ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಅವರು ಅತ್ಯಂತ ಸಭ್ಯ ಹಾಗೂ ಸರಳ ರಾಜಕಾರಣಿಯಾಗಿದ್ದರು ಎಂದು ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.ಇತ್ತೀಚೆಗೆ ಅಗಲಿದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರಿಗೆ ಭಾನುವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಗಳು ಮಾತನಾಡಿದ ಶ್ರೀಗಳು, ಅಧಿಕಾರ ಇರಲಿ, ಬಿಡಲಿ ಮುದ್ನಾಳ್ ಮಾತ್ರ ತಮ್ಮ ಸರಳತೆಯಿಂದ ಗುರುತಿಸಿಕೊಂಡವರು. ಅವರ ತಂದೆ ದಿ.ವಿಶ್ವನಾಥರಡ್ಡಿ ಅವರಂತೆ ಜೀವನದಲ್ಲಿ ಶಿಸ್ತು, ಸಿದ್ಧಾಂತ ರೂಢಿಸಿಕೊಂಡಿದ್ದರು ಎಂದು ಹೇಳಿದರು. ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ ಮಾತನಾಡಿ, ವೆಂಕಟರಡ್ಡಿ ಮುದ್ನಾಳ್ ಈ ಭಾಗಕ್ಕೆ ದೊಡ್ಡ ಶಕ್ತಿಯಾಗಿದ್ದರು. ಸಮಾಜದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು. ಅಂಥವರನ್ನು ಕಳೆದುಕೊಂಡ ನಮಗೆ ತೀವ್ರ ನೋವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ವೆಂಕಟರೆಡ್ಡಿ ಮುದ್ನಾಳ್‌ರ ಪುತ್ರ, ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ವೀರಶೈವ ಮಹಾಸಭೆಗೂ, ಮುದ್ನಾಳ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ತಾತ ದಿ.ವಿಶ್ವನಾಥರಡ್ಡಿ ಮತ್ತು ಭೀಮಣ್ಣ ಖಂಡ್ರೆ ಅವರು ಬೆಂಗಳೂರಿನಲ್ಲಿ ಮಹಾಸಭೆಗೆ ಸ್ವಂತ ಕಟ್ಟಡ ಒದಗಿಸಲು ಆಗಿನ ಕಾಲದಲ್ಲಿ ಇಡೀ ರಾಜ್ಯ ಸುತ್ತಾಡಿದವರು. ಅದರೆ, ಕಟ್ಟಡ ಉದ್ಘಾಟನೆ ಸಮಯದಲ್ಲಿ ಅವರು ನಮ್ಮನ್ನು ಅಗಲಿದರು. ಅದರಂತೆಯೇ, ತಮ್ಮ ತಂದೆಯವರು ಸಹ ವೀರಶೈವ ಮಹಾಸಭೆ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮುದ್ನಾಳ್ ಪರಿವಾರ ಸದಾ ನಿಮ್ಮ ಬೆನ್ನಿಗೆ ಇದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವೆಂಕಟರೆಡ್ಡಿ ಮುದ್ನಾಳ್‌ರ ಸಹೋದರ ರಾಚನಗೌಡ ಮುದ್ನಾಳ, ಶರಣ್ಣಪ್ಪಗೌಡ ಮಲ್ಹಾರ, ಬಸವರಾಜ ಸನ್ನದ, ಗುಂಡುರಾವ್ ಪಂಚಾಹತ್ರಿ, ನಾಗಭೂಷಣ ಕವಟಿ, ಮಹಾಸಭೆ ಯಾದಗಿರಿ ತಾಲೂಕು ಅಧ್ಯಕ್ಷ ರಾಜುಗೌಡ ಚಾಮನಳ್ಳಿ ಹಾಗೂ ಅವಿನಾಶ ಜಗನ್ನಾಥ, ಮಹೇಶ ಆನೆಗುಂದಿ, ಭೀಮಣ್ಣಗೌಡ ಕ್ಯಾತನಾಳ, ರಾಹುಲ್ ಅರಿಕೇರಿ, ನಾಗನಗೌಡ ಕನ್ಯಾಕೌಳ್ಳೂರ, ರುದ್ರಗೌಡ ಪಾಟೀಲ್, ರವಿ ಬಾಪುರೆ, ಗೌರಿ ಶಂಕರ ಹಿರೇಮಠ ವಡಗೇರಾ, ರಾಜಶೇಖರ್ ಉಪ್ಪಿನ, ರಮೇಶ ದೊಡ್ಮನಿ, ಬಸವರಾಜಪ್ಪಗೌಡ ಪಾಟೀಲ ಬಿಳ್ಹಾರ್, ಶಂಕ್ರೆಪ್ಪಗೌಡ ಗೋನಾಲ್, ಸಿದ್ದು ಕಾಮರೆಡ್ಡಿ, ಶಾಂತಗೌಡ ಪಗಲಾಪುರ,ರಾಜಶೇಖರ ಸ್ವಾಮಿ,ವೀನಯ ರಾಖಾ, ಉಪ್ಪಿನ ಇದ್ದರು. ಡಾ.ಸಿದ್ಧರಾಜ ರಡ್ಡಿ ನಿರೂಪಿಸಿ, ವಂದಿಸಿದರು.