ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಕೋಟೆ ನಾಡು ಚಿತ್ರದುರ್ಗ ಪ್ರವೇಶಿಸಿದ ಟಿ.ರಘುಮೂರ್ತಿ ಅವರಿಗೆ ಹೂ ಮಳೆ ಸುರಿಸಿ ಅದ್ಧೂರಿ ಸ್ವಾಗತ ಕೋರಲಾಗಿದೆ.ಈ ಮೊದಲು ನಾಲ್ಕು ಗಂಟೆಗೆ ಸಚಿವರು ಚಿತ್ರದುರ್ಗಕ್ಕೆ ಆಗಮಿಸುವರು ಎಂದು ತಿಳಿಸಲಾಗಿತ್ತು, ಆದರೂ ಹಿರಿಯೂರು ಬರ ಅಧ್ಯಯನ, ಚಳ್ಳಕೆರೆ ನಗರ ಪ್ರವೇಶ ಮಾಡಿ ನಂತರ ಚಿತ್ರದುರ್ಗಕ್ಕೆ ಆಗಮಿಸಿದಾಗ ಸೂರ್ಯಾಸ್ತವಾಗಿತ್ತು. ಗೋಧೂಳಿ ವೇಳೆ ಮದಕರಿ ನಾಯಕ ಪ್ರತಿಮೆ ಮುಂಭಾಗ ತೆರೆದ ವಾಹನದಲ್ಲಿ ಆಗಮಿಸಿದ ರಘುಮೂರ್ತಿ ಅವರ ನೆತ್ತಿ ಮೇಲೆ ಅಕ್ಷರಶಃ ಹೂಮಳೆಗರೆಯಲಾಯಿತು.
ಐದು ಜೆಸಿಬಿ ಯಂತ್ರದ ಡೋಜರ್ ತುಂಬಾ ಹೂ ತುಂಬಿದ್ದ ಅಭಿಮಾನಿಗಳು ಆಕಾಶದಿಂದ ಸುರಿದರು. ಬರೋಬ್ಬರಿ ಇಪ್ಪತ್ತು ನಿಮಿಷಗಳ ಕಾಲ ಹೂ ಮಳೆಗರೆಯಲಾಯಿತು. ಹೂ ಮಳೆಯಿಂದಾಗಿ ಮದಕರಿನಾಯಕ ವೃತ್ತದ ಸುತ್ತ ನಡೆವ ಹಾದಿಯಲ್ಲೆಲ್ಲ ನಗೆಯ ಹೂ ಹರಡಿದ್ದವು. ನಂತರ ಮದಕರಿ ನಾಯಕ ಪ್ರತಿಮೆಗೆ ಭಾರೀ ಪ್ರಮಾಣದ ಹಾರ ಸಮರ್ಪಿಸಿದ ಸಚಿವರು ನಂತರ ನೇರವಾಗಿ ವೇದಿಕೆಗೆ ಹೋದರು. ವೇದಿಕೆ ಮೇಲೂ ಹೂಮಳೆ ಗರೆಯಲಾಯಿತು.ನೆರೆದ ಸಮೂಹವನ್ನುದ್ದೇಶಿಸಿ ಮಾತನಾಡಿದ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ರಘುಮೂರ್ತಿಯವರ ಅಭಿವೃದ್ಧಿ ಕಾರ್ಯಗಳ ನೋಡಿ ಸಚಿವ ಸ್ಥಾನ ನೀಡಿದ್ದಾರೆ. ಚಿತ್ರದುರ್ಗ ಕೂಡಾ ಇನ್ನು ಮೇಲೆ ಅಭಿವೃದ್ಧಿ ಕಡೆ ಮುಖ ಮಾಡಲಿದೆ ಎಂದರು.
