ವಿಶೇಷಚೇತನರಿಗೆ ಪ್ರತ್ಯೇಕ ಉದ್ಯೋಗ ಮೇಳ

| Published : Dec 04 2023, 01:30 AM IST

ಸಾರಾಂಶ

ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, 1992ರಿಂದ ವಿಶ್ವ ಅಂಗವಿಕಲರ ದಿನಾಚರಣೆ ಮಾಡಬೇಕೆಂದು ಆಯೋಜನೆ ಮಾಡಲಾಗಿದೆ. ಮಾನವೀಯತೆಯ ಮೌಲ್ಯಗಳಿದ್ದಲ್ಲಿ ಆತ್ಮ ಸ್ಥೈರ್ಯ, ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ನಿಮ್ಮಲ್ಲಿ ಆತ್ಮಶಕ್ತಿ ಇದೆ, ಅದನ್ನು ಮುಂದೆ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿಶೇಷಚೇತನರಿಗೆ ಪ್ರತ್ಯೇಕ ಉದ್ಯೋಗ ಮೇಳವನ್ನು ಆಯೋಜಿಸಿ ಅವರಿಗೂ ಸಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವಂತೆ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಮತದಾರರ ವಿಶೇಷ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದ್ದು, ಆತ್ಮವಿಶ್ವಾಸದೊಂದಿಗೆ ಮಾನಸಿಕ ಸದೃಢತೆ ಬೆಳಸಿಕೊಳ್ಳಬೇಕು. ಇಡೀ ಸಮಾಜ ಅನುಕಂಪ ತೋರಿಸುವುದಕ್ಕಿಂತ ಸಹಕಾರ ನೀಡುವ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಆತ್ಮವಿಶ್ವಾಸದಿಂದ ಸಮಾಜದಲ್ಲಿ ಬರುವಂತಹ ಸಮಸ್ಯೆ ಎದುರಿಸಿ ಮೆಟ್ಟಿ ನಿಲ್ಲಬೇಕು ಎಂದರು.ಅಂಗವಿಕಲರಿಗೆ ತಿಂಗಳಿಗೆ ಮಾಶಾಸನ ನೀಡಲಾಗುತ್ತಿದೆ, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಳೆದ ವರ್ಷ ಅಲಿಂಕೋ ಯೋಜನೆಯಡಿ 1800 ಸಾಧನ ಸಲಕರಣೆಗಳನ್ನು ನೀಡಲಾಗಿತ್ತು, 2 ತಿಂಗಳೊಳಗೆ ಮತ್ತೆ ಅವಶ್ಯವಿರುವ ಸಲಕರಣೆಗಳನ್ನು ನೀಡಲಾಗುವುದು ಎಂದು ಹೇಳಿದರು.

ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಮಾತನಾಡಿ, 1992ರಿಂದ ವಿಶ್ವ ಅಂಗವಿಕಲರ ದಿನಾಚರಣೆ ಮಾಡಬೇಕೆಂದು ಆಯೋಜನೆ ಮಾಡಲಾಗಿದೆ. ಮಾನವೀಯತೆಯ ಮೌಲ್ಯಗಳಿದ್ದಲ್ಲಿ ಆತ್ಮ ಸ್ಥೈರ್ಯ, ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ನಿಮ್ಮಲ್ಲಿ ಆತ್ಮಶಕ್ತಿ ಇದೆ, ಅದನ್ನು ಮುಂದೆ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಎಲ್ಲರಂತೆ ನೀವು ಸಹ ಸಮಾನರು. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ಬದುಕಿನ ಎಲ್ಲ ಸ್ತರಗಳಲ್ಲಿ ಅವರಿಗೆ ಅವಕಾಶ ನೀಡಬೇಕು. ಕಂದಾಯ ಇಲಾಖೆ ವಿಕಲಚೇತನರಿಗೆ ಪಿಂಚಣಿ ನೀಡುತ್ತಿದೆ. ಇದರ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಎನ್‌.ಚಂದ್ರಪ್ಪ ಮಾತನಾಡಿ, ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇಲಾಖೆಯಿಂದ ತ್ರಿಚಕ್ರ ವಾಹನ ಯೋಜನೆ, ಸ್ವಯಂ ಉದ್ಯೋಗ ಆಧಾರ ಯೋಜನೆ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಶುಲ್ಕ ಮರುಪಾವತಿ ಹೀಗೆ ವಿವಿಧ ಯೋಜನೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಕಲಚೇತನರಿಗೆ ಸನ್ಮಾನ ಮಾಡಲಾಯಿತು. ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಲೆಗಳಿಗೆ, ಕ್ರೀಡೆಯಲ್ಲಿ ಚಾಂಪಿಯನ್‌ಶಿಪ್‌ ಪಡೆದವರಿಗೆ, ದೈಹಿಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತ್ತು ಮತದಾರರ ವಿಶೇಷ ನೋಂದಣಿ ಕುರಿತು ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಪಾಲಿಕೆ ಮಾಜಿ ಸದಸ್ಯ ಸಂತೋಷ್‌ ಕುಮಾರ್‌ ಮತ್ತಿತರರು ಇದ್ದರು.

- - - ಕೋಟ್‌ 17 ವರ್ಷ ಮೇಲ್ಪಟ್ಟ ವಿಶೇಷಚೇತನರು ಸಹ ಮತದಾನ ಮಾಡಬೇಕು. ಗುರುತಿನ ಚೀಟಿ ಮಾಡಿಸಿಕೊಳ್ಳುವುದರಿಂದ ನಿಮಗೆ ಅನೇಕ ಸೌಲಭ್ಯಗಳು ಸಿಗುತ್ತವೆ. ಸಮಾಜದಲ್ಲಿ ಖಾಸಗಿ ವಲಯ ಮತ್ತು ಸರ್ಕಾರಿ ವಲಯ ಎರಡರಲ್ಲೂ ಉದ್ಯೋಗ ಪಡೆದುಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಬಲರಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ವಿಕಲಚೇತನರು ಮುಂದೆ ಬರಬೇಕು

- ಸಿದ್ದಲಿಂಗ ರೆಡ್ಡಿ, ಅಪರ ಡಿಸಿ

- - -

-3ಎಸ್‌ಎಂಜಿಕೆಪಿ02:

ವಿಶ್ವ ವಿಕಲಚೇತನರ ದಿನಾಚರಣೆ, ಮತದಾರರ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.