ಬರದ ನಡುವೆ ಅಕಾಲಿಕ ಮಳೆಯ ಬರೆ

| Published : Jan 07 2024, 01:30 AM IST

ಸಾರಾಂಶ

ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೂ ಸುರಿದ ನಿರಂತರ ಮಳೆಯಿಂದ ಮುಖ್ಯ ಆಹಾರ ಬೆಳೆಯಾದ ಬತ್ತ ಅನೇಕ ಕಡೆ ಕಟಾವು ಆಗಿದ್ದು ಗದ್ದೆಯಲ್ಲೇ ಇದ್ದ ಬತ್ತದ ಪೈರು ಸಂಪೂರ್ಣ ನೀರು ಪಾಲಾಗಿತ್ತು. ಕಾಫಿ ಬೆಳೆಗಾರರು ಈಗಾಗಲೇ ಕಾಫಿ ಕುಯ್ಲು ಆರಂಭ ಮಾಡಿದ್ದು ಕಣಗಳಲ್ಲಿ ಒಣಗಲು ಹಾಕಿದ್ದ ಕೊಯ್ಲಾದ ಕಾಫಿ ಹಣ್ಣು ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ಒದ್ದೆಯಾಗಿದೆ

ಹವಾಮಾನ ವೈಪರೀತ್ಯಗಳಿಂದ ರೈತ ಕಂಗಾಲು

ಕೊಪ್ಪ: ಮಲೆನಾಡು ಭಾಗದಲ್ಲಿ ಹಳದಿ ಎಲೆ, ಬೇರು ಹುಳು, ಎಲೆಚುಕ್ಕಿ ಬೆಂಕಿ ರೋಗ, ಹೀಗೆ ಒಂದೊಂದು ತರದ ರೋಗಗಳಿಂದ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ರೈತ ಸಮೂಹ ಕಂಗೆಟ್ಟು ಹೋಗಿದೆ. ತಾನೇ ಬೆಳೆಯುವ ಬೆಳೆಗಿಂತಲು ಅದಕ್ಕೆ ತಗಲುವ ನಿರ್ವಹಣಾ ವೆಚ್ಚವೇ ಹೆಚ್ಚಾಗುತ್ತಿದೆ ಎಂದು ಕೃಷಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೂ ಸುರಿದ ನಿರಂತರ ಮಳೆಯಿಂದ ಮುಖ್ಯ ಆಹಾರ ಬೆಳೆಯಾದ ಬತ್ತ ಅನೇಕ ಕಡೆ ಕಟಾವು ಆಗಿದ್ದು ಗದ್ದೆಯಲ್ಲೇ ಇದ್ದ ಬತ್ತದ ಪೈರು ಸಂಪೂರ್ಣ ನೀರು ಪಾಲಾಗಿತ್ತು. ಕಾಫಿ ಬೆಳೆಗಾರರು ಈಗಾಗಲೇ ಕಾಫಿ ಕುಯ್ಲು ಆರಂಭ ಮಾಡಿದ್ದು ಕಣಗಳಲ್ಲಿ ಒಣಗಲು ಹಾಕಿದ್ದ ಕೊಯ್ಲಾದ ಕಾಫಿ ಹಣ್ಣು ಏಕಾಏಕಿ ಸುರಿದ ಅಕಾಲಿಕ ಮಳೆಯಿಂದ ಒದ್ದೆಯಾಗಿದೆ. ಇನ್ನು ಕೆಲವೆಡೆ ಕಣದಲ್ಲಿದ್ದ ಕಾಫಿ ಹಣ್ಣು ತೊಳೆದು ಹೋಗಿದೆ. ತೋಟದಲ್ಲಿ ಕಟಾವಿಗೆ ಬಾಕಿ ಇರುವ ಕಾಫಿ ಹಣ್ಣು ಮಳೆಯಿಂದಾಗಿ, ಗಿಡದಿಂದ ಉದುರಲು ಪ್ರಾರಂಭವಾಗಿದೆ. ಶನಿವಾರ ಮಧ್ಯಾಹ್ನ ಕೂಡ ಮಳೆ ಸುರಿದಿದ್ದು ಕಾಫಿ ಗಿಡಗಳಲ್ಲಿ ಅವಧಿಗೂ ಮುಂಚೆಯೇ ಹೂ ಬಿಡುವ ಲಕ್ಷಣಗಳು ಕಾಣುತ್ತಿದ್ದು ಮುಂದಿನ ವರ್ಷ ಕಾಫಿ ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಕಾಫಿ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ.

ಪ್ರಸ್ತುತ ಕಾಫಿಗೆ ಉತ್ತಮ ಧಾರಣೆ ಇದ್ದು ರೈತರು ಸಂತೋಷ ಪಡುತ್ತಿರುವಾಗಲೇ ಅಕಾಲಿಕ ಮಳೆ ರೈತರ ಸಂತೋಷವನ್ನು ಭಂಗಪಡಿಸಿದೆ. ಇದೇ ಸಂದರ್ಭದಲ್ಲಿ ಅಡಿಕೆ ಕೊಯ್ಲು ಆರಂಭಗೊಂಡಿದ್ದು ಅಕಾಲಿಕ ಮಳೆಯಿಂದ ಬೇಯಿಸಿದ ಅಡಿಕೆಯಲ್ಲಿ ಬಿಳಿ ಚುಕ್ಕೆ ಬಂದು ಹಾಳಾಗುವ ಪರಿಸ್ಥಿತಿ ಇದೆ. ತಾಲೂಕಿನಾದ್ಯಂತ ನೂರಾರು ಎಕರೆಯಲ್ಲಿ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಟಾವಿನ ಸಂದರ್ಭದಲ್ಲಿ ಮಳೆ ಸುರಿದು ಹಾಳಾಗುತ್ತಿದ್ದು ರೈತರ ನೆಮ್ಮದಿ ಕೆಡಿಸಿದೆ.