ಶಿರಸಿಯಲ್ಲಿ ಮೋಡಿ ಮಾಡಿದ ವಿಶೇಷ ಸಂಗೀತ ಕಾರ್ಯಕ್ರಮ

| Published : Nov 08 2025, 02:30 AM IST

ಸಾರಾಂಶ

ಶಿರಸಿ ತಾಲೂಕಿನ ಮೂಲೆಮನೆ ಕಣಗಲಮುರುಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ನೂತನ ಸಭಾಭವನದಲ್ಲಿ ಸ್ಥಳೀಯ ವತನ ಕಲಾಕುಸುಮ ಟ್ರಸ್ಟ್‌ನವರು ಆಯೋಜಿಸಿದ್ದ ಕಲಾ ಸಂಗಮ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಗಾಯನ-ವಾದನಗಳ ಕಾರ್ಯಕ್ರಮ ನಡೆಯಿತು.

ಶಿರಸಿ: ತಾಲೂಕಿನ ಮೂಲೆಮನೆ ಕಣಗಲಮುರುಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ನೂತನ ಸಭಾಭವನದಲ್ಲಿ ಸ್ಥಳೀಯ ವತನ ಕಲಾಕುಸುಮ ಟ್ರಸ್ಟ್‌ನವರು ಆಯೋಜಿಸಿದ್ದ ಕಲಾ ಸಂಗಮ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಗಾಯನ-ವಾದನಗಳ ಸಮ್ಮಿಶ್ರಣದೊಂದಿಗೆ ಸೇರಿದ ಕಿಕ್ಕಿರಿದ ಸಂಗೀತಾಭಿಮಾನಿಗಳ ಮನಸೊರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ವತನ ಕಲಾಕುಸುಮದ ಗೋವಿಂದ ಹೆಗಡೆ, ರಾಮಚಂದ್ರ ಹೆಗಡೆ ಹಾಗೂ ಲಕ್ಷ್ಮೀನರಸಿಂಹ ದೇವಸ್ಥಾನ ಟ್ರಸ್ಟ್‌ನ ಎಂ.ಜಿ. ಹೆಗಡೆ ಹುಲಿಮನೆ ಮತ್ತು ಲಕ್ಷ್ಮೀನರಸಿಂಹ ಗ್ರಾಮಾಭಿವೃದ್ಧಿಯ ಉಮೇಶ ಭಟ್ಟ ವರ್ಗಾಸರ, ವಿದ್ವಾನ್ ಪರಮೇಶ್ವರ ಭಟ್ಟ ಪುಟ್ಟನಮನೆ, ಪಂ. ಎಂ.ಪಿ. ಹೆಗಡೆ ಪಡಿಗೇರೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.

ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಕಾಶೀನಾಥ ಮೂಡಿ ಅವರ ದಿವ್ಯಾತ್ಮಕ್ಕೆ ಶಾಂತಿಕೋರಿ ಒಂದು ನಿಮಿಷದ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆನಂತರ ಆರಂಭಗೊಂಡ ಸಂಗೀತ ಕಾರ್ಯಕ್ರಮದ ಮೊದಲ ಭಾಗವಾಗಿ ಸಾಕ್ಷಿ ಭಟ್ಟ ವರ್ಗಾಸರ ತನ್ನ ಗಾಯನ ನಡೆಸಿಕೊಟ್ಟರು. ತಬಲಾದಲ್ಲಿ ಅಭಯ ಶಾಸ್ತ್ರಿ, ಹಾರ್ಮೋನಿಯಂನಲ್ಲಿ ಕಾವ್ಯಾ ಹೆಗಡೆ ಹುಳಗೋಳ ಸಾಥ್‌ ನೀಡಿದರು. ಯುವ ಪ್ರತಿಭೆಗಳಿಗೆ ರೂಪಾ ಹೆಗಡೆ, ಚಂಪಕಾ ಹೆಗಡೆ ಗೌರವ ಸಮರ್ಪಣೆ ಮಾಡಿದರು. ಸಂಗೀತದ ನಡುವೆ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸದಲ್ಲಿ ವಿದ್ವಾನ ಪರಮೇಶ್ವರ ಭಟ್ಟ ಪುಟ್ಟನಮನೆ ಅವರು ಬದುಕು ಹಾಗೂ ಸಂಗೀತದ ಮಹತ್ವದ ಕುರಿತು ವಿವರಿಸಿದರು.

