ಅಯೋಧ್ಯೆ ರಾಮನಿಗೆ ಕಾಶಿ ಮಠಾಧೀಶರಿಂದ ರಜತ ಪಲ್ಲಕಿ

| Published : Feb 08 2024, 01:36 AM IST

ಸಾರಾಂಶ

ಬುಧವಾರ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಅಯೋಧ್ಯೆಯ ಬಾಲರಾಮನಿಗೆ ರಜತ ಪಲ್ಲಕ್ಕಿ ಮತ್ತು ಕಾಷ್ಠ ತೊಟ್ಟಿಲುಗಳನ್ನು ಸಮರ್ಪಿಸಲಾಯಿತು. ಶ್ರೀ ಕಾಶೀ ಮಠಾಧೀಶರು ಕೊಡುಗೆ ನೀಡಿರುವ ಈ ಬೆಳ್ಳಿಯ ಪಲ್ಲಕ್ಕಿಯನ್ನು ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ ನಿರ್ಮಿಸಲಾಗಿದೆ. ಕಾಷ್ಠ ತೊಟ್ಟಿಲನ್ನು ರಾಜಸ್ಥಾನದಲ್ಲಿ ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯ ನಂತರ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದಲ್ಲಿ ಬುಧವಾರ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಬಾಲರಾಮನಿಗೆ ರಜತ ಪಲ್ಲಕ್ಕಿ ಮತ್ತು ಕಾಷ್ಠ ತೊಟ್ಟಿಲುಗಳನ್ನು ಸಮರ್ಪಿಸಲಾಯಿತು.

ಶ್ರೀ ಕಾಶೀ ಮಠಾಧೀಶರು ಕೊಡುಗೆ ನೀಡಿರುವ ಈ ಬೆಳ್ಳಿಯ ಪಲ್ಲಕ್ಕಿಯನ್ನು ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್ ನಲ್ಲಿ ನಿರ್ಮಿಸಲಾಗಿದೆ. ಕಾಷ್ಠ ತೊಟ್ಟಿಲನ್ನು ರಾಜಸ್ಥಾನದಲ್ಲಿ ನಿರ್ಮಿಸಲಾಗಿದೆ.

ಅಯೋಧ್ಯೆಯಲ್ಲಿ ಬುಧವಾರ ಮೂರು ಲಕ್ಷಕ್ಕೂ ಅಧಿಕ ಭಕ್ತರು ಬಾಲರಾಮನ ದರ್ಶನ ಪಡೆದರು. ಮಂಡಲೋತ್ಸವದ ಪ್ರಯುಕ್ತ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಂದ ಬುಧವಾರದ ಕಲಶ ಸೇವೆ ನೆರವೇರಿತು.ಸಚಿವ ಜಾರ್ಜ್ ಭೇಟಿ:

ಇಲಾಖೆಯ ಯೋಜನೆಗಳ ನಿಮಿತ್ತ ಉಡುಪಿಗೆ ಆಗಮಿಸಿದ್ದ ರಾಜ್ಯ ಇಂಧನ ಸಟಿವ ಕೆ.ಜೆ.ಜಾರ್ಜ್ ಅವರು ಮಂಗಳವಾರ ಸರ್ವಧರ್ಮ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿದರು.

ಉಡುಪಿಯ ಶ್ರೀ ಕೃಷ್ಣ ಮಠ, ಜಾಮಿಯಾ ಮಸೀದಿ, ಶೋಕ ಮಾತಾ ಚರ್ಚ್‌ಗೆ ತೆರಳಿದ ಜಾರ್ಜ್, ಅಲ್ಲಿ ಧರ್ಮಗುರುಗಳನ್ನು ಭೇಟಿಯಾಗಿ, ಗೌರವವನ್ನು ಸ್ವೀಕರಿಸಿದರು.ರೇಶ್ಮೆ ಪಂಚೆಯುಟ್ಟು, ಶರ್ಟು ಕಳಚಿಟ್ಟು ಕೃಷ್ಣಮಠಕ್ಕೆ ಬಂದ ಸಚಿವರು, ನವದ್ವಾರ ಕಿಂಡಿಯಿಂದ ಕೃಷ್ಣನ ದರ್ಶನ ಪಡೆದರು. ನಂತರ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಕಿರಿಯ ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶ್ರೀಗಳು ಸಚಿವರಿಗೆ ತಾವು ಸಂಕಲ್ಪಿಸಿರುವ ಕೋಟಿ ಗೀತಾ ಲೇಖನ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು ಮತ್ತು ಭಗವದ್ಗೀತೆಯ ಪ್ರತಿಯೊಂದನ್ನು ನೀಡಿ ಗೌರವಿಸಿದರು.

ನಗರದ ಜಾಮಿಯಾ ಮಸೀದಿಗೆ ಭೇಟಿ ನೀಡಿದ ಸಚಿವರು, ಮಸೀದಿಯ ಖತೀಬ್ ವೌಲಾನ ಅಬ್ದುರ್ರಶೀದ್ ನದ್ವಿ ಅವರು ನಡೆಸಿಕೊಟ್ಟ ಪ್ರಾರ್ಥನೆಯಲ್ಲಿ ಭಾಗವಹಿಸಿದರು ಮತ್ತು ಮುಸ್ಲೀಂ ವೆಲ್‌ಫೇರ್ ಅಸೋಸಿಯೇಶನ್‌ನಿಂದ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.ನಂತರ ನಗರದ ಶೋಕ ಮಾತಾ ದೇವಾಲಯಕ್ಕೆ ಭೇಟಿ ನೀಡಿ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಚಿವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿದರು. ಈ ವೇಳೆ ಸಚಿವರು ಧರ್ಮಪ್ರಾಂತ್ಯ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡರಲ್ಲದೆ ಹಾಗೂ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ಸೂಚಿಸಿದರು.

ಸಚಿವರೊಂದಿಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.