ನಂದಿ ಗಿರಿ ಪ್ರದಕ್ಷಿಣೆಗೆ ಭಕ್ತಸಾಗರ

| Published : Jul 22 2025, 12:15 AM IST

ಸಾರಾಂಶ

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ, ಗೋರ್ವಧನ ಗಿರಿ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಷ್ಟೇ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಈ ಭಾಗದ ಆಸ್ತಿಕರಲ್ಲಿದೆ. ಭಕ್ತರು ವಿವಿಧ ಭಜನಾ ತಂಡಗಳೊಂದಿಗೆ ಹಾಡುತ್ತ ಹೆಜ್ಜೆ ಹಾಕುತ್ತಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ಆಚರಿಸುವ ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಬೆಳಗ್ಗೆ ಹರನಾಮ ಸ್ಮರಣೆಯೊಂದಿಗೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಶ್ರೀ ನಂದಿ ಗಿರಿಪ್ರದಕ್ಷಿಣಾ ಸೇವಾ ಟ್ರಸ್ಟ್ ವತಿಯಿಂದ 85ನೇ ವರ್ಷದ ಗಿರಿ ಪ್ರದಕ್ಷಿಣೆ ಕಾರ್ಯಕ್ರಮಕ್ಕೆ ತಾಲೂಕಿನ ನಂದಿ ಐತಿಹಾಸಿಕ ಭೋಗನಂದೀಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೆಳಗ್ಗೆ 6.30ಕ್ಕೆ ಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು. ಆದರೆ ಮುಂಜಾನೆ ನಾಲ್ಕು ಗಂಟೆಯಿಂದಲೇ ಸಾಕಷ್ಟು ಭಕ್ತರು ಗಿರಿ ಪ್ರದಕ್ಷಿಣೆ ಆರಂಭಿಸಿದರು.

ಕೈಲಾಸ ಪರ್ವತ ಸುತ್ತಿದ ಪುಣ್ಯ

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚೆನ್ನಗಿರಿ, ಗೋರ್ವಧನ ಗಿರಿ ಸೇರಿದಂತೆ ಪಂಚಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಷ್ಟೇ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆ ಈ ಭಾಗದ ಆಸ್ತಿಕರಲ್ಲಿದೆ. ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಜಿಲ್ಲೆಗಲು ಮತ್ತು ಆಂಧ್ರ, ತೆಲಂಗಾಣ, ತಮಿಳುನಾಡಿನಿಂದ ಆಗಮಿಸಿದ್ದ ಭಕ್ತರು ವಿವಿಧ ಭಜನಾ ತಂಡಗಳೊಂದಿಗೆ ದೇವರ ಹಾಡುಗಳನ್ನು ಹಾಡುತ್ತ ಹೆಜ್ಜೆ ಹಾಕಿದರು.

ಭಕ್ತರಿಗೆ ಅಗತ್ಯ ವ್ಯವಸ್ಥೆ:

ಪ್ರತಿ ವರ್ಷದಂತೆ ದಾನಿಗಳು, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಸೇವಾ ಕಾರ್ಯಕ್ರಮಗಳಿಂದ ಕಾಲ್ನಡಿಗೆಯಲ್ಲಿ ಬಂದ ಭಕ್ತರ ಆಯಾಸ ನೀಗಿಸಿದರು. ಅಲ್ಲಲ್ಲಿ ಉಪಹಾರ, ಕಾಫಿ, ಟೀ,ಬಾದಾಮಿಹಾಲು, ಮಜ್ಜಿಗೆ, ಜ್ಯೂಸ್,ನೀರು, ಬಿಸ್ಕೆಟ್, ಗ್ಲುಕೋಸ್, ಚಾಕೋಲೇಟ್,ಕಲ್ಲುಸಕ್ಕರೆ, ಖರ್ಜೂರ ಸೇರಿದಂತೆ ಹಣ್ಣುಗಳನ್ನು ವಿತರಿಸಲಾಯಿತು.

ಇದಲ್ಲದೆ ಸುಲ್ತಾನ್ ಪೇಟೆಯ ದ್ವಾರಕಾಮಾಯಿ ವೃದ್ದಾಶ್ರಮದ ಬಳಿ ಆಕಾಶ್ ಗ್ಲೋಬಲ್ ಆಸ್ಪತ್ರೆ ಮತ್ತು ದಯಾನಂದಸಾಗರ್ ದಂತ ವೈದ್ಯಕೀಯ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಭಿರ ಮತ್ತು ಔಷಧ ವಿರಣೆ, ಚಿಕ್ಕಬಳ್ಳಾಪುರ ಔಷಧ ವ್ಯಾಪಾರಿಗಳ ಸಂಘದಿಂದ ಜ್ಯೂಸ್ ಪಾಕೇಟ್ ಗಳ ವಿತರಣೆ ಮತ್ತು ಎಪಿಡಿ ಸಂಸ್ಥೆಯ ವಿಕಲ ಚೇತನರು ತಯಾರಿಸಿದ್ದ ಬೀಜದುಂಡೆಗಳನ್ನು ಜನರಿಗೆ ನೀಡಿ ಕಾಡುಹಾದಿಯಲ್ಲಿ ಎಸೆಯಲು ಮನವಿ ಮಾಡಿದರು.