ಸಾರಾಂಶ
ಕನ್ನಡ ಪ್ರಭವಾರ್ತೆ ಕುಣಿಗಲ್ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರಿಂದ ಪಾನೀಯ ವಿತರಿಸಿದ ಹಿನ್ನೆಲೆಯಲ್ಲಿ ಸಂತೋಷಗೊಂಡ ಮುಸಲ್ಮಾನರು ಭಜರಂಗದಳ ಗಣೇಶನಿಗೆ ಹಾರ ಹಾಕಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.ಕಳೆದ ಕೆಲವು ದಿನಗಳಿಂದ ಗಣೇಶನ ವಿಸರ್ಜನೆ, ಮೆರವಣಿಗೆ ಸಮಯದಲ್ಲಿ ನಾಗಮಂಗಲ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮುಸಲ್ಮಾನರಿಂದ ಕಲ್ಲುತೂರಾಟ ಗುಂಪು ಘರ್ಷಣೆ ಗಲಭೆಗಳು ನಡೆದಿದ್ದರೂ ಸಹ ಕುಣಿಗಲ್ಲಿನಲ್ಲಿ ಸೌಹಾರ್ದತೆಯ ಈದ್ ಮಿಲಾದ್ ಹಾಗೂ ಗಣೇಶೋತ್ಸವ ಆಚರಿಸಿದ್ದು ಸಾಕಷ್ಟು ಉತ್ತಮ ಬೆಳವಣಿಗೆಗೆ ಕಾರಣವಾಯಿತು. ಮುಸಲ್ಮಾನರ ಈದ್ ಮಿಲಾದ್ ಮೆರವಣಿಗೆ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತಕ್ಕೆ ಬರುತ್ತಿದ್ದಂತೆ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರು ಮುಸಲ್ಮಾನರಿಗೆ ಪಾನೀಯ ಸೇರಿದಂತೆ ಸಿಹಿ ತಿಂಡಿಗಳನ್ನು ವಿತರಿಸಿ ಹಬ್ಬದ ಶುಭಾಶಯಗಳು ಕೋರಿದರು ಇದಕ್ಕೆ ಪ್ರತಿಯಾಗಿ ಮುಸಲ್ಮಾನರು ಗಣೇಶ ಹಬ್ಬದ ಶುಭಾಶಯಗಳು ಕೋರಿ ಸೌಹಾರ್ದತೆ ಮೆರೆದರು. ಹಬ್ಬಕ್ಕೆ ಭದ್ರತೆ ವಹಿಸಲು ಬಂದಿದ್ದ ತುಮಕೂರ್ ಎಡಿಷನಲ್ ಎಸ್ ಪಿ ಅಬ್ದುಲ್ ಖಾದರ್ ಮಾತನಾಡಿ ಭಾರತದಲ್ಲಿ ಅತ್ಯಂತ ಸಂತಸ ಹಾಗೂ ಸಾಮರಸ್ಯ ಸಂದೇಶವಾದ ಘಟನೆ ಇದಾಗಿದೆ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮಾಡಿದ ಈ ಕೆಲಸ ದೇಶದಲ್ಲಿ ಪ್ರತಿಯೊಬ್ಬರೂ ಕೂಡ ಸಂತಸ ಪಡುವ ವಿಚಾರವಾಗಿದೆ ಇದು ದೇಶಕ್ಕೆ ಮಾದರಿಯದ ಘಟನೆ ಆಗಿದೆ ಎಂದರು,
ಗಣೇಶನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಮುಖಂಡ ಹಮೀದ್ ಕಳೆದ ಹಲವಾರು ವರುಷಗಳಿಂದ ಗಣೇಶನ ಆಚರಣೆಯನ್ನು ಕೋಟೆ ಯುವಕರ ಸಹಯೋಗದೊಂದಿಗೆ ಮುಸಲ್ಮಾನರಾದ ನಾವುಗಳು ಆಚರಿಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಜಾತಿಯ ಸಂಕೋಲೆಗಳು ಇಲ್ಲ ನಾವು ಒಟ್ಟಾಗಿ ಬದುಕುವುದು ನಮ್ಮ ಗುರಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ರೆಹಮಾನ್ ಶರೀಫ್ ಎಲ್ಲಾ ಧರ್ಮದಲ್ಲಿ ಸೋದರತ್ವ ಸಹಬಾಳ್ವೆ ಎಂಬ ಸಂದೇಶ ಇದೆ ಪ್ರತಿಯೊಂದು ಧರ್ಮವನ್ನು ಸಂಪೂರ್ಣವಾಗಿ ತಿಳಿದಾಗ ಅದರ ಅರ್ಥ ನಮಗೆ ತಿಳಿಯುತ್ತದೆ ಎಂದರು. ಈ ಸಂದರ್ಭದಲ್ಲಿ ಮುಸಲ್ಮಾನ್ ಮುಖಂಡರಾದ ಸಮಿವುಲ್ಲಾ ಸದಾಕಾತ್ ಹಮೀದ್ ಜಬಿವುಲ್ಲಾ ಹಾಗೂ ಭಜರಂಗದಳದ ಪ್ರಮುಖರಾದ ಸತೀಶ್ ಜಗದೀಶ್ ಪುರುಷೋತ್ತಮ್ ಗಿರೀಶ್ ಕಾರ್ತಿಕ್ ಹೇಮಂತ್ ದೇವರಾಜ್ ಅರ್ಜುನ್ ಸೇರಿದಂತೆ ಇತರರು ಇದ್ದರು.