ಸಾರಾಂಶ
ಬಡಿಗೇರ ಹಳ್ಳದಲ್ಲಿ ಸತತವಾಗಿ ನೀರು ಹರಿಯುತ್ತದೆ. ಹೀಗಾಗಿ ಹಳ್ಳಕ್ಕೆ ಹೊದಿಸಿದ ಕಲ್ಲು ಕಿತ್ತು ಹೋಗಿದ್ದರಿಂದ ಬಸ್, ರೈತರ ಚಕ್ಕಡಿ, ಟ್ರ್ಯಾಕ್ಟರ್ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ.
ಈಶ್ವರ ಜಿ. ಲಕ್ಕುಂಡಿ
ನವಲಗುಂದ:ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರದಿಂದ ಹಳ್ಳಿಕೇರಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹದಗೆಟ್ಟ ಕಾರಣ ಒಂದು ವರ್ಷದಿಂದ ಈ ರಸ್ತೆಯಲ್ಲಿ ಸಾರಿಗೆ ಬಸ್ ಸಂಚರಿಸಿಯೇ ಇಲ್ಲ.
ಮಳೆ ಅಥವಾ ಕಾಲುವೆ ನೀರು ಹೆಚ್ಚಾಗಿ ಹರಿದು ಹಳ್ಳಕ್ಕೆ ಸೇರುವುದರಿಂದ ಇಬ್ರಾಹಿಂಪುರದಿಂದ ಹಳ್ಳಿಕೇರಿಗೆ ಹೋಗುವ ರಸ್ತೆಯ ಬಡಿಗೇರ ಹಳ್ಳದಲ್ಲಿ ಸತತವಾಗಿ ನೀರು ಹರಿಯುತ್ತದೆ. ಹೀಗಾಗಿ ಹಳ್ಳಕ್ಕೆ ಹೊದಿಸಿದ ಕಲ್ಲು ಕಿತ್ತು ಹೋಗಿದ್ದರಿಂದ ಬಸ್, ರೈತರ ಚಕ್ಕಡಿ, ಟ್ರ್ಯಾಕ್ಟರ್ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೂ ರೈತರು ದೈನಂದಿನ ಕೃಷಿ ಚಟುವಟಿಕೆಗೆ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಅದೇ ರೀತಿ ನಾಗರಹಳ್ಳ ಸಹ ತುಂಬಿ ಹರಿಯುವುದರಿಂದ ಡಾಂಬರ್ ಸಂಪೂರ್ಣ ಕಿತ್ತು ದೊಡ್ಡ ಕಂದಕಗಳು ನಿರ್ಮಾಣವಾಗಿವೆ.ಜನರಿಗೆ ತೊಂದರೆ:
ವರ್ಷದ ಹಿಂದೆ ನವಲಗುಂದ-ಇಬ್ರಾಹಿಂಪುರ ಮಾರ್ಗವಾಗಿ ಹಳ್ಳಿಕೇರಿಯಿಂದ ಅಣ್ಣಿಗೇರಿಗೆ ಗಂಟೆಗೊಂದು ಬಸ್ ಸಂಚರಿಸುತ್ತಿದ್ದವು. ಇದೀಗ ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಜನರಿಗೆ ತೊಂದರೆಯಾಗಿದೆ. ಇಬ್ರಾಹಿಂಪುರ ಹಳ್ಳಿಕೇರಿ ಮಾರ್ಗವಾಗಿ ಅಣ್ಣಿಗೇರಿಗೆ ತೆರಳಲು ₹ 20 ವ್ಯಯಿಸುತ್ತಿದ್ದ ಜನರು ಇದೀಗ, ಇಬ್ರಾಹಿಂಪುರ, ನಾವಳ್ಳಿ ಮಾರ್ಗವಾಗಿ ತೆರಳಲು ₹ 30 ವ್ಯಯಿಸುತ್ತಿದ್ದಾರೆ. ಹಣದೊಂದಿಗೆ ಸಮಯವೂ ವ್ಯರ್ಥವಾಗುತ್ತಿದೆ.ಸೇತುವೆ-ರಸ್ತೆ ನಿರ್ಮಿಸಿ:
ಬಡಿಗೇರ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಹಾಗೂ ನಾಗರಹಳ್ಳದ ನೀರು ಸುಗಮವಾಗಿ ಹರಿಯಲು ಹಳ್ಳವನ್ನು ಹೂಳೆತ್ತುವ ಮೂಲಕ ಸೇತುವೆ ನಿರ್ಮಿಸಿ ಸುಸಜ್ಜಿತ ರಸ್ತೆ ನಿರ್ಮಿಸಬೇಕೆಂದು ಈ ಭಾಗದ ಜನರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.ಕಳೆದ ತಿಂಗಳು ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಇದೀಗ ಶಾಸಕರು ಮೊರಂ ಹಾಕಿಸಿ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ. ಆದರೆ, ಇಬ್ರಾಹಿಂಪುರದಿಂದ ಹಳ್ಳಿಕೇರಿ ಸಂಪರ್ಕಿಸುವ ರಸ್ತೆಯಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಿಸಿ ಡಾಂಬರ್ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥ ಮಾಲತೇಶ ಹಂಡಿ ಹೇಳಿದ್ದಾರೆ. ರಸ್ತೆ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹಳ್ಳಿಕೇರಿ ರಸ್ತೆಗೂ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ರಸ್ತೆ ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಎಸ್.ಎನ್. ಸಿದ್ದಾಪುರ ತಿಳಿಸಿದ್ದಾರೆ.