ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಎಸ್ಸೆಸ್ಸೆಲ್ಸಿ ಪರೀಕ್ಷೆ-೧ ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-೨ ಬರೆಯಲು ಅನುವಾಗುವಂತೆ ಮೇ.೧೫ ರಿಂದ ಜೂ.೫ ರವರೆಗೂ ಬೆಳಗ್ಗೆ ೧೦ ರಿಂದ ೪-೩೦ ರವರೆಗೂ ರಜಾದಿನಗಳು ಒಳಗೊಂಡಂತೆ ವಿಶೇಷ ತರಗತಿ ನಡೆಸಲು ಡಿಡಿಪಿಐ ಕೃಷ್ಣಮೂರ್ತಿ ಸೂಚಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ-೧ ರಲ್ಲಿ ಅನುತ್ತೀರ್ಣರಾದ ಮಕ್ಕಳ ಕಲಿಕಾಭಿವೃದ್ದಿ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು, ವಿಶೇಷ ತರಗತಿಗಳಿಗೆ ಹಾಜರಾಗುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಕ್ರಮವಹಿಸಲು ಮುಖ್ಯಶಿಕ್ಷಕರಿಗೆ ಆದೇಶಿಸಿದ್ದಾರೆ.ಶಿಕ್ಷಕರ ಹಾಜರಿ ಕಡ್ಡಾಯ
ವಿಶೇಷ ತರಗತಿಗಳಿಗೆ ಎಲ್ಲಾ ವಿಷಯ ಶಿಕ್ಷಕರ ಹಾಜರಿ ಕಡ್ಡಾಯವಾಗಿದ್ದು, ಆಯಾ ದಿನದ ಮಕ್ಕಳ ಹಾಜರಾತಿ ಅದೇ ದಿನ ಬೆಳಗ್ಗೆ ೧೧ ಗಂಟೆಯೊಳಗೆ ಬಿಇಒ ಕಚೇರಿಗೆ ಸಲ್ಲಿಸಬೇಕು. ಬಿಇಒ ಕಚೇರಿಯಲ್ಲಿ ಕ್ರೋಢೀಕರಿಸಿ ಅದೇ ದಿನ ಹಾಜರಾತಿ ಮಾಹಿತಿಯನ್ನು ಡಿಡಿಪಿಐ ಕಚೇರಿಗೆ ತಲುಪಿಸಿದ ನಂತರ ಅದನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೆ ಅಪ್‌ಲೊಡ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಯಾವುದಾದರೂ ಶಾಲೆಯಲ್ಲಿ ೧೦ಕ್ಕಿಂತ ಕಡಿಮೆ ಮಕ್ಕಳು ಅನುತ್ತೀರ್ಣರಾಗಿದ್ದಲ್ಲಿ ಆ ಕ್ಲಸ್ಟರ್ ವ್ಯಾಪ್ತಿಯ ನಾಲ್ಕೈದು ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ ವಿಶೇಷ ತರಗತಿ ನಡೆಸಲು ಕ್ರಮವಹಿಸಲು ಸೂಚಿಸಲಾಗಿದೆ.ಪರೀಕ್ಷೆ ವಂಚಿತಗರಿಗೂ ಅವಕಾಶಶೇ.೭೫ ಹಾಜರಾತಿ ಕೊರತೆಯಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ-೧ ಬರೆಯಲಾಗದೇ ವಂಚಿತರಾದ ೧೫ ವರ್ಷ ತುಂಬಿದ ವಿದ್ಯಾರ್ಥಿಗಳಿಗೂ ಸಹಾ ಪರೀಕ್ಷೆ-೨ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಪರೀಕ್ಷೆ -೧ಕ್ಕೆ ನೋಂದಣಿಯಾಗದವರಿಗೆ ಪರೀಕ್ಷೆ-೨,೩ ಬರೆಯಲು ಅವಕಾಶವಿಲ್ಲ ಎಂದು ತಿಳಿಸಲಾಗಿತ್ತು. ಮೇ.೧೫ ರ ನಂತರ ಮುಖ್ಯಶಿಕ್ಷಕರ ಲಾಗಿನ್‌ನಲ್ಲಿ ಮಾಹಿತಿ ಬಿಡುಗಡೆಯಾಗಲಿದ್ದು, ಇಂತಹ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿ ನೋಂದಣಿ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.