ಸಾರಾಂಶ
ರಬಕವಿ-ಬನಹಟ್ಟಿ : ಹಾಡಹಗಲೇ ಮನೆಯೊಂದರ ಮೇಲೆ ದಾಳಿ ನಡೆಸಿ ಲಾಂಗು, ಮಚ್ಚು ಹಿಡಿದು ದರೋಡೆಗಿಳಿದ ಪ್ರಕರಣ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಶುಕ್ರವಾರ ನಡೆದಿದೆ.
ಬೆಳಗ್ಗೆ ೧೧ ಗಂಟೆ ಸುಮಾರಿಗೆ ರಬಕವಿಯ ವಿದ್ಯಾನಗರದ ೫ನೇ ಕ್ರಾಸ್‌ನಲ್ಲಿರುವ ದಸ್ತು ಬರಹಗಾರ ಶಿವಾನಂದ ಕೋಲಿಯವರ ಮನೆಗೆ ನುಗ್ಗಿದ ಮುಸುಕುಧಾರಿ ಇಬ್ಬರು ವ್ಯಕ್ತಿಗಳು ಮನೆಯಲ್ಲಿದ್ದ ಮಹಿಳೆ ಹಾಗೂ ಮಗುವಿಗೆ ಮಾರಕಾಸ್ತ್ರಗಳಿಂದ ಹೆದರಿಸಿ ಕೊರಳಲ್ಲಿದ್ದ ಸುಮಾರು ೧೧ ಗ್ರಾಂ ತಾಳಿ ಸರ ಹಾಗೂ ಮಗುವಿನ ಕೊರಳಲಿದ್ದ ೨ ಗ್ರಾಂ ಚಿನ್ನದ ಸರವನ್ನು ಬೆದರಿಸಿ ಕಸಿದುಕೊಂಡಿದ್ದಾರೆ.ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಅರ್ಜುನ ಗಾಡಿವಡ್ಡರ ಹಾಗೂ ಆತನ ಅಳಿಯ ಸುನೀಲ ಗಾಡಿವಡ್ಡರ ಬಂಧಿತರು. ಇವರ ಕೈಯಲ್ಲಿ ಮಾರಕಾಸ್ತ್ರಗಳಿದ್ದ ಕಾರಣ ದಿಕ್ಕು ತೋಚದಂತಾದ ಗೃಹಿಣಿ ಭಯಗೊಂಡು ಕಿರುಚ ತೊಡಗಿದ್ದಾಳೆ. ರಸ್ತೆ ಮೇಲೆ ಸಂಚರಿಸುತ್ತಿದ್ದ ಜನ ಗಾಬರಿಗೊಂಡು ಹೀಗೇಕೆ ಮನೆಯೊಳಗೆ ಕಿರುಚುತ್ತಿದ್ದಾರೆಂದು ಆಗಮಿಸುತ್ತಿದ್ದಂತೆ ಕಳ್ಳರು ಒಳನುಗ್ಗಿದ್ದು ಖಾತರಿಯಾಗಿದೆ.
