ಪ್ರತಿ ಜಿಲ್ಲೆಯಲ್ಲಿ ಬ್ರಾಹ್ಮಣ ಸಮಾಜದ ಶಾಲೆ ಪ್ರಾರಂಭವಾಗಲಿ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಮಾಜಿ ನಿರ್ದೇಶಕರಾದ ರಾಘವೇಂದ್ರ ಭಟ್ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪ್ರತಿ ಜಿಲ್ಲೆಯಲ್ಲಿ ಬ್ರಾಹ್ಮಣ ಸಮಾಜದ ಶಾಲೆ ಪ್ರಾರಂಭವಾಗಲಿ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಮಾಜಿ ನಿರ್ದೇಶಕರಾದ ರಾಘವೇಂದ್ರ ಭಟ್ ಅಭಿಪ್ರಾಯಪಟ್ಟರು.ತಾಲೂಕು ಬ್ರಾಹ್ಮಣ ಸೇವಾ ಸಂಘದಿಂದ ಗಾಯತ್ರಿ ಪ್ರತಿಪತ್ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಗಾಯತ್ರಿ ಮಾತೆಯ ರಾಜಬೀದಿ ಉತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಿನ ಕಾನ್ವೆಂಟ್‌ಗಳಲ್ಲಿ, ಹಿಂದೂ ಹಾಗೂ ಸನಾತನ ಧರ್ಮಕ್ಕೆ ಬೇಕಾಗಿರುವಂತಹ ಶಿಕ್ಷಣ ನೀಡುತ್ತಿಲ್ಲ, ಹಿಂದೂ ಧರ್ಮಕ್ಕೆ ಈಗಿನ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಆಘಾತವಾಗಿದೆ ಎಂದರು.ಬ್ರಿಟಿಷರ ಶಿಕ್ಷಣ ಪದ್ಧತಿ ನಮ್ಮ ಮೇಲೆ ಹೊರೆಸಿದ್ದಾರೆ, ಅದು ನಮ್ಮ ಧರ್ಮಕ್ಕೆ ಮಾರಕ. ಗುರುಕುಲ ಶಿಕ್ಷಣವನ್ನು ಮಠಮಾನ್ಯಗಳು ಉಳಿಸಿ ಶಾಶ್ವತವಾಗಿ ಇರುವಂತೆ ಮಾಡಿದ್ದಾರೆ, ಬ್ರಾಹ್ಮಣ ಸಮಾಜದ ಸಂಸ್ಕಾರ ಉಳಿಯಬೇಕಾದರೆ ತ್ರಿಕಾಲ ಸಂಧ್ಯಾವಂದನೆ ಮಾಡುವಂತೆ ಆಗಬೇಕು. ಶಾಲೆಗೆ ಹೋಗುವ ಮಕ್ಕಳು ದಿನಕ್ಕೆ ಒಂದು ಬಾರಿಯಾದರೂ ಸಂಧ್ಯಾವಂದನೆ ಮಾಡಿ ಹೋಗುವಂತೆ ಮನೆಯಲ್ಲಿರುವ ಮಾತೆಯರು ಮಕ್ಕಳಿಗೆ ತಿಳಿಸಬೇಕು ಎಂದರು.
ಸನಾತನ ಧರ್ಮದ ಸಂಘಟನೆ, ಸ್ವಾವಲಂಬನೆ, ಸಂಸ್ಕೃತಿಯನ್ನು ಉಳಿಸುತ್ತಿರುವುದು ನಮ್ಮ ಬ್ರಾಹ್ಮಣ ಸಂಘಟನೆಗಳು ಹಾಗೂ ಮಠಮಾನ್ಯಗಳು, ಸನಾತನ ಧರ್ಮದ ಬೇರು ನಮ್ಮ ವೈದಿಕ ಪರಂಪರೆ ಮತ್ತು ವೇದಗಳು ಹಾಗಾಗಿ ವೇದಗಳನ್ನು ಉಳಿಸುವಂತಹ ಕೆಲಸವಾಗಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬ್ರಾಹ್ಮಣ ಸಮಾಜ ಹೇಗಿತ್ತು ಎಂಬುದನ್ನು ಪುಸ್ತಕಗಳಲ್ಲಿ ಓದಿ ತಿಳಿಯುವಂತಹ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ತಾಲೂಕು ಬ್ರಾಹ್ಮಣ ಸೇವಾ ಸಂಘದಿಂದ ಶಿಕ್ಷಣ ಸಂಸ್ಥೆ ಪ್ರಾರಂಭವಾಗುವಂಥ ಶಕ್ತಿ ಗಾಯತ್ರಿ ಮಾತೆ ನೀಡಲಿ, ಶಂಕರಾಚಾರ್ಯರ ಹಾಗೂ ಆಚಾರ್ಯ ತ್ರಯರು ಅವತಾರ ಆಗದೇ ಇದ್ದಿದ್ದರೆ, ಭರತ ಭೂಮಿಯಲ್ಲಿ ಸನಾತನ ಹಿಂದೂ ಧರ್ಮ ಎಂದಿಗೂ ಉಳಿಯುತ್ತಿರಲಿಲ್ಲ. ಶೃಂಗೇರಿ ಉಭಯ ಜಗದ್ಗುರುಗಳು ಮಾರ್ಗದರ್ಶನವು ವರ್ಷಕ್ಕೆ ಒಮ್ಮೆಯಾದರೂ ಗಾಯತ್ರಿ ಹವನವನ್ನು ಪ್ರತಿ ತಾಲೂಕಿನಲ್ಲಿ ನಡೆಸಬೇಕು ಎಂಬುದನ್ನು ಶಿವಮೊಗ್ಗ ತಾಲೂಕು ಬ್ರಾಹ್ಮಣ ಸೇವಾ ಸಂಘ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುವುದು ಬಹಳ ಸಂತೋಷದ ವಿಚಾರ ಎಂದರು.
ಇದೇ ಸಂದರ್ಭದಲ್ಲಿ ವಿಪ್ರ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಂತಹ ರಾಯಚೂರು ಕೃಷ್ಣಚಾರ್, ವೇದ ಬ್ರಹ್ಮಶ್ರೀ ಚನ್ನಕೇಶವ ಅವಧಾನಿ, ಪತ್ರಕರ್ತರಾದ ಶ್ರೀರಾಮಚಂದ್ರ ವಿ ಗುಣಾರಿ, ಲಲಿತಾ ಮಾರುತಿ ಪ್ರಸಾದ್, ಡಾ. ಪ್ರಕಾಶ್, ಖ್ಯಾತ ಗಮಕಿಗಳಾದ ಶ್ರೀ ಪ್ರಸಾದ್ ಭಾರದ್ವಾಜ್ ಹಾಗೂ ರಿತೇಶ್ ಆರ್ ಮಳಲಿ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಘದ ಅಧ್ಯಕ್ಷರಾದ ಸುರೇಶ ನಾಡಿಗ ಅವರು ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಶ್ರೀ ರಘುರಾಮ್ , ಸರ್ ಎಂ ವಿ ಸೊಸೈಟಿಯ ಅಧ್ಯಕ್ಷರಾದ ಶುಭರಾಘವೇಂದ್ರ, ನವ್ಯಶ್ರೀ ನಾಗೇಶ್ ಡಾ. ಸುಧೀಂದ್ರ ಅವರು ಉಪಸ್ಥಿತರಿದ್ದರು.