ಫೆ.8ಕ್ಕೆ ಒಂದು ಸರಳ ಪ್ರೇಮಕಥೆ ಸಿನೆಮಾ ಬಿಡುಗಡೆ

| Published : Jan 26 2024, 01:49 AM IST

ಸಾರಾಂಶ

ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್‌ಕುಮಾರ್, ಸ್ವಾತಿಷ್ಟ ಕೃಷ್ಣನ್ ಹಾಗೂ ರಾಧಾಕೃಷ್ಣ ಖ್ಯಾತಿಯ ಮಲ್ಲಿಕಾಸಿಂಗ್ ನಟಿಸಿರುವ ಒಂದು ಸರಳ ಪ್ರೇಮಕಥೆ ಚಲನ ಚಿತ್ರ ಫೆ.8ರಂದು ರಾಜ್ಯಾದ್ಯಂತ ಬಿಡುಗಡೆಗೆಯಾಗಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿಯ ಪುತ್ರ ವಿನಯ್ ರಾಜ್‌ಕುಮಾರ್, ಸ್ವಾತಿಷ್ಟ ಕೃಷ್ಣನ್ ಹಾಗೂ ರಾಧಾಕೃಷ್ಣ ಖ್ಯಾತಿಯ ಮಲ್ಲಿಕಾಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅಪರೂಪದ ವಿಶಿಷ್ಟ ಪ್ರೇಮಕಥೆಯನ್ನು ಒಳಗೊಂಡಿರುವ ಒಂದು ಸರಳ ಪ್ರೇಮಕಥೆ ಚಲನ ಚಿತ್ರ ಫೆ.8ರಂದು ರಾಜ್ಯಾದ್ಯಂತ ಬಿಡುಗಡೆಗೆಯಾಗಲಿದೆ ಎಂದು ನಿರ್ದೇಶಕ ಸಿಂಪಲ್‌ ಸುನಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚಿತ್ರದ ನಾಯಕಿ ಸ್ವಾತಿಷ್ಠ ಕೃಷ್ಣನ್ ಅವರು ಅನುರಾಗ ಎಂಬ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಯಾವುದಕ್ಕೂ ಜಗ್ಗದೇ ಧೈರ್ಯವಾಗಿ ಮುನ್ನುಗ್ಗುವ ಜರ್ನಲಿಸ್ಟ್ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಕಮಲ್‌ಹಾಸನ್ ನಟನೆಯ ವಿಕ್ರಮ್ ಸೇರಿದಂತೆ ಒಂದಷ್ಟು ತಮಿಳು ಸಿನಿಮಾದಲ್ಲಿ ನಟಿಸಿರುವ ಸ್ವಾತಿಷ್ಠಗೆ ಒಂದು ಸರಳ ಪ್ರೇಮಕಥೆ ಚೊಚ್ಚಲ ಕನ್ನಡ ಸಿನಿಮಾವಾಗಿದೆ ಎಂದರು. ಇದೇ ಮೊದಲ ಬಾರಿಗೆ ದೊಡ್ಮನೆಯ ಕುಡಿ ವಿನಯ್ ರಾಜ್‌ಕುಮಾರ್ ಅವರಿಗೆ ನಾನು ಆಕ್ಷನ್ ಕಟ್ ಹೇಳಿದ್ದೇನೆ. ವಿನಯ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ತಮಿಳಿನ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸ್ವಾತಿಷ್ಟ ಕೃಷ್ಣನ್, ರಾಧಾಕೃಷ್ಣ ಧಾರಾವಾಹಿ ಖ್ಯಾತಿಯ ಮಲ್ಲಿಕಾಸಿಂಗ್ ಎಂಬ ಇಬ್ಬರು ನಾಯಕಿಯಾರಾಗಿ ನಟಿಸಿದ್ದು, ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಒಂದು ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು. ಉಳಿದಂತೆ ರಾಜೇಶ್ ನಟರಂಗ, ಅರುಣಾ ಬಾಲರಾಜ, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಮೈಸೂರಿನಲ್ಲೇ ಬಹುತೇಕ ಭಾಗದ ಚಿತ್ರೀಕರಣ ನಡೆಸಲಾಗಿದೆ. ಆದಿ ಅವರ ಸಂಕಲನ, ವೀರ್‌ಸಮರ್ಥ್ ಅವರ ಸಂಗೀತ ನಿರ್ದೇಶನ, ಕಾರ್ತಿಕ್ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ. ಅಂದಹಾಗೆ ಈ ಚಿತ್ರವನ್ನು ಮೈಸೂರು ರಮೇಶ್ ಅವರು ನಿರ್ಮಿಸಿದ್ದಾರೆ.

ಚಿತ್ರದ ನಾಯಕ ನಟ ವಿನಯ್ ರಾಜಕುಮಾರ, ಈಗಾಗಲೇ ರಾಜ್ಯದಾದ್ಯಂತ `ಒಂದು ಸರಳ ಪ್ರೇಮಕಥೆ’ ಚಿತ್ರದ ಪ್ರಚಾರ ಕಾರ್ಯ ನಡೆಸುತ್ತಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಅಪ್ಪು (ಪುನೀತ್ ರಾಜಕುಮಾರ) ಅವರನ್ನು ಮರೆಯಲು ಸಾಧ್ಯವಿಲ್ಲ. ಅವರ ನೆನಪು ಈಗಲೂ ಕಾಡುತ್ತಿದೆ. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಸ್ಥಾನ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅವರಿಗೆ ಚಲಚಿನತ್ರವೇ ಜಗತ್ತಾಗಿತ್ತು. ಅದನ್ನು ಅವರು ಬಹಳ ಪ್ರೀತಿಸುತ್ತಿದ್ದರು. ನಮಗೂ ಕೂಡ ಹಲವಾರು ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಾವು ಸಾಗುತ್ತೇವೆ ಎಂದು ಹೇಳಿದರು.