ಸಾರಾಂಶ
ಶಿವಾನಂದ ಗೊಂಬಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿವಿಶ್ವಕಪ್ ಕ್ರಿಕೆಟ್ ಜ್ವರದೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಕೂಡ ಬಲು ಜೋರಾಗುತ್ತಿದೆ. ಕ್ರಿಕೆಟ್ ಬೆಟ್ಟಿಂಗ್ ಮಟ್ಟ ಹಾಕಲೆಂದೇ ಕಮಿಷನರೇಟ್ ವಿಶೇಷ ತಂಡಗಳನ್ನು ರಚಿಸಿದ್ದು, ಕೇವಲ ನಾಲ್ಕು ದಿನಗಳಲ್ಲಿ 16 ಪ್ರಕರಣ ದಾಖಲಿಸಿಕೊಂಡು 32 ಜನರನ್ನು ಬಂಧಿಸಲಾಗಿದೆ.
ಈಗ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ 2015ರಲ್ಲಿ ಹೊರಬಂದಿದ್ದ ಕ್ರಿಕೆಟ್ ಬೆಟ್ಟಿಂಗ್‌ನ ದೊಡ್ಡ ಹಗರಣವನ್ನೇ ನೆನಪಿಸುತ್ತಿದೆ. ಆದರೆ, ಬೆಟ್ಟಿಂಗ್‌ನಲ್ಲಿ ಈಗ ಸಿಕ್ಕಿರುವುದು ಬರೀ ಸಣ್ಣ ಸಣ್ಣ ಮೀನುಗಳಷ್ಟೇ. ದೊಡ್ಡ ದೊಡ್ಡ ತಿಮ್ಮಿಂಗಲುಗಳು ಇನ್ನು ಬಲೆಗೆ ಬಿದ್ದಿಲ್ಲ ಎಂಬುದು ಮಾತ್ರ ಸ್ಪಷ್ಟ.ಹಿಂದೆಯೂ ನಡೆಯುತ್ತಿತ್ತು?
2007ರಿಂದ 2015ರ ವರೆಗೆ ಇಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಇಡೀ ರಾಜ್ಯದಲ್ಲೇ ಸಂಚಲನವನ್ನುಂಟು ಮಾಡಿತ್ತು. ಆಗ ದೊಡ್ಡ ದೊಡ್ಡ ಕುಳಗಳ ಹೆಸರು ಇದರಲ್ಲಿ ಶಾಮೀಲಾಗಿದ್ದವು ಎಂಬುದು ಬಹಿರಂಗ ಸತ್ಯ. ಕೆಲ ಪೊಲೀಸ್ ಅಧಿಕಾರಿ ವರ್ಗ, ರಾಜಕಾರಣಿಗಳಷ್ಟೇ ಅಲ್ಲ ಪತ್ರಕರ್ತರ ಹೆಸರು ಕೂಡ ಆಗ ತಳಕು ಹಾಕಿಕೊಂಡಿದ್ದನ್ನು ಹುಬ್ಬಳ್ಳಿಯ ಪ್ರಜ್ಞಾವಂತರು ಮರೆತಿಲ್ಲ. ಸಿಐಡಿ ತನಿಖೆಯನ್ನೇ ಆಗ ಸರ್ಕಾರ ಮಾಡಿತ್ತು.ಇದೀಗ ಬದಲು:
ಇದೀಗ ಮೊಬೈಲ್ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ನಡೆಯುತ್ತಿದೆ. ಇದೀಗ ಬಂಧಿತರಾದವರ ಪೈಕಿ ಮೊಬೈಲ್ ಆ್ಯಪ್ ಮೂಲಕ ಇಲ್ಲಿನ ಜನರನ್ನು ಬಳಸಿಕೊಂಡು ಬೆಟ್ಟಿಂಗ್ ಕಟ್ಟಿಸುವ ಕೆಲಸದಲ್ಲೂ ತೊಡಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮೊಬೈಲ್ ಮೂಲಕವೇ ಬೆಟ್ಟಿಂಗ್ ಕಟ್ಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಇಲ್ಲಿ ಬೆಟ್ಟಿಂಗ್ ಆಡುತ್ತಿರುವವರು, ಬೆಟ್ಟಿಂಗ್ ಬುಕ್ಕಿಗಳೂ ಮುಖತಃ ಭೇಟಿ ಕೂಡ ಆಗುವುದಿಲ್ಲವಂತೆ. ಇನ್ನು ಸಂಪ್ರದಾಯದಂತೆಯೂ ಬೆಟ್ಟಿಂಗ್ ನಡೆಯುತ್ತಿದೆ. ಆದರೆ ಅದರ ಪ್ರಮಾಣ ಕಡಿಮೆ ಎಂದು ಪೊಲೀಸ್ ಇಲಾಖೆ ತಿಳಿಸುತ್ತವೆ.ನಾಲ್ಕೇ ದಿನದಲ್ಲಿ 16 ಪ್ರಕರಣ:
ವಿಶ್ವ ಕಪ್ ಪ್ರಾರಂಭವಾದ ಮೇಲೆ 4 ದಿನಗಳಲ್ಲಿ ಬರೋಬ್ಬರಿ 16 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, 32 ಜನರನ್ನು ಬಂಧಿಸಿದ್ದಾರೆ. 2 ಪ್ರಕರಣಗಳು ಮಾತ್ರ ಸಂಪ್ರದಾಯದಂತೆ ಬೆಟ್ಟಿಂಗ್ ಪ್ರಕರಣಗಳಾಗಿದ್ದರೆ, ಇನ್ನುಳಿದ 14 ಪ್ರಕರಣಗಳು ಮೊಬೈಲ್ ಆ್ಯಪ್ ಮೂಲಕವೇ ನಡೆದ ಪ್ರಕರಣಗಳಾಗಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಇಂಡಿಯಾ- ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದ್ದಾಗ ಭಾರೀ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆದಿದೆ. ಅವತ್ತು ಒಂದೇ ದಿನ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ.ವಿಶೇಷ ತಂಡ:
ಕ್ರಿಕೆಟ್ ಬೆಟ್ಟಿಂಗ್ ಪತ್ತೆಗಾಗಿಯೇ ಪ್ರತಿ ಠಾಣೆಗಳಲ್ಲೂ ಇದಕ್ಕಾಗಿ ಪ್ರತ್ಯೇಕ ವಿಶೇಷ ತಂಡವನ್ನು ರಚಿಸಲಾಗಿದೆ. ಇದಲ್ಲದೇ, ಕಮಿಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ನೇತೃತ್ವದಲ್ಲಿ 15 ಜನ ಹಿರಿಯ ಅಧಿಕಾರಿಗಳ ತಂಡವನ್ನೂ ರಚಿಸಲಾಗಿದೆ. ಈ ತಂಡಗಳೇ ಕಾರ್ಯಾಚರಣೆಗಿಳಿದಿವೆ.ವಿಶೇಷ ತಂಡಗಳಲ್ಲಿನ ಸಿಬ್ಬಂದಿಗೆ ವಿಶ್ವ ಕಪ್ ಶುರುವಾಗುವ ಮುನ್ನವೇ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಯಾವ ರೀತಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಅವುಗಳನ್ನು ಯಾವ ರೀತಿ ಪತ್ತೆ ಹಚ್ಚಬೇಕು. ಯಾವ್ಯಾವ ಬಗೆಯ ತಂತ್ರಜ್ಞಾನ ಬಳಸಿ ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂಬ ಬಗ್ಗೆಯೆಲ್ಲ ಬೆಂಗಳೂರಲ್ಲಿ ಅಧಿಕಾರಿ ವರ್ಗಕ್ಕೆ ತರಬೇತಿ ನೀಡಲಾಗಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಈ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಕಮಿಷನರೇಟ್ ತಿಳಿಸಿದೆ.
ದೊಡ್ಡ ಕುಳಗಳ ಬಂಧನ?ಸದ್ಯಕ್ಕೇನೂ ಪೊಲೀಸ್ ಕಮಿಷನರೇಟ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಿಗಾ ವಹಿಸುತ್ತಿದೆ. ಆದರೆ ಈಗ ಸಿಗುತ್ತಿರುವುದೆಲ್ಲವೂ ಬರೀ ಸಣ್ಣ ಸಣ್ಣ ಮೀನುಗಳು. ಜತೆಗೆ ಕೆಲ ಸಾವಿರಗಟ್ಟಲೇ ನಗದು ಮಾತ್ರ. ಆದರೆ ಇದರ ಹಿಂದೆ ದೊಡ್ಡ ದೊಡ್ಡ ಕುಳಗಳು ಇರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಜತೆಗೆ ಕೋಟಿಗಟ್ಟಲೇ ವ್ಯವಹಾರ ನಡೆಯುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಆದಕಾರಣ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವತ್ತ ಗಮನಹರಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.
ಮೊದಲು ಕ್ರಿಕೆಟ್ ಬೆಟ್ಟಿಂಗ್ ಹಳೆಯ ಪದ್ಧತಿಯಂತೆ ನಡೆಯುತ್ತಿತ್ತು. ಆದರೆ ಇದೀಗ ತಂತ್ರಜ್ಞಾನ ಬಳಸಿ, ಮೊಬೈಲ್ ಆ್ಯಪ್, ಮೊಬೈಲ್, ಕಂಪ್ಯೂಟರ್ ಮೂಲಕವೇ ಬೆಟ್ಟಿಂಗ್ ನಡೆಯುತ್ತಿರುವುದು ಜಾಸ್ತಿ. ಅದಕ್ಕೆ ತಕ್ಕಂತೆ ನಾವು ಸಿಬ್ಬಂದಿ ತರಬೇತಿ ನೀಡಿ ಪ್ರತ್ಯೇಕ ಟೀಂ ಮಾಡಿದ್ದೇವೆ. ನಾಲ್ಕೇ ದಿನದಲ್ಲಿ 32 ಜನರನ್ನು ಬಂಧಿಸಿದ್ದೇವೆ. ಬೆಟ್ಟಿಂಗ್ ವಿರುದ್ಧ ಸಮರವನ್ನೇ ಸಾರಿದ್ದೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಆಯುಕ್ತೆರೇಣುಕಾ ಸುಕುಮಾರ ತಿಳಿಸಿದ್ದಾರೆ.