ಯೋಧನಿಂದ ಕೃತ್ಯ:
17 ವರ್ಷ ಪೂರ್ಣ ಅವಧಿ ಮುಕ್ತಾಯಗೊಳಿಸಿ 2ನೇ ಅವಧಿಗೆ 10 ವರ್ಷ ಸೇವೆಯಲ್ಲಿ ಮುಂದುವರೆದಿದ್ದ ಅರ್ಜುನ ಗಾಡಿವಡ್ಡರ ರಜೆ ನಿಮಿತ್ತ ಕಳೆದ ಜ.5 ರಂದು ಮನೆಗೆ ಬಂದಿದ್ದನೆಂದು ತಿಳಿದು ಬಂದಿದೆ. ಸದ್ಯ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಜುನ್ ಆತನ ಅಳಿಯನೊಂದಿಗೆ ಕೃತ್ಯ ವೆಸಗಿದ್ದು, ಸಾಲ ಮಾಡಿಕೊಂಡಿದ್ದರಿಂದ ಕಳ್ಳತನಕ್ಕೆ ಮುಂದಾಗಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಇದೇ ಬೀದಿಯಲ್ಲಿ ರಬಕವಿಯ ಉಪಠಾಣೆಯಲ್ಲಿ ಕರ್ತವ್ಯ ನಡೆಸುತ್ತಿರುವ ಎಸ್ಸೈ ಕರಣ್ ರಜಪೂತ ಬಾಡಿಗೆ ಮನೆಯಲ್ಲಿದ್ದರು. ಆ ವೇಳೆ ಮನೆಯಿಂದ ಕರ್ತವ್ಯಕ್ಕೆ ತೆರಳುವಾಗ ಕೋಲಿಯವರ ಮನೆಯಿಂದ ಚೀರಾಟದ ಶಬ್ದ ಕೇಳಿ ಬಂದಿದೆ. ಬೈಕ್‌ನಲ್ಲಿದ್ದ ಎಸ್ಸೈ ವಾಪಸ್ ಬಂದು ಮನೆ ಮುಂದೆ ನಿಂತು ಕೊಂಚ ಪರಿಶೀಲಿಸುತ್ತಿದ್ದಂತೆ ಒಳಗೆ ಯಾರೋ ಕಳ್ಳರು ನುಗ್ಗಿದ್ದು ಅರಿವಾಗಿದೆ. ಕೂಡಲೇ ಮನೆಯ ಹೊರಗಿನ ಬಾಗಿಲ ಕೊಂಡಿ ಹಾಕಿ ಸುತ್ತಲಿನ ಜನರೂ ಅಷ್ಟೊತ್ತಿಗೆ ಸೇರಿದ್ದಾರೆ. ಒಳಗಿದ್ದ ಇಬ್ಬರು ಆರೋಪಿಗಳಿಗೆ ಮನೆಯ ಮುಂಭಾಗದಲ್ಲಿ ಜನ ಸೇರಿರುವುದು ಗೊತ್ತಾಗಿದೆ.
ಮನೆಯಲ್ಲಿದ್ದ ಗೃಹಿಣಿಗೆ ಆವಾಜ್ ಹಾಕಿ ಹೊರ ಹೋಗಲು ಬೇರೆ ಬಾಗಿಲು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಭಯವಿಲ್ಲದೆ ಯುವತಿ ಪುಟ್ಟ ಬಾಗಿಲು ತೋರಿಸಿದ್ದಾಳೆ. ಅಲ್ಲಿಂದ ದರೋಡೆಕೋರರು ಪರಾರಿಯಾಗುತ್ತಿದ್ದಂತೆ ರಿಯಲ್ ಕಾಪ್ ಕರಣ್ ಬೆನ್ನತ್ತಿ ಹಿಡಿಯಲೆತ್ನಿಸಿದಾಗ ಎಸ್ಸೈ ಕರಣ್ ಹಾಗೂ ಬೆನ್ನತ್ತಿದ್ದ ಜನರತ್ತ ಲಾಂಗ್ ಬೀಸಿ ಬೆದರಿಸಿ ಓಡಿಸಲು ಯತ್ನಿಸಿದ್ದಾರೆ. ನಾಲ್ಕು ದಿಕ್ಕುಗಳಲ್ಲಿ ಸೇರಿದ್ದ ಜನತೆ ಕಲ್ಲು ತೋರಿಸಿ ಪಲಾಯನ ಮಾಡದಂತೆ ಮತ್ತು ಎಸ್ಸೈ ಕರಣ್ ರಜಪೂತ ಜೀವದ ಹಂಗು ತೊರೆದು ಹೆಡೆಮುರಿ ಕಟ್ಟಿದರು. ಎಎಸೈ ಕರಣ್ ಕರೆಗೆ ಸ್ಪಂದಿಸಿದ ತೇರದಾಳ ಠಾಣಾಧಿಕಾರಿ ಅಪ್ಪು ಐಗಳಿ ಸ್ಥಳಕ್ಕೆ ಆಗಮಿಸಿದರು. ಜ್ಯೋತಿ ಶಿವಾನಂದ ಕೋಲಿ ದೂರು ನೀಡಿದ್ದಾರೆ. ಈ ಕುರಿತು ತೇರದಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.