ಎಲ್ಲ ಇದ್ದು ಅರಿವು ಇಲ್ಲದಿದ್ದರೆ ಪ್ರಯೋಜನವಿಲ್ಲ. ಜೀವನದಲ್ಲಿ ವಿಘ್ನಗಳು ಬರುತ್ತವೆ, ಹೋಗುತ್ತವೆ. ಆದರೆ ತಾಳ್ಮೆಯಿಂದ ಬದುಕುವುದನ್ನು ಕಲಿಯಬೇಕು.
ಮುಂಡಗೋಡ: ಮನುಷ್ಯನಿಗೆ ಪ್ರಪಂಚದಲ್ಲಿ ಬದುಕಲು ಕೇವಲ ಅನ್ನ, ನೀರು, ಆಶ್ರಯ ಮತ್ತು ಬಟ್ಟೆ ಮಾತ್ರ ಸಾಲದು. ಬದಲಾಗಿ ಜ್ಞಾನ ಮತ್ತು ಜೀವನದ ಅರಿವು ಇರಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಇಲ್ಲಿಯ ಓಣಿ ಮಿತ್ರ ಮಂಡಳಿ ಗಣೇಶೋತ್ಸವದ ಬೆಳ್ಳಿಹಬ್ಬದ ಕಾರ್ಯಕ್ರಮದ ಅಂಗವಾಗಿ ನಗರದ ಬಸವೇಶ್ವರ ಮೈದಾನದಲ್ಲಿ ಆಯೋಜಿಸಿದ್ದ ಅಧ್ಯಾತ್ಮ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲ ಇದ್ದು ಅರಿವು ಇಲ್ಲದಿದ್ದರೆ ಪ್ರಯೋಜನವಿಲ್ಲ. ಜೀವನದಲ್ಲಿ ವಿಘ್ನಗಳು ಬರುತ್ತವೆ, ಹೋಗುತ್ತವೆ. ಆದರೆ ತಾಳ್ಮೆಯಿಂದ ಬದುಕುವುದನ್ನು ಕಲಿಯಬೇಕು. ಯಾವ ಮನೆಯಲ್ಲಿ ಜನಸಂಪರ್ಕ ದೀಪ, ಬೆಳಕು ಇರುವುದಿಲ್ಲವೋ ಆ ಮನೆಯಲ್ಲಿ ಇಲಿ ಹೆಗ್ಗಣ ಸೇರಿಕೊಂಡಿರುತ್ತದೆ. ಅದೇ ರೀತಿ ಅರಿವಿನ ದೀಪ ಇಲ್ಲದ ತಲೆಯಲ್ಲಿ ಚಿಂತೆ ನೋವು, ನಿರಾಸೆ ಎಂಬ ಇಲಿ, ಹೆಗ್ಗಣಗಳು ನೆಲೆಸುತ್ತವೆ. ಮನುಷ್ಯನಿಗಿಂತ ಮನುಷ್ಯನಲ್ಲಿ ತುಂಬಿರುವ ಜ್ಞಾನ, ಅರಿವಿನಿಂದ ಆತನಿಗೆ ಬೆಲೆ ಹೆಚ್ಚುತ್ತದೆ. ಸದ್ವಿಚಾರ ಸದ್ಗುಣಗಳು ಇರದ ಮನುಷ್ಯನಲ್ಲಿ ದುಶ್ಚಟಗಳು ಸೇರಿಕೊಂಡಿರುತ್ತವೆ ಎಂದರು.
