ಸಾರಾಂಶ
ದಾಳಿಗೊಳಗಾದ ಕುರಿ ಸ್ಥಳದಲ್ಲೇ ಅಸುನೀಗಿದೆ. ಕಳೆದ ಮೂರು ತಿಂಗಳಿಂದ ಗ್ರಾಮದಲ್ಲಿ ಚಿರತೆ ದಾಳಿಗೆ 8 ಕುರಿಗಳು ಬಲಿಯಾಗಿವೆ. ಇದರಿಂದ ಆರ್ಥಿಕವಾಗಿ ನಷ್ಟ ಉಂಟಾಗಿದೆ ಎಂದು ರೈತ ಕೃಷ್ಣಮೂರ್ತಿ ಅಳಲು ತೋಡಿಕೊಂಡರು.
ಮದ್ದೂರು: ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿ ಕುರಿಯನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಪಂ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ. ಗ್ರಾಮದ ರೈತ ಕೃಷ್ಣಮೂರ್ತಿ ಅವರ ಕುರಿ ಚಿರತೆ ದಾಳಿಗೆ ಬಲಿಯಾಗಿದೆ. ಕೃಷ್ಣಮೂರ್ತಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಒಂದು ಕುರಿ ನೀರು ಕುಡಿಯಲು ಗುಂಡಿಯಲ್ಲಿ ಇಳಿದಾಗ ಚಿರತೆ ಏಕಾಏಕಿ ಕುರಿ ಮೇಲೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಕುರಿ ಚೀರಾಟ ಕೇಳಿ ಕೃಷ್ಣಮೂರ್ತಿ ಹಾಗೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಾಟ ನಡೆಸಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಬೆದರಿದ ಚಿರತೆ ಸ್ಥಳದಿಂದ ಪರಾರಿಯಾಗಿದೆ.
ದಾಳಿಗೊಳಗಾದ ಕುರಿ ಸ್ಥಳದಲ್ಲೇ ಅಸುನೀಗಿದೆ. ಕಳೆದ ಮೂರು ತಿಂಗಳಿಂದ ಗ್ರಾಮದಲ್ಲಿ ಚಿರತೆ ದಾಳಿಗೆ 8 ಕುರಿಗಳು ಬಲಿಯಾಗಿವೆ. ಇದರಿಂದ ಆರ್ಥಿಕವಾಗಿ ನಷ್ಟ ಉಂಟಾಗಿದೆ ಎಂದು ರೈತ ಕೃಷ್ಣಮೂರ್ತಿ ಅಳಲು ತೋಡಿಕೊಂಡರು. ಆತಗೂರು ಹೋಬಳಿಯ ವಡ್ಡರದೊಡ್ಡಿ, ಮಾರದೇವನಹಳ್ಳಿ, ಹೊಸಳ್ಳಿ ದೊಡ್ಡಿ ಹಾಗೂ ಕೋಲೂರು ಗ್ರಾಮಗಳ ಆಸುಪಾಸಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಗ್ರಾಮಸ್ಥರು ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದುರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿರತೆ ಹಾವಳಿ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಸಹ ಚಿರತೆ ಸೆರೆ ಹಿಡಿಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಚಿರತೆ ಸೆರೆಹಿಡಿದು ಹಾವಳಿ ತಪ್ಪಿಸದಿದ್ದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.