ಸಾರಾಂಶ
ರಾಣಿಬೆನ್ನೂರು: ರಜೆಗಾಗಿ ಆಗಮಿಸಿದ ಸಂದರ್ಭದಲ್ಲಿ ಸೋಮವಾರ ಹೃದಯಾಘಾತದಿಂದ ಮೃತಪಟ್ಟ ತಾಲೂಕಿನ ವೈಟಿ ಹೊನ್ನತ್ತಿ ಗ್ರಾಮದ ಇಂಡೋ ಟಿಬೆಟಿಯನ್ ಯೋಧ ಶಿವಪ್ಪ ಶಂಕ್ರಪ್ಪ ವಡತೇರ ಅಂತ್ಯಕ್ರಿಯೆ ಮಂಗಳವಾರ ಗ್ರಾಮದಲ್ಲಿ ಶೋಕಸಾಗರದ ನಡುವೆ ಸೇನಾ ಗೌರವದೊಂದಿಗೆ ಜರುಗಿತು. ಗ್ರಾಮದಲ್ಲಿ ಮೆರವಣಿಗೆ: ಯೋಧ ಶಿವಪ್ಪನ ಪಾರ್ಥಿವ ಶರೀರವನ್ನು ಟ್ರ್ಯಾಕ್ಟರ್‌ನಲ್ಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಸೇರಿದಂತೆ ಅಬಾಲವೃದ್ಧರಾದಿಯಾಗಿ ಗ್ರಾಮದ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಪಾರ್ಥಿವ ಶರೀರಕ್ಕೆ ಪುಷ್ಪಗಳನ್ನು ಸುರಿದು ಅಂತಿಮ ನಮನ ಸಲ್ಲಿಸಿದರು.
ಕುಟುಂಬಸ್ಥರ ರೋದನ: ಯೋಧನ ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮೃತ ಯೋಧನ ತಾಯಿ ಚಂದ್ರಮ್ಮ, ಪತ್ನಿ ಅನಿತಾ, ಪುತ್ರ ಉಜ್ವಲ, ಪುತ್ರಿ ಖುಷಿ ರೋದನ ಮನಕಲುಕುವಂತಿತ್ತು. ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳಗಿದ್ದು ಸೂತಕದ ವಾತಾವರಣ ಕಂಡುಬಂದಿತು.ಉಪಸಭಾಪತಿ ಸಾಂತ್ವನ: ಉಪಸಭಾಪತಿ ರುದ್ರಪ್ಪ ಲಮಾಣಿ ಗ್ರಾಮಕ್ಕೆ ಆಗಮಿಸಿ ಯೋಧನ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚ ಸಲ್ಲಿಸಿ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಜೆ4.30ಕ್ಕೆ ಸೇನಾ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆಯು ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು. ತಹಸೀಲ್ದಾರ್ ಆರ್. ಎಚ್. ಭಾಗವಾನ ಸೇರಿದಂತೆ ಪೊಲೀಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.