ದೇಶದ ಋಷಿಮುನಿಗಳು, ವಚನಕಾರರು, ಜ್ಞಾನಿಗಳು ಚಿಂತನೆ ನಡೆಸಿ ಮಾಡುವ ಪ್ರತಿಯೊಂದು ಕೆಲಸ, ಸಂಸ್ಕೃತಿ, ಆಚರಣೆ, ಸಂಪ್ರದಾಯ, ಪದ್ಧತಿಯನ್ನು ಒಂದು ಅರ್ಥವನ್ನಿಟ್ಟು ಮಾಡಿದ್ದಾರೆ. ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ನೀರಿನಲ್ಲಿ ವಿಸರ್ಜಿಸಿದಾಗ ಅದು ಮತ್ತೆ ಮಣ್ಣಾಗಿ ಹರಿಯುತ್ತದೆ. ಆಚರಣೆಗಳು ಕೇವಲ ರಂಜನೆಯಾಗಬಾರದು. ಹಾಗಾಗಿ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜಿಸಿದರೆ ಸಲ್ಲದು. ಬದಲಾಗಿ ಪ್ರಾಣದಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಮನಸಿನಲ್ಲಿ ಸದ್ಗುಣಗಳನ್ನು ಪ್ರತಿಷ್ಠಾಪಿಸಬೇಕು ಎಂದರು.ನಮ್ಮಲ್ಲಿರುವ ದುರ್ಗುಣಗಳನ್ನು ವಿಸರ್ಜಿಸುವ ಮೂಲಕ ಗಣಪತಿ ವಿಸರ್ಜಿಸಬೇಕು. ಇಂದಿನ ದಿನಗಳಲ್ಲಿ ಮನುಷ್ಯ ತಾವು ಖುಷಿ ಹಾಗೂ ಸುಖಪಡುವುದಕ್ಕಿಂತ ತಾನು ಸುಖವಾಗಿದ್ದೇನೆ ಎಂಬುವುದನ್ನು ಜಗತ್ತಿಗೆ ತೋರಿಸಲು ಹೆಚ್ಚು ಖರ್ಚು ವೆಚ್ಚ ಮಾಡುತ್ತಿದ್ದೇವೆ. ಬದುಕಿನ ಆಡಂಬರವನ್ನು ಲೋಕಕ್ಕೆ ತೋರಿಸಲು ಹೊರಟಾಗ ಮಾತ್ರ ಬದುಕು ದುಬಾರಿ ಎನಿಸುತ್ತದೆ. ಹಾಗಾಗಿ ರಂಜನೆಯ ಜಗತ್ತಿನಿಂದ ಹೊರಗೆ ಬರಬೇಕಿದೆ ಎಂದು ಮಾರ್ಮಿಕವಾಗಿ ನುಡಿದ ಶ್ರೀಗಳು, ಏಪ್ರಿಲ್ ಫೂಲ್ ಎಂದು ಮೂರ್ಖರ ದಿನವನ್ನಾಗಿ ಆಚರಿಸುವ ಬದಲು ಒಂದು ಸಸಿ ನೆಟ್ಟು ಏಪ್ರಿಲ್ ಕೂಲ್ ಎಂದು ಆಚರಿಸಬಹುದು ಎಂದು ಪರಿಸರ ಪ್ರೇಮದ ಕುರಿತು ಜಾಗೃತಿ ಮೂಡಿಸಿದರು.
ಕಿರಿಯ ಸ್ವಾಮಿಗಳಾದ ಅಶೋಕ ದೇವರು ಮಾತನಾಡಿ, ಬದುಕು ಎನ್ನುವುದು ಕ್ಷಣಿಕ, ಜೀವನದಲ್ಲಿ ಚಿಂತೆ ಮಾಡುವುದು ಬಿಟ್ಟು ವಾಸ್ತವತೆಯಲ್ಲಿ ಬದುಕುವುದನ್ನು ಕಲಿಯಬೇಕು. ಚಿಂತೆಯಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ. ವ್ಯರ್ಥ ಚಿಂತನೆಗಳಿಂದ ಮನಸ್ಸನ್ನು ಹಾಳು ಮಾಡಿಕೊಳ್ಳುವ ಬದಲು ಉದಾತ್ತ ಚಿಂತನೆಗಳನ್ನು ರೂಪಿಸಿಕೊಳ್ಳಬೇಕು. ಬದಲಾವಣೆ ಎನ್ನುವುದು ಜಗದ ನಿಯಮ ಎಂದರು.ಇದೆ ವೇಳೆ ಹೊಸ ಓಣಿ ಮಿತ್ರ ಮಂಡಳಿ ವತಿಯಿಂದ ಅಭಿನವ ಗವಿಸಿದ್ದೇಶ್ವರ ಶ್ರೀಗಳನ್ನು ಸನ್ಮಾನಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷರಾದ ವಸಂತ ಹೊಸ ಓಣ ಮಿತ್ರ ಮಂಡಳಿ ಅಧ್ಯಕ್ಷ ಕಿರಣ ಕೊಲ್ಲಾಪುರ, ಶ್ರೀಧರ್ ಡೋರಿ, ಉದ್ಯಮಿ ಅಮಿತ ಓಂಪ್ರಕಾಶ ಪೂಜಾರ, ನಾಗಣ್ಣ ಎಲಿಗಾರ, ಉದಯ ಗಾಂಜೇಕರ, ತಹಸೀಲ್ದಾರ್ ಎಸ್.ಎ. ಪ್ರಸಾದ್, ಟಿ.ವೈ. ದಾಸನಕೊಪ್ಪ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಪಾಂಡುರಂಗ ಟಿಕೋಜಿ ಸ್ವಾಗತಿಸಿದರು. ವಸಂತ ಕೋಣಸಾಲಿ ನಿರೂಪಿಸಿದರು.