ದೀಪಾವಳಿಗೆ ಪ್ಲಾಸ್ಟಿಕ್‌ ಹೂವಿನ ಹಾರಗಳ ಭರಾಟೆ

| Published : Oct 31 2024, 12:47 AM IST

ಸಾರಾಂಶ

ಪ್ಲಾಸ್ಟಿಕ್‌ ಹೂವುಗಳು ನೈಜ ಹೂವಿಗಿಂತಲೂ ನೋಡಲು ಸುಂದರವಾಗಿವೆ. ಜತೆಗೆ ಒಂದು ಬಾರಿ ಖರೀದಿಸಿದರೆ ಹಬ್ಬದ ವೇಳೆ ಹಾಕಿ ಮರಳಿ ಕಾಯ್ದಿಟ್ಟುಕೊಂಡರೆ ಬೇರೆ ಹಬ್ಬಗಳಿಗೂ ಇದೇ ಹೂವುಗಳನ್ನು ಬಳಸಬಹುದಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ದೀಪಾವಳಿ ಹಬ್ಬದ ಮೆರಗು ಹೆಚ್ಚಿಸಲು ನಗರಕ್ಕೆ ಪ್ಲಾಸ್ಟಿಕ್‌ ಹೂಗಳು ಲಗ್ಗೆ ಇಟ್ಟಿವೆ. ನಗರದ ಜನನಿಬಿಡ ಪ್ರದೇಶ, ಪ್ರಮುಖ ವೃತ್ತ, ರಸ್ತೆಗಳ ಪುಟ್‌ಪಾತ್‌ ಮೇಲೆ ಕಳೆದ 8-10 ದಿನಗಳಿಂದ ಪ್ಲಾಸ್ಟಿಕ್‌ ಹೂವಿನ ಹಾರಗಳ ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ.

ದೀಪಾವಳಿ ಹಿಂದೂಗಳ ಪಾಲಿಗೆ ಪವಿತ್ರವಾದ ಹಬ್ಬ. ಬಡವರಿಂದ ಹಿಡಿದು ಶ್ರೀಮಂತರಾದಿಯಾಗಿ ಎಲ್ಲರೂ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹಬ್ಬದ ರಂಗು ಹೆಚ್ಚಿಸುವುದು ಸಾಮಾನ್ಯ. ಇಂತಹ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಹೂವಿನ ಹಾರಗಳ ಖರೀದಿ ಭರಾಟೆ ಜೋರಾಗಿದೆ.

ಬೆಲೆ ಏರಿಕೆ ಬಿಸಿ:

ಕಳೆದ ಕೆಲವು ದಿನಗಳ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೆಳೆದಿದ್ದ ವಿವಿಧ ಬಗೆಯ ಹೂವಿನ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ನೈಜ ಹೂವುಗಳ ಬೆಲೆ ಕೊಂಚ ಏರಿಕೆಯನ್ನೇ ಕಂಡಿದೆ. ಹೀಗಾಗಿ ಗ್ರಾಹಕರು ಪ್ಲಾಸ್ಟಿಕ್‌ ಹೂವುಗಳ ಮೊರೆಹೋಗಿದ್ದಾರೆ.

ದೀರ್ಘ ಬಾಳಿಕೆ:

ಪ್ಲಾಸ್ಟಿಕ್‌ ಹೂವುಗಳು ನೈಜ ಹೂವಿಗಿಂತಲೂ ನೋಡಲು ಸುಂದರವಾಗಿವೆ. ಸಾಮಾನ್ಯವಾಗಿ ಬೃಹತ್‌ ಮಳಿಗೆ, ಅಂಗಡಿ, ಮಾಲ್‌ಗಳನ್ನು ಶೃಂಗರಿಸಲು ಪ್ಲಾಸ್ಟಿಕ್‌ ಹೂವು ಬಳಸಲಾಗುತ್ತದೆ. ಒಂದು ಬಾರಿ ಖರೀದಿಸಿದರೆ ಹಬ್ಬದ ವೇಳೆ ಹಾಕಿ ಮರಳಿ ಕಾಯ್ದಿಟ್ಟುಕೊಂಡರೆ ಬೇರೆ ಹಬ್ಬಗಳಿಗೂ ಇದೇ ಹೂವುಗಳನ್ನು ಬಳಸಬಹುದಾಗಿದೆ. ಹಾಗಾಗಿ ಸಾಮಾನ್ಯವಾಗಿ ಈ ಪ್ಲಾಸ್ಟಿಕ್‌ ಹೂವುಗಳೇ ಈ ಬಾರಿ ಹೆಚ್ಚಿನ ರೀತಿಯಲ್ಲಿ ಮಾರಾಟವಾಗುತ್ತಿವೆ.

