ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮಹಿಳೆಯರು ಸ್ವ-ಉದ್ಯೋಗಗಳನ್ನು ಕಂಡುಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬಹುದಾಗಿದ್ದು, ಇದರಿಂದ ಕುಟುಂಬ ನಿರ್ವಹಣೆಯ ಜೊತೆಗೆ ಆರ್ಥಿಕ ಸದೃಢರಾಗಬಹುದೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕೆ. ಉದಯ್ ತಿಳಿಸಿದರು.ತಾಲೂಕಿನ ಹೊನ್ನವಳ್ಳಿಯ ಸಿಂಧೂರ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮೂರು ತಿಂಗಳು ಕಾಲ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ನಮ್ಮ ಯೋಜನೆಯಡಿ ಮಹಿಳೆಯರಿಗೆ ಟೈಲರಿಂಗ್ ತರಬೇತಿ, ಆಟೋರಿಕ್ಷಾ ತರಬೇತಿ ಸೇರಿದಂತೆ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಮಹಿಳೆಯರ ಸ್ವಾವಲಂಬಿ ಹಾಗೂ ಸ್ವಾಭಿಮಾನ ಜೀವನಕ್ಕಾಗಿ ಶ್ರಮಿಸಲಾಗುತ್ತಿದೆ. ಮಹಿಳೆಯರು ಮನೆಗೆಲಸದ ಜೊತೆಗೆ ಬಿಡುವಿನ ಸಮಯದಲ್ಲಿ ಟೈಲರಿಂಗ್ ಮಾಡುವುದರಿಂದ ತನ್ನ ಖರ್ಚನ್ನು ತಾನೇ ನಿಭಾಯಿಸಿಕೊಳ್ಳಬಹುದು ಎಂದರು.
ಇಂತಹ ಕೇಂದ್ರಗಳಲ್ಲಿ ಕೊಡುವ ತರಬೇತಿಯನ್ನು ಪಡೆದುಕೊಂಡು ಮನೆಯಲ್ಲಿಯೇ ಉದ್ಯೋಗ ಮಾಡಬಹುದು. ಅಲ್ಲದೆ ತರಬೇತಿ ಪಡೆದ ನೀವು ಬೇರೆಯವರಿಗೂ ಮಾರ್ಗದರ್ಶನ ನೀಡಿದರೆ ಅವರು ಸಹ ಸ್ವವಲಂಬಿಗಳಾಗಲಿದ್ದಾರೆ. ಮಹಿಳೆಯರು ಮನೆಯಲ್ಲಿ ಕಾಲಕಳೆಯಲು ಕಷ್ಟ ಸಾಧ್ಯ. ಇಂತಹ ಕಸುಬುಗಳನ್ನು ಕಲಿತುಕೊಂಡರೆ ನಿಮಗೂ ಅನುಕೂಲವಾಗಲಿದೆ ಎಂದರು.ನಿವೃತ್ತ ಶಿಕ್ಷಕ ಮಲ್ಲಿಗಪ್ಪಾಚಾರ್ ಮಾತನಾಡಿ, ಮಹಿಳೆಯರ ವಿಕಾಸಕ್ಕೆ ಜ್ಞಾನ ವಿಕಾಸ ಕೇಂದ್ರಗಳು ಸಹಕಾರಿಯಾಗಿದ್ದು ಇಲ್ಲಿ ತರಬೇತಿ ಪಡೆದುಕೊಂಡು ಮಹಿಳೆಯರು ಸ್ವ ಉದ್ಯೋಗಗಳನ್ನು ಕಂಡುಕೊಳ್ಳಬಹುದಾಗಿದೆ. ಇದರಿಂದ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನೆಮ್ಮದಿ ಜೀವನ ನಡೆಸಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕ ಮೋಹನ್ ಮಾತನಾಡಿ, ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ಅವರಿಗೆ ನಮ್ಮ ಸಂಸ್ಕಾರ, ಸಂಸ್ಕೃತಿ, ಶಿಸ್ತು, ಪ್ರಾಮಾಣಿಕತೆಯನ್ನು ಕಲಿಸಬೇಕು. ಮೊಬೈಲ್ ಕೊಡುವುದನ್ನು ಕಡಿಮೆ ಮಾಡಿ ಓದಿನತ್ತ ಹೆಚ್ಚು ಆಸಕ್ತಿ ವಹಿಸುವಂತೆ ನೋಡಿಕೊಳ್ಳಬೇಕು ಎಂದ ಅವರು ಕೌಟುಂಬಿಕ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು.ಟೈಲರಿಂಗ್ ಶಿಕ್ಷಕಿ ಸುಲೋಚನಾ ಮಾತನಾಡಿ, ಕೇವಲ ಮೂರು ತಿಂಗಳ ಟೈಲರಿಂಗ್ ತರಬೇತಿಯಲ್ಲಿ ಮಹಿಳೆಯರು ಸಾಕಷ್ಟು ಕಲಿತಿದ್ದು ಕಲಿಕೆಯನ್ನು ಮಧ್ಯದಲ್ಲಿಯೇ ಬಿಡದೆ ಮುಂದುವರೆಸಿಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಎಲ್ಲರೂ ಉದ್ಯೋಗವಂತರಾಗಿ ಕುಟುಂಬವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕೆಂದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಒಕ್ಕೂಟದ ಅಧ್ಯಕ್ಷ ಕಾಶಿನಾಥ್, ಅಧ್ಯಕ್ಷೆ ಪುಷ್ಪಾ, ಮೇಲ್ವಿಚಾರಕ ಪರಶಿವಮೂರ್ತಿ, ಆಂತರಿಕ ಲೆಕ್ಕಪರಿಶೋಧಕ ವಿನೋದ್, ಸೇವಾಪ್ರತಿನಿಧಿ ದಯಾಮಣಿ, ಸರೋಜಮ್ಮ ಸೇರಿದಂತೆ ಕೇಂದ್ರದ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು.