ಬಂಧಿತ ಆರೋಪಿ ಸಿದ್ದಾರೆಡ್ಡಿ ಅಲಿಯಾಸ್ ಸ್ಪ್ಲೆಂಡರ್ ಸಿದ್ದಾರೆಡ್ಡಿ ಬಳ್ಳಾರಿಯ ಅಶೋಕನಗರದ ಅಹಂಬಾವಿ ನಿವಾಸಿ.
ಸಿರುಗುಪ್ಪ: ಹೀರೊ, ಹೋಂಡಾ ಕಂಪನಿಯ ಬೈಕ್‌ಗಳನ್ನು ಕದ್ದು ಮಾರಾಟ ಮಾಡುವುದೇ ಈತನ ಬ್ಯುಸಿನೆಸ್. ಈವರೆಗೆ ಬರೋಬ್ಬರಿ 41 ಮೋಟರ್ ಸೈಕಲ್‌ಗಳನ್ನು ಕದ್ದು ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬಂಧಿತ ಆರೋಪಿ ಸಿದ್ದಾರೆಡ್ಡಿ ಅಲಿಯಾಸ್ ಸ್ಪ್ಲೆಂಡರ್ ಸಿದ್ದಾರೆಡ್ಡಿ ಬಳ್ಳಾರಿಯ ಅಶೋಕನಗರದ ಅಹಂಬಾವಿ ನಿವಾಸಿ. ಈತ ಜನನಿಬಿಡ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲೇ ಹೊಂಚು ಹಾಕಿ ತನ್ನ ಕರಾಮತ್ತು ತೋರಿಸುತ್ತಿದ್ದ. ವಿಶೇಷವಾಗಿ ಹೀರೋ, ಹೊಂಡಾದ ಮೋಟರ್ ಸೈಕಲ್‌ಗಳೇ ಈತನ ಟಾರ್ಗೆಟ್. ತನ್ನ ಬಳಿ ಇರುವ ನಕಲಿ ಕೀಗಳನ್ನು ಬಳಸಿ ಮೋಟರ್ ಸೈಕಲ್‌ಗಳನ್ನು ಕಳ್ಳತನ ಮಾಡುತ್ತಿದ್ದ. ನಂಬರ್ ಪ್ಲೇಟ್‌ಗಳನ್ನು ತೆಗೆದುಹಾಕಿ, ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರ ಮೋಟರ್ ಸೈಕಲ್‌ಗಳ ನಂಬರ್ ಪ್ಲೇಟ್‌ಗಳ ಪೊಟೋವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಅಲ್ಲಿಂದ ನೇರವಾಗಿ ಕರ್ನಾಟಕ ಒನ್ ಸೆಂಟರ್‌ಗೆ ತೆರಳುತ್ತಿದ್ದ. ತನ್ನ ಮೋಟರ್ ಸೈಕಲ್ ಆರ್‌ಸಿ ಕಳೆದು ಹೋಗಿದೆ ಎಂದು ಹೇಳಿ ಫೋಟೋದಲ್ಲಿರುವ ನಂಬರ್ ಪ್ಲೇಟ್‌ನ ನಕಲಿ ಆರ್‌ಸಿಯನ್ನು ಡೌನ್‌ಲೋಡ್ ಮಾಡಿಸಿಕೊಳ್ಳುತ್ತಿದ್ದ. ನಂಬರ್ ಪ್ಲೇಟ್ ಮಾಡಿಕೊಡುವವರಿಂದ ಪ್ಲೇಟ್ ಮಾಡಿಸಿಕೊಂಡು, ಕಳ್ಳತನ ಮಾಡಿದ ಮೋಟರ್ ಸೈಕಲ್‌ಗೆ ಅಳವಡಿಸುತ್ತಿದ್ದ. ನಕಲಿ ಕೀಗಳನ್ನು ಮಾಡಿಸಿಕೊಂಡು ಅಂತಿಮವಾಗಿ ಕದ್ದಿದ್ದ ಮೋಟರ್ ಸೈಕಲ್‌ಗಳನ್ನು ಸೆಕೆಂಡ್ ಹ್ಯಾಂಡ್ ಮೋಟರ್ ಸೈಕಲ್ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಮಾಹಿತಿ ನೀಡಿದ್ದಾರೆ.41 ಮೋಟರ್ ಸೈಕಲ್ ವಶ:
ಸಿರುಗುಪ್ಪ, ಬಳ್ಳಾರಿ ನಗರ, ಹೊಸಪೇಟೆ, ಮೊಳಕಾಲ್ಕೂರು, ಚಳ್ಳಕೆರೆ, ಚಿತ್ರದುರ್ಗ ನಗರಗಳಿಂದ ಸುಮಾರು ₹20.50 ಲಕ್ಷ ಮೌಲ್ಯದ 41 ಮೋಟರ್ ಸೈಕಲ್‌ಗಳನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿಯನ್ನು ಬಂಧಿಸಿದ ನಗರದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪತ್ತೆಯಾದ ಮೋಟರ್ ಸೈಕಲ್‌ಗಳಲ್ಲಿ ಬಳ್ಳಾರಿ ಜಿಲ್ಲೆಯ 16, ಚಿತ್ರದುರ್ಗ ಜಿಲ್ಲೆಯ 21, ವಿಜಯನಗರ ಜಿಲ್ಲೆ 4 ಮೋಟರ್ ಸೈಕಲ್‌ಗಳಿವೆ.
ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಪರಶುರಾಮ್, ಮಲ್ಲಯ್ಯ, ಎಎಸ್‌ಐ ಪ್ರಕಾಶ್, ಸಿಬ್ಬಂದಿ ಶ್ರೀನಿವಾಸ, ಎ.ಬಸವರಾಜ, ಮುನಿಸ್ವಾಮಿ, ವಿಷ್ಣುಮೋಹನ್ ಬಾಲಚಂದ್ರ ರಾಥೋಡ್, ವಿರೂಪಾಕ್ಷಗೌಡ, ಮಾರುತಿ, ಸತೀಶ್, ಬಳ್ಳಾರಿ ಗ್ರಾಮೀಣ ಠಾಣೆಯ ಗಂಗಾಧರ, ಪಿ.ಡಿ.ಹಳ್ಳಿ ಠಾಣೆಯ ಕನಕರಾಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.