ತದನಂತರ ನಡೆದ ಹಾರ್ಮೋನಿಯಂ ಸೋಲೋದಲ್ಲಿ ಅಜಯ ಹೆಗಡೆ ವರ್ಗಾಸರ ತಮ್ಮ ಸೋಲೋ ನಡೆಸಿಕೊಡುತ್ತ, ಹಾರ್ಮೋನಿಯಂ ವಾದಕ ವಿದ್ವಾನ್‌ ಗೌರೀಶ ಯಾಜಿ ಸಂಯೋಜಿಸಿದ ರಾಗಗಳನ್ನು ಸೋಗಸಾಗಿ ನುಡಿಸಿದರು. ತಬಲಾದಲ್ಲಿ ಅಕ್ಷಯ ಭಟ್ ಅಂಸಳ್ಳಿ, ತಂಬೂರಾದಲ್ಲಿ ಅನಂತಮೂರ್ತಿ ಭಟ್ಟ ಸಹಕರಿಸಿದರು. ಶಾಲಿನಿ ಹೆಗಡೆ, ಸರೋಜಾ ಹೆಗಡೆ ಗೌರವಿಸಿದರು.

ವಾದನ ಕಾರ್ಯಕ್ರಮದ ನಂತರ ನಡೆದ ಗಾಯನದಲ್ಲಿ ವಕೀಲ ಹಾಗೂ ಗಾಯಕ ಮನು ಹೆಗಡೆ ಪುಟ್ಟನಮನೆ ಸಂಗೀತ ಕಛೇರಿ ನಡೆಸಿಕೊಟ್ಟರು. ತಬಲಾದಲ್ಲಿ ನಿತಿನ ಹೆಗಡೆ ಕಲಗದ್ದೆ, ಹಾರ್ಮೋನಿಯಂನಲ್ಲಿ ಅಜಯ ಹೆಗಡೆ, ಹಿನ್ನೆಲೆ ತಂಬೂರಾದಲ್ಲಿ ನವೀನ ಮತ್ತು ಪ್ರಜ್ವಲ್‌ ಸಹಕರಿಸಿದರು.

ಕಲಾ ಸಂಗಮದ ಕೊನೆಯ ಕಾರ್ಯಕ್ರಮವಾಗಿ ಏರ್ಪಡಿಸಿದ್ದ ಗಾಯನದಲ್ಲಿ ಜಿಲ್ಲೆಯ ಹಿರಿಯ ಸಂಗೀತ ಕಲಾವಿದ ಕರ್ನಾಟಕ ಕಲಾಶ್ರೀ ಪುರಸ್ಕೃತ ಪಂ. ಎಂ.ಪಿ. ಹೆಗಡೆ ಪಡಿಗೇರೆ ಸಂಗೀತ ಕಛೇರಿ ನಡೆಸಿಕೊಟ್ಟರು. ಪಡಿಗೇರೆ ಅವರ ಗಾನಕ್ಕೆ ಸಂವಾದಿನಿಯಲ್ಲಿ ಭರತ ಹೆಗಡೆ ಹೆಬ್ಬಲಸು, ತಬಲಾದಲ್ಲಿ ಅಕ್ಷಯ ಭಟ್ಟ ಅಂಸಳ್ಳಿ, ಹಿನ್ನೆಲೆ ಸಹ ಗಾನ ಮತ್ತು ತಾನ್ಪುರದಲ್ಲಿ ಪ್ರಜ್ವಲ್‌ ಮತ್ತು ರಾಜು ಡೊಂಬೆ ಹಾಗೂ ತಾಳದಲ್ಲಿ ಮತ್ತಿಘಟ್ಟ ಅನಂತಮೂರ್ತಿ ಸಾಥ್‌ ನೀಡಿದರು.

ಊರಿನ ಹಿರಿಯರಾದ ಗೋವಿಂದ ಹೆಗಡೆ ಹಾಗೂ ರಾಮಚಂದ್ರ ಹೆಗಡೆ ಕಲಾವಿದರಿಗೆ ಗೌರವಿಸಿದರು. ವತನ ಕಲಾ ಕುಸುಮದ ಭೂಮಿಕಾ ಮನು ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಮುಖ್ಯಸ್ಥ ಮನು ಹೆಗಡೆ ಪುಟ್ಟನಮನೆ ವಂದಿಸಿದರು.