ಕೆಪಿಎಸ್‌ಸಿ ಮೂಲಕ ಆಗಸ್ಟ್ 27 ರಂದು ನಿಗದಿಪಡಿಸಿರುವ ಪರೀಕ್ಷೆ ಮುಂದೂಡಿಕೆಗೆ ಸಣ್ಣ ಗುಂಪಿನ ಲಾಬಿ: ಅತೀಕ್‌

| Published : Aug 26 2024, 01:42 AM IST / Updated: Aug 26 2024, 10:07 AM IST

KPSC
ಕೆಪಿಎಸ್‌ಸಿ ಮೂಲಕ ಆಗಸ್ಟ್ 27 ರಂದು ನಿಗದಿಪಡಿಸಿರುವ ಪರೀಕ್ಷೆ ಮುಂದೂಡಿಕೆಗೆ ಸಣ್ಣ ಗುಂಪಿನ ಲಾಬಿ: ಅತೀಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೆಪಿಎಸ್‌ಸಿ ಮೂಲಕ ಆಗಸ್ಟ್ 27 ರಂದು (ಮಂಗಳವಾರ) ನಿಗದಿಪಡಿಸಿರುವ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯನ್ನು ಮುಂದೂಡಲು ಆಗ್ರಹಿಸಿ ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಲಾಬಿ ನಡೆಸುತ್ತಿದೆ ಎಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಸ್ಪಷ್ಟಪಡಿಸಿದ್ದಾರೆ.

 ಬೆಂಗಳೂರು :  ಕೆಪಿಎಸ್‌ಸಿ ಮೂಲಕ ಆಗಸ್ಟ್ 27 ರಂದು (ಮಂಗಳವಾರ) ನಿಗದಿಪಡಿಸಿರುವ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯನ್ನು ಮುಂದೂಡಲು ಆಗ್ರಹಿಸಿ ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಲಾಬಿ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಕಾಲವಕಾಶ ನೀಡಿದ್ದು, ನಿಗದಿತ ದಿನದಂದೇ ಪರೀಕ್ಷೆ ನಡೆಸಲು ಆಯೋಗ ನಿರ್ಧಾರ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಲ ಆಕಾಂಕ್ಷಿಗಳ ಗುಂಪು ಪರೀಕ್ಷೆ ಮುಂದೂಡುವಂತೆ ಒತ್ತಡ ಹೇರಲು ಕೆಪಿಎಸ್‌ಸಿ, ಡಿಪಿಎಆರ್‌ ಹಾಗೂ ಮುಖ್ಯಮಂತ್ರಿಗಳ ಕಚೇರಿಯ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ಕರೆ ಹಾಗೂ ವಾಟ್ಸಾಪ್‌ ಸಂದೇಶ ಸುರಿಮಳೆ ಸುರಿಸುತ್ತಿದೆ. ‘ಕೆಪಿಎಸ್‌ಸಿ ಸುತ್ತ ಅನುಮಾನಗಳ ಹುತ್ತ!’ ಎಂಬಂತಹ ಪದಗಳನ್ನು ಬಳಸಿ ಸಾಕಷ್ಟು ತಪ್ಪು ಮಾಹಿತಿ ಹರಡಿ ಹಗರಣ ನಡೆದಿದೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ನನ್ನ ಫೋನ್ ಏರೋಪ್ಲೇನ್ ಮೋಡ್‌ನಲ್ಲಿ ಇಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ ಅಥವಾ ಸರ್ಕಾರವು ನೀಡಿರುವ ಹೆಚ್ಚುವರಿ ಅವಕಾಶ ಮತ್ತು ವಯೋಮಿತಿ ಸಡಿಲಿಕೆಯನ್ನು ಪಡೆದ ಸುಮಾರು 1500 ವಿದ್ಯಾರ್ಥಿಗಳು (ವಯೋಮಿತಿ ಸಡಿಲಿಕೆ ನೀಡಿದ ನಂತರ ತಡವಾಗಿ ಅರ್ಜಿ ಸಲ್ಲಿಸಿದವರು) ಲಾಬಿ ನಡೆಸುತ್ತಿದ್ದಾರೆ.