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಕೆಳಗೋಟೆ ಮಾತನಾಡಿ, ರಘುಮೂರ್ತಿಯವರು ಆಜಾತ ಶತ್ರು. ಎಲ್ಲರನ್ನು ಪ್ರೀತಿಯಿಂದ ಬಿಗಿದಪ್ಪುತ್ತಾರೆ. ಯಾರಿಗೂ ನೋವನ್ನುುಂಟು ಮಾಡುವುದಿಲ್ಲ. ಅಂತಹವರು ಸಚಿವರಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಕಾರ್ಯಕ್ರಮ ಅದ್ಧೂರಿಯಾಗಿ ಮಾಡಲು ಹೊರಟಿದ್ದೆವು. ಬರ ಇದೆ, ಅಂತಹುಗಳು ಬೇಡವೆಂದು ಆಕ್ಷೇಪ ಮಾಡಿದರೆಂದರು.
ಇವತ್ತು ಯಾರೇ ಚಳ್ಳಕೆರೆಗೆ ಹೋದರೆ ಮೈಸೂರು ನೋಡಿದ ಹಾಗೆ ಆಗುತ್ತೆ. ಸ್ವತಃ ಎಂಜಿನಿಯರ್ ಆಗಿದ್ದ ರಘುಮೂರ್ತಿಯವರು ತಮ್ಮ ಶಿಲ್ಪಿತನದ ಗುಣದಿಂದಾಗಿ ಚಳ್ಳಕೆರೆಯ ಕಟ್ಟಿದ್ದಾರೆ. ಇದಲ್ಲದೇ ಚೆಕ್ ಡ್ಯಾಂಗಳ ತುಂಬಿಸಿ ಭಗೀರಥರಾಗಿದ್ದಾರೆ. ಬಿ.ಜಿ.ಗೋವಿಂದಪ್ಪ, ರಘುಮೂರ್ತಿಯವರು ಜೋಡೆತ್ತುಗಳು ಇದ್ದ ಹಾಗೆ. ಅವರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ಮಾಡೋಣವೆಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವ ಡಿ.ರಘುಮೂರ್ತಿ, ಮೂರು ಬಾರಿ ಶಾಸಕನಾಗಿ ಚಳ್ಳಕೆರೆ ಮತದಾರರ ಋಣತೀರಿಸಿದ್ದೇನೆ. ಇದೀಗ ಸಚಿವಾಗಿರುವುದು ರಾಜಕೀಯ ಜೀವನದ ಮಹತ್ವದ ಮೆಟ್ಟಿಲು ಏರಿದಂತಾಗಿದೆ. ನಮ್ಮ ಸಮಾಜದ ಬಿ.ಕಾಂತರಾಜ್ ಈ ಕಾರ್ಯಕ್ರಮ ಮಾಡಿ ಗೌರವ ಸಲ್ಲಿಸಿರುವರಾದರೂ ಎಲ್ಲ ಸಮಾಜದವರ ಒಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುವುದಾಗಿ ಹೇಳಿದರು.ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತಕ್ಷಣವೇ ನಿಮ್ಮ ಜಿಲ್ಲೆಗಳಿಗೆ ಹೋಗಿ ಬರ ನಿರ್ವಹಣೆ ಮಾಡುವಂತೆ ಸೂಚಿಸಿದರು. ಹಾಗಾಗಿ ತಡ ಮಾಡದೆ ಜಿಲ್ಲೆಗೆ ಆಗಮಿಸಿ ಅಧಿಕಾರಿಗಳ ಸಭೆ ಮಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕಾರಣ ಮಾಡದೆ ಪಕ್ಷಾತೀತವಾಗಿ ನಡೆದುಕೊಳ್ಳುವುದಾಗಿ ರಘುಮೂರ್ತಿ ಹೇಳಿದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನೇರಲಗುಂಟೆ ರಾಮಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್, ಗೊಪ್ಪೆ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಫೀರ್, ಮುಖಂಡ ಅಂಜಿನಪ್ಪ, ಅಹೋಬಲ ಟಿವಿಎಸ್ ಮಾಲೀಕ ಅರುಣ್ ಕುಮಾರ್ , ಸುಹಾಸ್ ಸುದಾಕರ್, ಸಂಪತ್ ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.