ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶ್ರಮದಾನ, ಸೇವೆಯ ಮಹತ್ವದ ಜೊತೆಗೆ ಜೀವನ ಕೌಶಲ್ಯ, ಮೌಲ್ಯಗಳ ಮಹತ್ವಕ್ಕೂ ಪ್ರಾಧಾನ್ಯತೆ ನೀಡುತ್ತದೆ. ಇದರ ಜೊತೆಗೆ ಸಮಾಜದ ಎಲ್ಲ ಸಮುದಾಯಗಳನ್ನು ಪರಿಚಯಿಸಿಕೊಳ್ಳುವಂತಹ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಎನ್.ಎಸ್.ಎಸ್. ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದು ದ ಚರ್ಚ್ ಆಫ್ ಸೌತ್ ಇಂಡಿಯಾ ಇದರ ಕರ್ನಾಟಕ ಸೆಂಟ್ರಲ್ ಡಯಾಸಿಸ್ (ಸಿ.ಎಸ್.ಐ.ಕೆ. ಎಸ್.ಡಿ.) ಇದರ ಧರ್ಮಾಧ್ಯಕ್ಷ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಹೇಳಿದರು.ಅವರು ಉಡುಪಿಯ ಆಶಾ ನಿಲಯದಲ್ಲಿ ನಡೆಯುತ್ತಿರುವ ನಗರದ ಮಹಾತ್ಮಾ ಗಾಂಧಿ ಸ್ಮಾರಕ (ಎಂ.ಜಿ.ಎಂ.) ಕಾಲೇಜಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ವಿಶೇಷ ಮಕ್ಕಳು ನಮಗಿಂತ ಭಿನ್ನವಾದ ಸಾಮರ್ಥ್ಯ ಹೊಂದಿರುವ ಹೃದಯವಂತರು. ಅವರನ್ನು ಹತ್ತಿರದಿಂದ ಅರಿಯುವ ಅವಕಾಶವನ್ನು ಎನ್.ಎಸ್.ಎಸ್. ಸ್ವಯಂಸೇವಕರೆಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದವರು ಸಲಹೆ ಮಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಯಣ ಕಾರಂತ ಮಾತನಾಡಿ, ಎಂ.ಜಿ.ಎಂ. ಕಾಲೇಜು ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಕಾಲೇಜಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶೇಷ ಮಕ್ಕಳ ಶಾಲೆಯಲ್ಲಿ ಎನ್.ಎಸ್.ಎಸ್. ಶಿಬಿರ ನಡೆಯುತ್ತಿದೆ. ಈ ಶಿಬಿರದಲ್ಲಿ ಕಲಿಯುವ ಪಾಠಗಳು ಎಲ್ಲರಿಗೂ ಒಳಿತನ್ನು ತರಲಿ ಎಂದು ಹಾರೈಸಿದರು.ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಆಶಾನಿಲಯ ಆಡಳಿತ ಮಂಡಳಿ ಸದಸ್ಯ ಸ್ಟೀಫನ್ ಕರ್ಕಡ, ವಾರ್ಡನ್ ದಿವ್ಯಜ್ಯೋತಿ, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಪ್ರೊ. ಶೈಲಜಾ, ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.ಶಿಬಿರಾಧಿಕಾರಿ ಸುಚಿತ್ ಕೋಟ್ಯಾನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಬಿರಾಧಿಕಾರಿ ರೇಖಾ ಎನ್. ಚಂದ್ರ ಪ್ರತಿಜ್ಞಾವಿಧಿ ನೆರವೇರಿಸಿದರು. ಸ್ವಯಂಸೇವಕಿ ಅಮೃತಾ ಸ್ವಾಗತಿಸಿದರು. ಅವ್ಯಕ್ತ್ ವಂದಿಸಿದರು. ಅನ್ವಿತಾ ಎಂ. ತಂತ್ರಿ ನಿರೂಪಿಸಿದರು.