ಕ್ಷುಲ್ಲಕ ಕಾರಣಕ್ಕಾಗಿ ನಾಲ್ವರು ಯುವಕರು ಮನಸೋ ಇಚ್ಛೆ ಹಲ್ಲೆ ನಡೆಸಿದ ಪರಿಣಾಮ, ಪಟ್ಟಣದ ಗೂಡಂಗಡಿ ವೃದ್ಧ ವ್ಯಾಪಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಜರುಗಿದೆ.
ರಟ್ಟೀಹಳ್ಳಿ: ಕ್ಷುಲ್ಲಕ ಕಾರಣಕ್ಕಾಗಿ ನಾಲ್ವರು ಯುವಕರು ಮನಸೋ ಇಚ್ಛೆ ಹಲ್ಲೆ ನಡೆಸಿದ ಪರಿಣಾಮ, ಪಟ್ಟಣದ ಗೂಡಂಗಡಿ ವೃದ್ಧ ವ್ಯಾಪಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಜರುಗಿದೆ.
ರಟ್ಟೀಹಳ್ಳಿ ಪಟ್ಟಣದ ನಿವಾಸಿ ಶಿವಾಜಿರಾವ್ ಬೈರೊಜಿಯವರ (60) ಕೊಲೆಯಾದ ದುರ್ದೈವಿ.ಘಟನೆಯ ವಿವರ: ಬುಧವಾರ ಸಂಜೆ 7.30ರ ಸುಮಾರಿಗೆ ವಾಸೀಮ್ ಮುಲ್ಲಾ ಎಂಬ ಯುವಕ ಶಿವಾಜಿರಾವ್ ಅವರ ಗೂಡಂಗಡಿಗೆ ಬಂದು 5 ಮೊಟ್ಟೆಗಳನ್ನು ಖರೀದಿಸಿದ್ದಾನೆ. ಈ ವೇಳೆ ತಾನು ₹500 ನೀಡಿದ್ದೇನೆ ಎಂದು ಆತ ವಾದಕ್ಕಿಳಿದಿದ್ದಾನೆ. ಆದರೆ, ಮೃತರ ಮಗ ಭರತ್ ಬೈರೊಜಿ "ನೀವು ಕೊಟ್ಟಿದ್ದು ಕೇವಲ ₹100 " ಎಂದು ಹೇಳಿದ್ದಾರೆ. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ.ವಾದ-ವಿವಾದ ಬೆಳೆದು ಗಲಾಟೆ ತಾರಕಕ್ಕೇರಿದಾಗ ಸ್ಥಳಕ್ಕೆ ಧಾವಿಸಿದ ಭರತ್ ತಂದೆ ಶಿವಾಜಿರಾವ್ ಅವರನ್ನು ವಾಸೀಮ್ ಮುಲ್ಲಾ, ಸರ್ಫರಾಜ್ ಮುಲ್ಲಾ, ಸಾಧಿಕ್ ಮುಲ್ಲಾ ಸೇರಿದಂತೆ ನಾಲ್ವರು ಯುವಕರು ನೆಲಕ್ಕೆ ತಳ್ಳಿ, ಎದೆ ಹಾಗೂ ಮರ್ಮಾಂಗಕ್ಕೆ ಮನಸೋ ಇಚ್ಛೆ ಥಳಿಸಿದ್ದಾರೆ. ತೀವ್ರವಾಗಿ ಪೆಟ್ಟು ತಿಂದ ಶಿವಾಜಿರಾವ್ ಅವರು ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮೃತರ ಮಗ ಭರತ್ ನೀಡಿದ ದೂರಿನನ್ವಯ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂವರ ಬಂಧನ, ಒಬ್ಬ ನಾಪತ್ತೆ: ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಬುಧವಾರ ತಡರಾತ್ರಿ ಆರೋಪಿಗಳಾದ ವಾಸೀಮ್ ವಜೀರಸಾಬ್ ಮುಲ್ಲಾ, ಸಾಧಿಕ್ ವಜೀರಸಾಬ್ ಮುಲ್ಲಾ ಹಾಗೂ ಸರ್ಫರಾಜ್ ವಜೀರಸಾಬ್ ಮುಲ್ಲಾ ಎಂಬುವವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೊಬ್ಬ ಆರೋಪಿಯನ್ನು ಆದಷ್ಟು ಬೇಗ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯಶೋದಾ ವಂಟಗೋಡಿ ತಿಳಿಸಿದ್ದಾರೆ.
ಅಧಿಕಾರಿಗಳು ಮೊಕ್ಕಾಂ: ಇತ್ತೀಚೆಗಷ್ಟೇ ಜಿಲ್ಲೆಯ ನರೇಗಲ್ ಗ್ರಾಮದಲ್ಲಿ ಕಾರ ಹುಣ್ಣಿಮೆ ವೇಳೆ ಕೋಮು ಸಂಘರ್ಷ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಅತೀ ಸೂಕ್ಷ್ಮ ಪ್ರದೇಶವಾದ ರಟ್ಟೀಹಳ್ಳಿಯಲ್ಲಿ ಹತ್ಯೆ ನಡೆದಿರುವುದರಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ದಾವಣಗೆರೆ ವಲಯ ಐಜಿಪಿ ರವಿಕಾಂತೇಗೌಡ, ಎಸ್‌ಪಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್‌ಪಿ ಶಿರಕೋಳ ಸೇರಿದಂತೆ ಹಿರಿಯ ಅಧಿಕಾರಿಗಳ ದಂಡು ಸ್ಥಳಕ್ಕೆ ಭೇಟಿ ನೀಡಿ ಮೊಕ್ಕಾಂ ಹೂಡಿತು.ಪರಿಸ್ಥಿತಿಯನ್ನು ಹತೋಟಿಗೆ ತಂದ ಅಧಿಕಾರಿಗಳು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಹಿಂದೂ ಸಂಘಟನೆಗಳಿಗೆ ನೀಡಿದರು. ಆ ಬಳಿಕ ಗುರುವಾರ ಮಧ್ಯಾಹ್ನ 1 ಗಂಟೆಗೆ ಭಾರಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತರ ಅಂತ್ಯಸಂಸ್ಕಾರ ಶಾಂತಿಯುತವಾಗಿ ನೆರವೇರಿತು.ಗಣ್ಯರ ಭೇಟಿ - ಆಕ್ರೋಶ: ಮೃತರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಪಾಲಾಕ್ಷಗೌಡ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸಹ ಮೃತರ ಮನೆಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು. "ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳು ಮುಕ್ತವಾಗಿ ಬದುಕುವುದು ದುಸ್ತರವಾಗಿದೆ. ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಘಟನೆ ಬೆನ್ನಲ್ಲೇ ಈ ಹತ್ಯೆ ನಡೆದಿರುವುದು ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು " ಎಂದು ಅವರು ಆಗ್ರಹಿಸಿದರು.