ಎಲ್ಲೆಲ್ಲಿ ಮಾರಾಟ?:

ಕಳೆದೊಂದು ವಾರದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರಾದ್ಯಂತ ಈ ಪ್ಲಾಸ್ಟಿಕ್‌ ಹೂವುಗಳ ಮಾರಾಟ ಕಾಣಸಿಗುತ್ತಿದೆ. ಹುಬ್ಬಳ್ಳಿಯ ಪ್ರಮುಖ ಜನನಿಬಿಡ ಪ್ರದೇಶವಾಗಿರುವ ದುರ್ಗದಬೈಲ್‌ ಶಾಹ ಬಜಾರ್‌ ಎದುರು ಈ ಬಾರಿ ಹೆಜ್ಜೆಗೊಂದು ಪ್ಲಾಸ್ಟಿಕ್‌ ಹೂವಿನ ಹಾರ, ಬಗೆಬಗೆಯ ಹೂವುಗಳ ಮಾರಾಟ ಮಾಡುವವರು ಕಾಣುತ್ತಿದ್ದಾರೆ. ಅದರೊಂದಿಗೆ ರಾಣಿ ಚೆನ್ನಮ್ಮ ವೃತ್ತದ ಸುತ್ತಲೂ, ಜನತಾ ಬಜಾರ್, ಕೊಪ್ಪಿಕರ ರಸ್ತೆ, ಮ್ಯಾದಾರ ಓಣಿ, ಮೂರುಸಾವಿರ ಮಠದ ಮುಂಭಾಗ, ಸರ್ವೋದಯ ವೃತ್ತ, ವಿದ್ಯಾನಗರ, ಶಿರೂರ ಪಾರ್ಕ್‌ ರಸ್ತೆ, ಹೊಸೂರು ವೃತ್ತದ ಸುತ್ತಮುತ್ತ, ಉಣಕಲ್ಲ ಕ್ರಾಸ್‌, ಬಂಕಾಪುರ ಚೌಕ್ ಸುತ್ತಮುತ್ತ, ಹಳೇ ಹುಬ್ಬಳ್ಳಿ, ನವನಗರ, ಎನ್‌ಟಿಟಿಎಫ್‌, ಜುಬ್ಲಿ ವೃತ್ತ, ಧಾರವಾಡ ಬಸ್‌ ನಿಲ್ದಾಣ, ಕೋರ್ಟ್‌ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಬಗೆಬಗೆಯ ಪ್ಲಾಸ್ಟಿಕ್‌ ಹೂವುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ನೈಜ ಹೂವುಗಳನ್ನು ಮಾರಾಟ ಮಾಡುತ್ತಿದ್ದ ಹಲವರು ಸಂಕಷ್ಟ ಎದುರಿಸುವುದಂತೂ ಖಚಿತ.ಪ್ಲಾಸ್ಟಿಕ್‌ ಹೂವಿನ ಹಾರಗಳಿಂದ ನೈಜ ಹೂವು ಕೇಳುವವರೆ ಇಲ್ಲ. ಪ್ರತಿವರ್ಷದಂತೆ ಈ ವರ್ಷ ಹಬ್ಬದ ವ್ಯಾಪಾರವೇ ಆಗುತ್ತಿಲ್ಲ. ದೀರ್ಘಕಾಲದ ಬಾಳಿಕೆ ನಂಬಿ ಪ್ಲಾಸ್ಟಿಕ್‌ ಹೂವಿನ ಹಾರ ಖರೀಗಿಸುವವರೆ ಹೆಚ್ಚಾಗಿದೆ ಎಂದು ಹೂವಿನ ವ್ಯಾಪಾರಿ ನೀಲಮ್ಮ ರೋಣದ ಹೇಳಿದರು.ಅಂಗಡಿಯ ಶೃಂಗಾರಕ್ಕೆ ಹೆಚ್ಚಿನ ಪ್ರಮಾಣದ ಹೂವು ಬೇಕು. ಈ ಬಾರಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಹೂವಿನ ಹಾರಗಳನ್ನೇ ಹೆಚ್ಚಾಗಿ ಖರೀದಿಸುತ್ತಿದ್ದೇನೆ. ಹಬ್ಬ ಮುಗಿದ ಮೇಲೆ ಮತ್ತೆ ತೆಗೆದಿಟ್ಟರೆ ಮುಂದಿನ ಹಬ್ಬಕ್ಕೂ ಇದೇ ಹೂವುಗಳನ್ನು ಬಳಸಬಹುದಾಗಿದೆ ಎಂದು ಮನೋಹರ ರಾಯ್ಕರ ತಿಳಿಸಿದರು.ಕಳೆದ ಎರಡ್ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ಲಾಸ್ಟಿಕ್‌ ಹೂವಿನ ಹಾರ ಖರೀದಿಸುವವರ ದ್ವಿಗುಣವಾಗಿದೆ. ವಾರದಲ್ಲಿ ₹ 30 ಸಾವಿರಕ್ಕೂ ಅಧಿಕ ಮೌಲ್ಯದ ಹೂವಿನ ಹಾರಗಳನ್ನು ಮಾರಾಟ ಮಾಡಿದ್ದೇವೆ. ಹಬ್ಬದೊಳಗೆ ₹1 ಲಕ್ಷದ ಹೂವು ಮಾರಾಟ ಮಾಡುವ ನಿರೀಕ್ಷೆ ಇದೆ ಎಂದು ವ್ಯಾಪಾರಿ ಅಮೃತಾ, ಮನೋಹರಿ ಹೇಳಿದರು.