು ಹೇಂಗ್ ಬಂತು ದೇವ್ರೆ? ಎಂದು ಅವರು ನೆಲಕ್ಕೆ ಒರಗಿ, ಮಗನ ದೇಹವನ್ನು ಬಿಗಿದಪ್ಪಿ ಅಳುತ್ತಿದ್ದ ನೋವು ಎದೆ ಹಿಂಡುವಂತಿತ್ತು. ಇದ್ದೊಬ್ಬ ಮಗನ್ ಕಳ್ಕೊಂಡು ಮನೆದೀಪ ಆರಿದಂಗಾತು ಎಂದು ರೋದಿಸುತ್ತಿದ್ದ ರೇಣವ್ವ ಅವರ ಹೃದಯಭಾರವನ್ನು ತಡೆಯಲು ಅಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಒಂದು ಕಡೆ ಮಗನನ್ನು ಕಳೆದುಕೊಂಡ ದುಃಖ, ಇನ್ನೊಂದು ಕಡೆ ಬದುಕಿನ ಆಧಾರ ಕಳಚಿದ ಆತಂಕ ಆ ತಾಯಿಯನ್ನು ಮಾನಸಿಕವಾಗಿ ಜರ್ಝರಿತಗೊಳಿಸಿತ್ತು.

​ತಾಯಿ- ಮಗ ಬಲಿ: ​ಇದೇ ದುರಂತದಲ್ಲಿ ಮತ್ತೊಂದು ಕುಟುಂಬವೂ ನಲುಗಿದೆ. ತಾಯಿ ಅನ್ನಪೂರ್ಣ ಮ್ಯಾಗೇರಿ ಮತ್ತು ಮಗ ಶರಣಪ್ಪ ಕ. ಮ್ಯಾಗೇರಿ ಕೂಡಾ ಅಪಘಾತದಲ್ಲಿ ಬಲಿಯಾಗಿದ್ದಾರೆ. ಹೆಂಡತಿ ಮತ್ತು ಮಗ ಇಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ಕಳಕಪ್ಪ ಅವರ ರೋದನ ಅಲ್ಲಿದ್ದವರ ಕಣ್ಣಂಚನ್ನೂ ಒದ್ದೆ ಮಾಡಿತು.

ಅಕಾಲಿಕ ಸಾವು ಕೇವಲ ಒಂದು ಅಪಘಾತದ ಸಂಖ್ಯೆಯಾಗಿ ಉಳಿಯುವುದಿಲ್ಲ. ಅದು ಒಂದು ಕುಟುಂಬದ ಭವಿಷ್ಯವನ್ನೇ ಸಂಪೂರ್ಣವಾಗಿ ಬದಲಾಯಿಸಿ ಬಿಡುತ್ತದೆ. ಪ್ರಕಾಶ ಮತ್ತು ಶರಣಪ್ಪ ಇಲ್ಲದ ಮನೆಯಲ್ಲಿ ಈಗ ಬರೀ ಮೌನ ಮತ್ತು ನೋವು ಮನೆ ಮಾಡಿದೆ. ಬದುಕಿನ ಆಧಾರಸ್ತಂಭಗಳನ್ನೇ ಕಳೆದುಕೊಂಡ ಈ ಕುಟುಂಬಗಳಿಗೆ ಸಾಂತ್ವನ ಹೇಳುವವರು ಇಲ್ಲದಂತಾಗಿದೆ.

ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ಸೇರಿದ್ದರಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತ್ತು. ಕುಟುಂಬಸ್ಥರ ಆಕ್ರಂದನದ ಮಧ್ಯೆ ಮಂಗಳವಾರ ಸಂಜೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ಜರುಗಿತು.