ಇವರ ಲಾಬಿಗೆ ಮಣಿದರೆ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕಿ ಅನ್ಯಾಯ ಎದುರಿಸುತ್ತಾರೆ. ಈಗಾಗಲೇ 2.5 ಲಕ್ಷ ಅಭ್ಯರ್ಥಿಗಳು ಪೂರ್ಣ ಸಿದ್ಧತೆ ನಡೆಸಿದ್ದಾರೆ, ಪರೀಕ್ಷಾ ಕೇಂದ್ರಗಳಿಗೆ ಬರಲು ತಮ್ಮ ಪ್ರಯಾಣದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಪತ್ರಿಕೆಗಳ ಮುದ್ರಣಕ್ಕೆ ಸುಮಾರು 4-5 ಕೋಟಿ ಖರ್ಚಾಗುತ್ತದೆ. 2 ತಿಂಗಳು ಮುಂದೂಡಿ ಎಂದರೆ ಮುದ್ರಿತ ಪತ್ರಿಕೆಗಳನ್ನು ನಾಶಪಡಿಸಿ ಹೊಸ ಪತ್ರಿಕೆಗಳನ್ನು ಮುದ್ರಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಅಪಾಯವಿರುವುದರಿಂದ ಪೇಪರ್‌ಗಳನ್ನು ಹೆಚ್ಚು ಸಮಯ ಇಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಾಕಷ್ಟು ಅವಕಾಶ ನೀಡಲಾಗಿದೆ: ಫೆಬ್ರವರಿ 25ರಂದು ಅಧಿಸೂಚನೆ ಹೊರಡಿಸಿ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು ಮೇ 5ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಮೇ 7ರಂದು ಚುನಾವಣೆ ಬಂದ ಕಾರಣದಿಂದಾಗಿ ಜುಲೈ 21ಕ್ಕೆ ಮುಂದೂಡಲಾಗಿತ್ತು. ಈ ದಿನಾಂಕವನ್ನೂ ಆರಂಭದಲ್ಲಿ ಜುಲೈ 7ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆ ದಿನ UPSC ಪರೀಕ್ಷೆಯೊಂದಕ್ಕೆ ಘರ್ಷಣೆಯಾಗುತ್ತೆ ಎಂಬ ಕಾರಣದಿಂದಾಗಿ ಜುಲೈ 21ಕ್ಕೆ ಬದಲಾಯಿಸಲಾಗಿತ್ತು.

2017-18ರ ವಯೋಮಿತಿ ನಿರ್ಬಂಧಿತ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಅವಕಾಶ ನೀಡಲು ಜೂನ್ 21ರಂದು ಸರ್ಕಾರಿ ಆದೇಶವನ್ನು ಪ್ರಕಟಿಸಲಾಗಿತ್ತು. ಈ ರೀತಿ ವಯೋಮಿತಿ ನಿರ್ಬಂಧಿತರಿಗೆ ಅವಕಾಶ ನೀಡಿದ್ದರಿಂದ ಪರೀಕ್ಷೆಯ ದಿನಾಂಕವನ್ನು ಆಗಸ್ಟ್ 25ಕ್ಕೆ ನಡೆಸುವುದಾಗಿ ಜೂನ್ 26 ರಂದು ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು.

ಮುಖ್ಯಮಂತ್ರಿಯವರ ಕಚೇರಿಯಲ್ಲಿ ನಡೆದ ಚರ್ಚೆಯ ಬಳಿಕ ಆಗಸ್ಟ್ 25ರಂದು ನಡೆಯುವ ಪರೀಕ್ಷೆಯನ್ನು ಮುಂದೂಡಿರುವ ಕುರಿತು ಸಿದ್ದರಾಮಯ್ಯ ಅವರು ಆಗಸ್ಟ್ 3ರಂದು ಟ್ವೀಟ್ ಮಾಡಿದ್ದರು. ಬಳಿಕ ಆಯೋಗವು ಆ.25ರ ಬದಲು ಆಗಸ್ಟ್ 27ರಂದು ಮಂಗಳವಾರ ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡಿದೆ. ಮುಂದಿನ 2 ತಿಂಗಳವರೆಗೆ ಯಾವುದೇ ಭಾನುವಾರಗಳು ಖಾಲಿ ಇಲ್ಲದ ಕಾರಣದಿಂದಾಗಿ ಕೆಲಸದ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅತೀಕ್‌ ಸ್ಪಷ್ಟನೆ ನೀಡಿದ್ದಾರೆ.