ಸಾರಾಂಶ
ಗಂಗಾವತಿ:
ಹನುಮ ಜಯಂತಿ ಹಿನ್ನೆಲೆಯಲ್ಲಿ ತಾಲೂಕಿನ ಐಸಿಹಾಸಿಕ ಪ್ರಸಿದ್ಧ, ಹನುಮ ಜನಿಸಿದ ಅಂಜನಾದ್ರಿ ಬೆಟ್ಟಕ್ಕೆ ಶನಿವಾರ 20 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಾಲಾಧಾರಿಗಳು ಇದೇ ವೇಳೆ ಮಾಲೆ ವಿಸರ್ಜಿಸಿದರು.ಬೆಳಗ್ಗೆ 5 ಗಂಟೆಯಿಂದ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸಿದ ಆಂಜನೇಯಸ್ವಾಮಿಗೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಭಜನೆ, ಸಂಗೀತ ಕಾರ್ಯಕ್ರಮ ಹಾಗೂ ದೇಗುಲದ ಮುಂಭಾಗದಲ್ಲಿ ಪವಮಾನಹೋಮ ಜರುಗಿತು.
ಶಾಸಕರಿಂದ ವಿಶೇಷ ಪೂಜೆ:ಹನುಮ ಜಯಂತಿ ಅಂಗವಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಂಜನಾದ್ರಿ ಮೆಟ್ಟಿಲು ಏರಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದರ್ಶನ ಪಡೆದರು. ಅಂಜನಾದ್ರಿ ಬೆಟ್ಟ ಏರುತ್ತಿರುವ ಭಕ್ತರು ಜೈಶ್ರೀರಾಮ್, ಜೈ ಆಂಜನೇಯ, ಜೈ ಘೋಷಣೆ ಹಾಕಿದರು. ಭಕ್ತರು ಭಗವಾಧ್ವಜ ಕೈಯಲ್ಲಿ ಹಿಡುಕೊಂಡು ಮೆಟ್ಟಿಲು ಏರಿದರು.
ಅನ್ನಸಂತರ್ಪಣೆ:ಅಂಜನಾದ್ರಿಗೆ ಆಗಮಿಸಿ ಆಂಜನೇಯಸ್ವಾಮಿ ದರ್ಶನ ಪಡೆದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮುನಿರಾಬಾದ್ ರಸ್ತೆ ಮಾರ್ಗದಿಂದ ಬೆಟ್ಟಕ್ಕೆ ಬರುವ ಭಕ್ತರು ದರ್ಶನದ ನಂತರ ರಾಂಪುರ ಗ್ರಾಮದಿಂದ ತೆರಳಲು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇಗುಲದ ಆವರಣವನ್ನು ವಿದ್ಯುತ್ ದೀಪಗಳ ಅಲಂಕರಿಸಲಾಗಿತ್ತು.ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ₹ 140 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿ ಕಾಮಗಾರಿ ಪ್ರಾರಂಭಿಸಲಾಗಿದೆ. ₹ 500 ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇಶ-ವಿದೇಶದಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.