ಸಾರಾಂಶ
ಮಳೆ ಕಡಿಮೆಯಾಗಿದೆ, ದುರಸ್ತಿ ಯಾವಾಗ? ಎಂದು ಸಾರ್ವಜನಿಕರ ಪ್ರಶ್ನೆ
ಬಗ್ಗೋಣ ಕ್ರಾಸ್‌ನಿಂದ ಪ್ರಮುಖ ರಸ್ತೆಗಳು ಗುಂಡಿಮಯಕನ್ನಡಪ್ರಭ ವಾರ್ತೆ ಕುಮಟಾ
ಪಟ್ಟಣದ ಬಗ್ಗೋಣ ಕ್ರಾಸ್ ಸೇರಿದಂತೆ ಹಲವೆಡೆ ಪ್ರಮುಖ ರಸ್ತೆಗಳು ತೀರಾ ಹಾಳಾಗಿದೆ. ಇದೀಗ ವಾರ್ಷಿಕ ಮಳೆಗಾಲ ಬಹುತೇಕ ಮುಗಿಯುತ್ತಿರುವುದರಿಂದ ತಕ್ಷಣ ರಸ್ತೆಗಳು ದುರಸ್ತಿ ಕಾರ್ಯ ಮಾಡದಿದ್ದರೆ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಬಹುದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಬಗ್ಗೋಣ ಕ್ರಾಸ್ ಆರಂಭದಲ್ಲೇ ತಾಲೂಕಾಸ್ಪತ್ರೆಯ ಎದುರಿಗೆ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಡಾಂಬರು ಕಿತ್ತಿದ್ದು ಮಾತ್ರವಲ್ಲದೇ ಅಲ್ಲಲ್ಲಿ ಭಾರೀ ಗಾತ್ರದ ತಗ್ಗು ನಿರ್ಮಾಣವಾಗಿದೆ. ಬಗ್ಗೋಣ ಕ್ರಾಸ್‌ನಿಂದ ನಾಮಧಾರಿ ಸಭಾಭವನ ಹಾಗೂ ಜಿಪಂ ಕಚೇರಿಯವರೆಗೂ ರಸ್ತೆಯಲ್ಲಿ ಹೊಂಡಗುಂಡಿಗಳಾಗಿದ್ದರೂ ದುರಸ್ತಿ ಮಾಡಿರಲಿಲ್ಲ. ಮಳೆಗಾಲವಾದ್ದರಿಂದ ಜನರೂ ಸಹಿಸಿಕೊಂಡಿದ್ದರು.
ಆದರೆ ಈಗೀಗ ಮಳೆ ಕಡಿಮೆಯಾಗಿದ್ದರಿಂದ ಹೊಂಡಗಳಲ್ಲಿ ನೀರಿಲ್ಲ. ಸ್ವಲ್ಪ ದೂರದಿಂದ ಹೊಂಡ ಕಾಣುವುದಿಲ್ಲ. ಗಡಿಬಿಡಿಯಲ್ಲಿ ಬಂದ ವಾಹನಿಗರಿಗೆ ಹೊಂಡದ ಅಂಚಿಗೆ ಬಂದಾಗ ಏನು ಮಾಡಬೇಕೆಂದು ತೋಚದೇ ಗಲಿಬಿಲಿಗೊಳಗಾಗುತ್ತಿದ್ದಾರೆ. ಕಾರು, ರಿಕ್ಷಾ, ಬೈಕ್ ಮುಂತಾದವು ಹೊಂಡ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ತಾಗಿಸಿಕೊಂಡು ಪ್ರತಿನಿತ್ಯ ಜಗಳಗಳಾಗುತ್ತಿದೆ. ಮುಖ್ಯವಾಗಿ ಕೆಲ ದ್ವಿಚಕ್ರ ವಾಹನಿಗರು ಇಲ್ಲಿ ಬಿದ್ದು ಗಾಯಗೊಂಡು ಪಕ್ಕದ ತಾಲೂಕಾಸ್ಪತ್ರೆಯಲ್ಲಿ ಬ್ಯಾಂಡೇಜ್ ಕಟ್ಟಿಸಿಕೊಂಡ ಉದಾಹರಣೆಗಳೂ ಇದೆ. ಹೀಗಾಗಿ ತಕ್ಷಣ ಈ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡುವಂತೆ ಜನಾಗ್ರಹವಿದೆ.ಕೇವಲ ಬಗ್ಗೋಣ ಕ್ರಾಸ್‌ನಿಂದ ಮಾತ್ರವಲ್ಲ. ಕೋರ್ಟ್ ರಸ್ತೆ, ನೆಲ್ಲಿಕೇರಿ ರಸ್ತೆ, ಮೂರುಕಟ್ಟೆ, ಬಸ್ತಿಪೇಟೆ, ಚಿತ್ರಿಗಿ ಮುಂತಾದ ಹಲವು ಪ್ರಮುಖ ರಸ್ತೆಗಳಲ್ಲೂ ಇಂಥದೇ ದುಸ್ಥಿತಿ ಇದೆ. ಮಳೆಗಾಲದಲ್ಲಿ ಅಲ್ಲಲ್ಲಿ ತೇಪೆ ಹಾಕಲಾಗಿತ್ತಾರೂ ಮಳೆಯ ಹೊಡೆತಕ್ಕೆ ಮೊದಲಿನ ದುಸ್ಥಿತಿಗೆ ಬಂದಿದೆ. ಪುರಸಭೆಯವರು ಈಬಗ್ಗೆ ಪರಿಶೀಲನೆ ನಡೆಸಿ ಕೋರ್ಟ ರಸ್ತೆ, ಚಿತ್ರಿಗಿ ಮುಂತಾದ ಕೆಲವು ಆಯ್ದ ಕಡೆಗಳಲ್ಲಿ ಮಾತ್ರ ಕಾಮಗಾರಿ ಕೈಗೆತ್ತಿಕೊಂಡು ಮರು ಡಾಂಬರೀಕರಣಕ್ಕೆ ಮುಂದಾಗಿದ್ದಾರೆ. ಉಳಿದ ಕಡೆಗಳಲ್ಲಿ ಹೊಂಡಗಳ ಗತಿಯೇನು ಎಂಬುದು ಸ್ಪಷ್ಟವಿಲ್ಲ. ಹೀಗಾಗಿ ಶೀಘ್ರದಲ್ಲಿ ಪಟ್ಟಣ ವ್ಯಾಪ್ತಿಯ ಎಲ್ಲ ರಸ್ತೆಗಳ ದುರಸ್ತಿ ಅಥವಾ ಡಾಂಬರೀಕರಣ ಕೆಲಸವಾಗಲಿ ಎಂಬುದು ನಾಗರಿಕರ ಒತ್ತಾಯವಾಗಿದೆ.