ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹಲವು ಕ್ಷೇತ್ರಗಳಲ್ಲಿ ಯೋಜನೆಗಳು ಮತ್ತು ಮೂಲ ಸೌಕರ್ಯ ಕಾಮಗಾರಿಗಳು ಪ್ರಕಟವಾಗಿರುವ ಬೆನ್ನಲ್ಲೇ, ಉತ್ತರ ಕನ್ನಡಕ್ಕೆ ದೊರೆತಿದ್ದು ಇಷ್ಟೇನಾ ಎಂದು ಕೇಳುವಂತಾಗಿದೆ.

ಕಾರವಾರ: ಸಚಿವ ಸಂಪುಟದಲ್ಲೂ ಉತ್ತರ ಕನ್ನಡಕ್ಕೆ ಪ್ರಾತಿನಿಧ್ಯ ಇಲ್ಲ. ಮಂಗಳೂರಿನ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲೂ ದ.ಕ., ಉಡುಪಿ ಜಿಲ್ಲೆಗೆ ಹೋಲಿಸಿದರೆ ಅಭಿವೃದ್ದಿಯಲ್ಲೂ ತಾರತಮ್ಯದಿಂದಾಗಿ ಸಂಪುಟ ಸಭೆಯ ಬಗ್ಗೆ ಜಿಲ್ಲೆಯ ಜನತೆ ಇಟ್ಟ ಬೆಟ್ಟದಷ್ಟು ನಿರೀಕ್ಷೆ ಹುಸಿಯಾಗಿದೆ.

ಕರಾವಳಿಯ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಹಲವು ಮಹತ್ವದ ನಿರ್ಧಾರಗಳಿಗೆ ಸಾಕ್ಷಿಯಾಗಿದೆ. ಅದರೆ ಅವೆಲ್ಲ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪಾಲಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹಲವು ಕ್ಷೇತ್ರಗಳಲ್ಲಿ ಯೋಜನೆಗಳು ಮತ್ತು ಮೂಲ ಸೌಕರ್ಯ ಕಾಮಗಾರಿಗಳು ಪ್ರಕಟವಾಗಿರುವ ಬೆನ್ನಲ್ಲೇ, ಉತ್ತರ ಕನ್ನಡಕ್ಕೆ ದೊರೆತಿದ್ದು ಇಷ್ಟೇನಾ ಎಂದು ಕೇಳುವಂತಾಗಿದೆ.

ಮೆಡಿಕಲ್ ಕಾಲೇಜು, ಸುಸಜ್ಜಿತ ಕ್ರೀಡಾಂಗಣ, ಬೃಹತ್ ಸೇತುವೆಗಳು ಸೇರಿದಂತೆ ಹಲವು ಯೊಜನೆಗಳು ದಕ ಹಾಗೂ ಉಡುಪಿ ಜಿಲ್ಲೆಯ ಪಾಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಭಾಷಣದಲ್ಲೂ ದ.ಕ. ಹಾಗೂ ಉಡುಪಿ ಜಿಲ್ಲೆಯ ಹೆಸರನ್ನಷ್ಟೇ ಪ್ರಧಾನವಾಗಿ ಪ್ರಸ್ತಾಪಿಸಿದರು.

ಸಂಪುಟ ಸಭೆಯಲ್ಲಿ ಹೇಳಿದ ಜಿಲ್ಲೆಯ ಮಂಕಿಯಲ್ಲಿ ಬಹುಉದ್ದೇಶಿತ ಬಂದರು ಹಿಂದಿನ ಬಜೆಟ್‌ನಲ್ಲಿನ ಘೋಷಣೆಯಾಗಿದೆ. ವಿಮಾನ ನಿಲ್ದಾಣ ಹೊಸ ಪ್ರಸ್ತಾವನೆ ಏನೂ ಅಲ್ಲ, ಹಿಂದೆ ಇರುವುದಕ್ಕೆ ರನ್ ವೇ ವಿಸ್ತರಣೆಯ ಹೊಸ ಕವಚ ತೊಡಿಸಲಾಗಿದೆ. ದ್ವೀಪಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವೂ ಸಾಲದು.

