ಸಾರಾಂಶ
ಸಮಾವೇಶಕ್ಕೂ ಮೊದಲು ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಸಮಾವೇಶ ಸ್ಥಳದವರೆಗೆ ಕೊರಗ ಸಮುದಾಯದ ಚಾರಿತ್ರಿಕ ಅಸ್ಮಿತೆಯನ್ನು ಪ್ರತಿನಿಧಿಸುವ ಪರಿಕರಗಳು, ಚಿತ್ರಗಳೊಂದಿಗೆ ಬೃಹತ್ ರ್‍ಯಾಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಅಪೌಷ್ಠಿಕತೆ, ಅನಾರೋಗ್ಯದಿಂದ ಬಳಲುತ್ತಿರುವ ಕೊರಗ ಸಮುದಾಯದ ಜನಸಂಖ್ಯೆ ಗಮನಾರ್ಹವಾಗಿ ಕುಸಿದಿದೆ. ಕೊರಗ ಸೇರಿದಂತೆ ಆದಿವಾಸಿ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಇದನ್ನು ತೊಡೆದು ಹಾಕಲು ಸರ್ಕಾರ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಂಸದೆ, ರಾಷ್ಟ್ರೀಯ ಆದಿವಾಸಿ ಅಭಿವೃದ್ಧಿ ಮಂಚ್‌ನ ಅಖಿಲ ಭಾರತ ಉಪಾಧ್ಯಕ್ಷೆ ಬೃಂದಾ ಕಾರಟ್ ಒತ್ತಾಯಿಸಿದ್ದಾರೆ.ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಕೊರಗ ಸಮುದಾಯದ ಬೃಹತ್ ಆದಿವಾಸಿ ಆಕ್ರೋಶ ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು ಬಳಿಕ ಮಿನಿ ವಿಧಾನಸೌಧ ಎದುರು ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ 20 ಸಾವಿರದಷ್ಟಿದ್ದ ಕೊರಗ ಸಮುದಾಯದ ಜನಸಂಖ್ಯೆ ಈಗ 16 ಸಾವಿರಕ್ಕೆ ಕುಸಿದಿದೆ. ಕೊರಗ ಸಮುದಾಯದಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕೊರಗರ ಜನಸಂಖ್ಯೆ 12 ಸಾವಿರಕ್ಕೆ ಕುಸಿಯುವ ಆತಂಕವಿದೆ. ನಮ್ಮ ಜತೆಯಲ್ಲೇ ಬದುಕಿದ್ದ ಒಂದು ಸಮುದಾಯ ನಮ್ಮ ಕಣ್ಣೆದುರಲ್ಲೇ ನಶಿಸುತ್ತಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ತಕ್ಷಣ ಕೊರಗರ ಸರ್ವ ಏಳಿಗೆಗೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.ಕೇರಳ ಮಾದರಿ ಜಾರಿಗೆ ಒತ್ತಾಯ:
ಕೇರಳ ಸರ್ಕಾರ ಕೊರಗ ಸಮುದಾಯದವರನ್ನು ಗುರುತಿಸಿ ಅವರ ರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆ ರೂಪಿಸಿದಂತೆ ಕರ್ನಾಟಕ ಸರ್ಕಾರ ಕೂಡ ಕೊರಗ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಬೃಂದಾ ಕಾರಟ್ ಒತ್ತಾಯಿಸಿದರು. ಆದಿವಾಸಿಗಳ ಹಕ್ಕುಗಳಿಗಾಗಿ ಎಡರಂಗದ ಸಂಸದರು ಸಂಸತ್‌ನಲ್ಲಿ ಧ್ವನಿ ಎತ್ತಲಿದ್ದಾರೆ ಎಂದೂ ಇದೇ ಸಂದರ್ಭ ಅವರು ಭರವಸೆ ನೀಡಿದರು.ಕೊರಗಜ್ಜ ಬೇಕು, ಕೊರಗರು ಬೇಡ:
ಕೊರಗ ಸಮುದಾಯಕ್ಕೆ ಸೇರಿದ ದೈವ ಕೊರಗಜ್ಜನನ್ನು ಶ್ರೀಮಂತರು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶ್ರೀಮಂತರ ಮನೆಗಳ ಗೋಡೆಗಳಲ್ಲಿ ಕೊರಗಜ್ಜನ ಚಿತ್ರಗಳಿವೆ, ಆದರೆ ಕೊರಗರು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಶ್ರೀಮಂತರು ಕೊರಗಜ್ಜನ ಮುಂದೆ ಅಡ್ಡಬಿದ್ದು, ಇತ್ತಕಡೆ ಕೊರಗರನ್ನು ತುಳಿಯುತ್ತಿದ್ದಾರೆ. ದೇವರ ಮಕ್ಕಳಾದ ಕೊರಗರು ಅಪೌಷ್ಠಿಕತೆ ಮತ್ತು ಹಸಿವಿನಿಂದ ನರಳುತ್ತಿದ್ದಾರೆ ಎಂದು ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.ಪತ್ರಕರ್ತ ನವೀನ್ ಸೂರಿಂಜೆ ಬರೆದ “ಕೊರಗರು ತುಳುನಾಡಿನ ಮಾತೃ ಸಮುದಾಯ” ಪುಸ್ತಕವನ್ನು ಬೃಂದಾ ಕಾರಟ್ ಬಿಡುಗಡೆಗೊಳಿಸಿದರು.
ಕರ್ನಾಟಕದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಎಸ್.ವೈ. ಗುರುಶಾಂತ್, ಸಮಿತಿ ಸದಸ್ಯ ಶೇಖರ್ ವಾಮಂಜೂರು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮುಖಂಡರಾದ ಶ್ರೀಧರ್ ನಾಡ, ಡಾ.ಕೃಷ್ಣಪ್ಪ ಕೊಂಚಾಡಿ, ಕೆ. ಕರಿಯ, ರಶ್ಮಿ ವಾಮಂಜೂರು ಮತ್ತಿತರರಿದ್ದರು.ಸಮಾವೇಶಕ್ಕೂ ಮೊದಲು ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಸಮಾವೇಶ ಸ್ಥಳದವರೆಗೆ ಕೊರಗ ಸಮುದಾಯದ ಚಾರಿತ್ರಿಕ ಅಸ್ಮಿತೆಯನ್ನು ಪ್ರತಿನಿಧಿಸುವ ಪರಿಕರಗಳು, ಚಿತ್ರಗಳೊಂದಿಗೆ ಬೃಹತ್ ರ್‍ಯಾಲಿ ನಡೆಯಿತು.