ಖರ್ಜೂರ ದಿನದ ಸಂದೇಶ ಸಾರುವ ಸ್ತಬ್ಧ ಚಿತ್ರ ಮೆರವಣಿಗೆ

| Published : Mar 25 2024, 12:51 AM IST

ಸಾರಾಂಶ

ನಗರದ ಸಿ.ಎಸ್.ಐ ವೆಸ್ಲಿ ದೇವಾಲಯದ ವತಿಯಿಂದ ಪವಿತ್ರ ಖರ್ಜೂರ ದಿನದ ಅಂಗವಾಗಿ ನಗರದ ವಿವಿಧ ಬೀದಿಗಳಲ್ಲಿ ಖರ್ಜೂರ ದಿನದ ಸಂದೇಶಗಳನ್ನು ಸಾರುವ ವಿಶೇಷ ಸ್ತಬ್ಧ ಚಿತ್ರಗಳ ಮೆರವಣಿಗೆಯನ್ನು ತುಮಕೂರು ಕ್ಷೇತ್ರದ ಅಧ್ಯಕ್ಷ ಮನೋಜ್ ಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಸಿ.ಎಸ್.ಐ ವೆಸ್ಲಿ ದೇವಾಲಯದ ವತಿಯಿಂದ ಪವಿತ್ರ ಖರ್ಜೂರ ದಿನದ ಅಂಗವಾಗಿ ನಗರದ ವಿವಿಧ ಬೀದಿಗಳಲ್ಲಿ ಖರ್ಜೂರ ದಿನದ ಸಂದೇಶಗಳನ್ನು ಸಾರುವ ವಿಶೇಷ ಸ್ತಬ್ಧ ಚಿತ್ರಗಳ ಮೆರವಣಿಗೆಯನ್ನು ತುಮಕೂರು ಕ್ಷೇತ್ರದ ಅಧ್ಯಕ್ಷ ಮನೋಜ್ ಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪವಿತ್ರ ಖರ್ಜೂರ ದಿನದ ಭಾನುವಾರದ ವಿಶೇಷ ಕುರಿತು ಮಾತನಾಡಿದ ಧರ್ಮಪಾಲಕ ಮನೋಜ್ ಕುಮಾರ್, 2 ಸಾವಿರ ವರ್ಷಗಳ ಹಿಂದೆ ಏಸುಕ್ರಿಸ್ತ ಜೆರೋಸಲೇಮ್ ನಗರವನ್ನು ಪ್ರವೇಶಿಸಿದ ಸವಿನೆನಪಿಗಾಗಿ ಮತ್ತು ಪವಿತ್ರ ಶುಕ್ರವಾರ(ಗುಡ್ ಫ್ರೈಡೇ )ದ ಪೂರ್ವಭಾವಿಯಾಗಿ ಪ್ರಪಂಚದಾದ್ಯಂತ ಪವಿತ್ರ ಖರ್ಜೂರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದು ತುಮಕೂರು ನಗರದ ಚರ್ಚ್ ಸರ್ಕಲ್‌ನಿಂದ ಖರ್ಜೂರ ಭಾನುವಾರದ ದಿನದ ವಿಶೇಷಗಳನ್ನು ಬಿಂಬಿಸುವ,ಏಸುವಿನ ಶ್ರಮ, ಮರಣ ತಿಳಿಸುವ ಸ್ತಬ್ಧ ಚಿತ್ರಗಳೊಂದಿಗೆ ತುಮಕೂರು ನಗರದಲ್ಲಿರುವ ಚರ್ಚ್ಗಳ ಸಭಾಪಾಲಕರು, ಕ್ರೆಸ್ತ ಬಾಂಧವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಚರ್ಚ ಸರ್ಕಲ್‌ನಿಂದ ಹೊರಟ ಮೆರವಣಿಗೆ ಟೌನ್‌ಹಾಲ್, ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಪುನಃ ಚರ್ಚ ಸರ್ಕಲ್‌ಗೆ ಬಂದು ಸೇರಲಿದೆ.ಎಲ್ಲಾ ಕ್ರೈಸ್ತ ಬಾಂಧವರಿಗೆ ಈ ವಾರ ಅತ್ಯಂತ ವಿಶೇಷ ವಾರವಾಗಿದೆ ಎಂದರು.

ಮೆರವಣಿಗೆಯಲ್ಲಿ ಸಭಾ ಪಾಲಕರಾದ ಸುನಿತಾ ಮನೋಜ್,ಸುಧೀರ್,ಮಾರ್ಗನ್ ಸಂದೇಶ್,ಮಿಥುನ್‌ ಕುಮಾರ್, ಎಲಿಜಬೆತ್, ಸಂಜಯ್, ಸ್ಯಾಮ್ಸನ್ ಅಯ್ಯ, ವಿಕ್ಟರ್ ಜೇಕಬ್ ಹಾಗೂ ಮುಖಂಡ ಸಂಜೀವ್‌ ಕುಮಾರ್ ಸೇರಿ ಹಲವರು ಭಾಗವಹಿಸಿದ್ದರು.