ಹೊಗೆ ಉಗುಳುವ ಸಾರಿಗೆ ಬಸ್!

| Published : Jan 19 2025, 02:20 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗೇಟ್‌ ಬಳಿ ಹೊಗೆ ಉಗುಳುತ್ತಿರುವ ಸಾರಿಗೆ ಸಂಸ್ಥೆಯ ಬಸ್.‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನಲ್ಲಿ ಬಹುತೇಕ ಟಿಪ್ಪರ್‌, ಗೂಡ್ಸ್‌, ಪ್ಯಾಸೆಂಜರ್‌ ಆಟೋ, ಬೈಕ್‌ಗಳು ದಟ್ಟಾಕಾರದ ಹೊಗೆಯನ್ನು ರಸ್ತೆಗಳಲ್ಲಿ ಬಿಡುತ್ತಿವೆ.! ಇದು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ರಾಜ್ಯ ಸರ್ಕಾರದ ಅಂಗ ಸಂಸ್ಥೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ಹೊಗೆ ದಟ್ಟವಾಗಿ ಉಗುಳುತ್ತಿವೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನಗಳ ತಪಾಸಣೆ ವೇಳೆ ಪೊಲೀಸರು ಹೆಲ್ಮೆಟ್‌ ಇಲ್ಲ, ತ್ರಿಬಲ್‌ ರೈಡ್‌, ವಿಮೆ ತೋರಿಸಿ ಎನ್ನುತ್ತಾರೆ. ಕೊನೆಗೆ ವಾಯು ಮಾಲಿನ್ಯ ಪ್ರಮಾಣ ಪತ್ರ ಕೇಳುತ್ತಾರೆ. ಆದರೆ ಖಾಸಗಿ ವಾಹನ ಅದರಲ್ಲೂ ಟಿಪ್ಪರ್‌, ಗೂಡ್ಸ್‌, ಪ್ಯಾಸೆಂಜರ್‌ ಆಟೋ, ದ್ವಿಚಕ್ರ ವಾಹನಗಳಲ್ಲಿ ಹೊಗೆ ಬಂಡಿಯಂತೆ ಉಗುಳುತ್ತಿವೆ. ಹೊಗೆ ಹೆಚ್ಚುವರಿಯಾಗಿ ಉಗುಳುವ ವಾಹನಗಳ ಹಿಡಿದು ಕೇಸು ಹಾಕಿದರೆ ವಾಯು ಮಾಲಿನ್ಯ ಹತೋಟಿಗೆ ಬರಲಿದೆ. ಇದೀಗ ಗುಂಡ್ಲುಪೇಟೆ ಕೆಎಸ್‌ಆರ್‌ಟಿಸಿ ಕೆಲವು ಹಳೆಯ ಬಸ್‌ಗಳು ಹೊಗೆ ಬಂಡಿಯಂತೆ ಸೈಲನ್ಸರ್‌ನಲ್ಲಿ ಉಗುಳುತ್ತಿವೆ. ಇದು ಹಿಂಬದಿ ಬರುವ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದ ಪೊಲೀಸ್‌, ಆರ್‌ಟಿಒ ಇಲಾಖೆ ಜಾಣ ಮೌನ ವಹಿಸಿವೆ.

ಗುಂಡ್ಲುಪೇಟೆ ಸಾರಿಗೆ ಘಟಕಕ್ಕೆ ಸೇರಿದ ಕೆಎ ೧೦ ೩೫೬ ನಂಬರಿನ ಬಸ್‌ನ ಹಿಂಬದಿ ಹೊಗೆ ಉಗುಳುವುದನ್ನು ಕಂಡು ಹಿಂಬದಿ ಬರುತ್ತಿದ್ದ ಬೈಕ್‌ ಸವಾರರು ಕೆಎಸ್‌ಆರ್‌ಟಿಸಿಗೆ ಹಿಡಿ ಶಾಪ ಹಾಕಿದ್ದಾರೆ.

ಆರ್‌ಟಿಒ ನಿರ್ಲಕ್ಷ್ಯ:

ಜಿಲ್ಲಾ ಕೇಂದ್ರದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಇದೆ. ಆದರೂ ಬಹುತೇಕ ಆಟೋ, ಟಿಪ್ಪರ್‌ಗಳಲ್ಲಿ ಎಫ್‌ಸಿ ಮುಗಿದಿದೆ. ಟಿಪ್ಪರ್‌ಗಳಲ್ಲಿ ನಂಬರ್‌ ಪ್ಲೇಟ್‌ಗಳೇ ಮಾಯ. ಹೊಗೆ ಉಗುಳುವ, ಅಧಿಕ ಭಾರ ಹೊತ್ತು ಸಾಗುವ ಟಿಪ್ಪರ್‌ಗಳ ಮೇಲೆ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೊಗೆ ಉಗುಳುವುದು ಕೇವಲ ಟಿಪ್ಪರ್‌ಗಳು ಅಥವಾ ಸಾರಿಗೆ ಸಂಸ್ಥೆ ಬಸ್‌ಗಳಲ್ಲ ಹಳೆಯ ಗೂಡ್ಸ್ ಮತ್ತು ಪ್ಯಾಸೆಂಜರ್ ಆಟೋ, ಗೂಡ್ಸ್, ಬೈಕ್, ಟೆಂಪೋ, ಲಾರಿ ಹೊಗೆ ಉಗುಳುಗೊಂಡು ವಾಯು ಮಾಲಿನ್ಯ ಮಾಡುತ್ತಿವೆ.

ಆರ್‌ಟಿಒಗೆ ಇದೆಲ್ಲ ಕಾಣುತ್ತಿಲ್ಲವೇ?:

ಸಾರಿಗೆ ಇಲಾಖೆ ನಿಯಮದ ಪ್ರಕಾರ ಕಾರು, ಬಸ್‌, ಬೈಕ್‌ಗಳ ಗಾಜುಗಳ ಮೇಲೆ ಹೆಸರು ಬರೆಸಂಗಿಲ್ಲ. ಆದರೂ ನಿಯಮ ಮೀರಿ ವಾಹನಗಳ ಹಿಂಬದಿ, ಮುಂಬದಿ ಸಂಘಟನೆಗಳ ಹೆಸರು ಬರೆಸಿದ್ದರೂ ಆರ್‌ಟಿಒ ಹಿಡಿದು ಕೇಸು ಹಾಕುತ್ತಿಲ್ಲ. ವಾಹನಗಳ ನಂಬರ್‌ ಪ್ಲೇಟ್‌ಗಳ ಮೇಲೆ ಹೆಸರು, ಕಾರಿನ ಹಿಂಬಾಗ, ಮುಂಭಾಗದ ಗಾಜಿನ ಮೇಲೆ ಸಂಘಟನೆಗಳ ಹೆಸರು ಬರೆಸಿ ಹಲವು ವಾಹನಗಳು ಓಡಾಡುತ್ತಿವೆ. ಇವು ಆರ್‌ಟಿಒ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕನ್ನಡ ಪರ ಹೋರಾಟಗಾರ ಸುರೇಶ್‌ ಪ್ರಶ್ನಿಸಿದ್ದಾರೆ.