ಆದರೆ, ಜಿಲ್ಲೆಯಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಅನೇಕ ಮೂಲ ಸಮಸ್ಯೆಗಳಿಗೆ ನಿರ್ದಿಷ್ಟ ಪರಿಹಾರ ಯಾವಾಗ ಎಂಬ ಪ್ರಶ್ನೆ ಮಾತ್ರ ಉಳಿದಿದೆ.‘ಕರಾವಳಿ’ ಎಂದರೆ ಮಂಗಳೂರು- ಉಡುಪಿ ಮಾತ್ರವೇ?

ಸಂಪುಟ ಸಭೆಯ ಉದ್ದೇಶ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿ ಎಂದೇ ಸರ್ಕಾರ ಹೇಳಿತ್ತು. ಕರಾವಳಿ ಮತ್ತು ಮಲೆನಾಡು ಭಾಗದ ಶಾಸಕರು ಹಾಗೂ ಸಂಸದರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಹಾಗಿದ್ದರೆ ನಮ್ಮ ಜನಪ್ರತಿನಿಧಿಗಳು ಇಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿಲ್ಲವೇ? ತಂದಿದ್ದರೂ ನಿರ್ಲಕ್ಷಿಸಲಾಯಿತೆ ಎನ್ನುವ ಪ್ರಶ್ನೆ ಜನರನ್ನು ಕಾಡುವಂತಾಗಿದೆ.

ಹೀಗಿರುವಾಗ, ಉತ್ತರ ಕನ್ನಡದ ಜನರ ಪ್ರಶ್ನೆಯೂ ಸರಳ, ಕರಾವಳಿಯ ಅಭಿವೃದ್ಧಿಯ ಫಲ ಉತ್ತರ ಕನ್ನಡದ ಕೊನೆಯ ಹಳ್ಳಿಯವರೆಗೂ ತಲುಪುವುದು ಯಾವಾಗ. ಅವುಗಳ ಜತೆಗೆ ರಸ್ತೆ, ಆರೋಗ್ಯ, ಶಿಕ್ಷಣ, ಉದ್ಯೋಗ, ಪ್ರವಾಸೋದ್ಯಮ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೂ ಸಮಗ್ರ ಪರಿಹಾರ ಸಿಕ್ಕಾಗ ಮಾತ್ರ ‘ಕರಾವಳಿಯ ಸಮಗ್ರ ಅಭಿವೃದ್ಧಿ’ ಎಂಬ ಘೋಷಣೆ ಅರ್ಥಪೂರ್ಣವಾಗಲಿದೆ. ಸಂಪುಟ ಸಭೆ ಮುಗಿದಿದೆ. ಉತ್ತರ ಕನ್ನಡದ ಪ್ರಶ್ನೆಗಳಿಗೆ ಸಂಪುಟ ಸಭೆಯಲ್ಲೂ ಉತ್ತರ ದೊರಕದಂತಾಗಿದೆ.

ಜಿಲ್ಲೆಗೆ ನ್ಯಾಯ ಸಿಕ್ಕಿಲ್ಲ: ರಾಜ್ಯದ ಕರಾವಳಿಯಲ್ಲಿ ಸಿಂಹಪಾಲು ಉತ್ತರಕನ್ನಡದಲ್ಲಿದೆ. ಆದರೆ ಸಂಪುಟ ಸಭೆಯಲ್ಲಿ ಜಿಲ್ಲೆಗೆ ನ್ಯಾಯ ಸಿಕ್ಕಿಲ್ಲ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಇದಕ್ಕೆ ಉತ್ತರಿಸಬೇಕಾಗಿದೆ ಎಂದು ಕುಮಟಾ ಶಾಸಕರಾದ ದಿನಕರ ಶೆಟ್ಟಿ ತಿಳಿಸಿದರು.