ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ನಡೆದಿದ್ದ ರೌಡಿಶೀಟರ್ ಪವನ್ ಕುಮಾರ್ ಬರ್ಬರ ಹತ್ಯೆ ಪ್ರಕರಣ ಸಂಬಂಧ ಈಶಾನ್ಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 6 ಆರೋಪಿಗಳನ್ನು ಬಂಧಿಸಿದ್ದು, ಈ ಪೈಕಿ ಆರೋಪಿಯೊಬ್ಬನ ಕಾಲಿಗೆ ಗುಂಡೇಟಿನ ರುಚಿ ತೋರಿಸಿ ಸೆರೆ ಹಿಡಿದಿದ್ದಾರೆ.ರಂಜಿತ್, ಪ್ರೇಮ್, ಕಾರ್ತಿಕ್, ಪ್ರವೀಣ್ ಕುಮಾರ್, ಅರುಣ್ ಮತ್ತು ವೇಲು ಬಂಧಿತರು. ಪವನ್ ಕುಮಾರ್ (28) ಕೊಲೆಯಾದವನು.
ಮಡಿವಾಳ ಠಾಣೆ ರೌಡಿಶೀಟರ್ ರಂಜಿತ್ (31) ಎಂಬಾತನ ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನಿಂದ ಹಲ್ಲೆಗೊಳಗಾಗಿದ್ದ ಈಶಾನ್ಯ ವಿಭಾಗದ ಮಹಿಳಾ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ವೆಂಕಟೇಶ್, ಸಂಪಿಗೆಹಳ್ಳಿ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹನುಮಂತ ಬಿದರಹಳ್ಳಿ, ಕಾನ್‌ಸ್ಟೇಬಲ್ ಶಂಕರಪ್ಪ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದೇ ವೇಳೆ ರೌಡಿಶೀಟರ್ ರಂಜಿತ್‌ನ ಸಹಚರರಾದ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಂಧಿತ ಆರೋಪಿಗಳು ಫೆ.25 ರಂದು ರೌಡಿಶೀಟರ್ ಪವನ್ ಕುಮಾರ್‌ನನ್ನು ಆತನ ಮನೆ ಬಳಿ ತಾಯಿ ಎದುರೇ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ರಂಜಿತ್ ಸೇರಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿ ಮೇರೆಗೆ ಶನಿವಾರ ಬೆಳಗ್ಗೆ ಬಾಗಲೂರಿನ ಮೀಟಗಾನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಅಡಗಿಕೊಂಡಿದ್ದ ಆರೋಪಿ ರಂಜಿತ್‌ನನ್ನು ಬಂಧಿಸಲು ಪೊಲೀಸರ ತಂಡ ತೆರಳಿತ್ತು. ಆಗ ಪೊಲೀಸರ ಕಂಡ ಆರೋಪಿ ಏಕಾಏಕಿ ಮಾರಕಾಸ್ತ್ರದಿಂದ ಪಿಐ ವೆಂಕಟೇಶ್ ಮತ್ತು ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪಿಐ ವೆಂಕಟೇಶ್ ಆತ್ಮರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಿದ್ದಾರೆ. ಆದರೂ ಆರೋಪಿ ಮತ್ತೆ ದಾಳಿ ನಡೆಸಿದಾಗ ಆರೋಪಿಯ ಬಲಗಾಲಿಗೆ ಗುಂಡು ಹೊಡೆದಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
8 ತಿಂಗಳ ಹಿಂದೆ ಜೈಲಿಂದ ಬಂದಿದ್ದ
ಆರೋಪಿ ಪ್ರೇಮ್ ಸಹೋದರ ಕಪಿಲ್ ಎಂಬಾತನನ್ನು 3 ವರ್ಷಗಳ ಹಿಂದೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪವನ್ ಕುಮಾರ್ ಭಾಗಿಯಾಗಿದ್ದ. ಹೀಗಾಗಿ ಈತನ ಕೊಲೆ ಮಾಡಲು ಪ್ರೇಮ್ ಮತ್ತು ಆತನ ತಂಡ ಕಾಯುತ್ತಿತ್ತು. 8 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಪವನ್ ಕುಮಾರ್‌ಗೆ ಕುಟುಂಬ ಸದಸ್ಯರು ಮನೆ ಬಳಿಯೇ ಬೇಕರಿ ಇಟ್ಟುಕೊಟ್ಟಿದ್ದರು. ಆದರೆ, ಫೆ.25ರಂದು ರಾತ್ರಿ ಥಣಿಸಂದ್ರ ಸಮೀಪದ ಅಮರಜ್ಯೋತಿ ಲೇಔಟ್‌ನಲ್ಲಿ ಬೇಕರಿ ಬಾಗಿಲು ಹಾಕಿಕೊಂಡು ಮನೆಗೆ ಬರುತ್ತಿದ್ದ ಪವನ್ ಕುಮಾರ್‌ನನ್ನು ಆತನ ಮನೆ ಮುಂದೆಯೇ ಅಡ್ಡಗಟ್ಟಿದ ಆರೋಪಿಗಳು, ತಾಯಿ ಎದುರು ಮನಸೋ ಇಚ್ಛೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದರು.