ಸಾರಾಂಶ
ಬ್ಯಾಡಗಿ: ಜಿಲ್ಲೆಯಲ್ಲಿರುವ ತಾಲೂಕು ಕ್ರೀಡಾಂಗಣಗಳಿಗೆ ತರಬೇತುದಾರರು ಸೇರಿದಂತೆ ಮೂಲಭೂತ ಸೌಕರ್ಯವಿಲ್ಲದೇ ಕ್ರೀಡಾ ಪ್ರತಿಭೆಗಳು ಅರಳುವ ಮುನ್ನವೇ ಕಮರುತ್ತಿವೆ, ಕ್ರೀಡೆಗಳು ಸೊರಗುತ್ತಿವೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಕ್ರೀಡಾಂಗಣಗಳಿಗೆ ಮೂಲ ಸೌಕರ್ಯ ಕಲ್ಪಿಸಿದರೇ ಮಾತ್ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಗೊಂದು ನಿಜವಾದ ಅರ್ಥ ಬರಲಿದೆ ಎಂದು ಪುರಸಭೆ ಸದಸ್ಯ ಬಸವರಾಜ ಛತ್ರದ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್‌ಜೆಜೆಎಂ ಕ್ರೀಡಾಂಗಣದಲ್ಲಿ ಹಾಕಿ ಮಾಂತ್ರಿಕ ಮೇ. ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಹಾಗೂ ವಿವಿಧ ಕ್ರೀಡಾಪಟುಗಳು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.ತಾಲೂಕು ಕ್ರೀಡಾಂಗಣಗಳಿಗೆ ನಿರ್ವಹಣಾ ಅನುದಾನ ತಲುಪುತ್ತಿಲ್ಲ, ಇದರಿಂದ ಕ್ರೀಡಾಪಟುಗಳಿಗೆ ಅವಶ್ಯವಿರುವ ಕ್ರೀಡಾ ಅಂಕಣಗಳು, ಕ್ರೀಡಾ ಸಾಮಗ್ರಿಗಳು, ಶೌಚಾಲಯ, ಕುಡಿಯುವ ನೀರು, ನಿರಂತರ ಅಭ್ಯಾಸಕ್ಕೆ ತರಬೇತುದಾರರು ಇಲ್ಲದಂತಾಗಿದೆ ಅದರಲ್ಲೂ ಶೌಚಾಲಯವಿಲ್ಲದೇ ಮಹಿಳಾ ಕ್ರೀಡಾಪಟುಗಳ ಗೋಳಂತೂ ಹೇಳ ತೀರದಾಗಿದೆ. ಹೀಗಿದ್ದರೂ ಸಹ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಟ್ಲರ್ ಆಹ್ವಾನ ತಿರಸ್ಕರಿಸಿದ್ದ ಧ್ಯಾನಚಂದ್: ತಹಸೀಲ್ದಾರ್ ಫೀರೋಜ್‌ಷಾ ಸೋಮನಕಟ್ಟಿ ಮಾತನಾಡಿ, ಜರ್ಮನಿ ದೇಶದ ಪರವಾಗಿ ಆಡುವಂತೆ ಅಡಾಲ್ಪ್ ಹಿಟ್ಲರ್ ಅವರಿಂದ ಬಂದ ಆಹ್ವಾನವನ್ನು ತಿರಸ್ಕರಿಸಿದ ಧ್ಯಾನಚಂದ್ ದೇಶಾಭಿಮಾನ ಮೆರೆದರಲ್ಲದೇ, ಭಾರತದ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಮೂಲಕ ನಾನೊಬ್ಬ ಭಾರತಮಾತೆಯ ಹೆಮ್ಮೆಯ ಪುತ್ರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಜನ್ಮ ದಿನದಂದು ರಾಷ್ಟ್ರೀಯ ಕ್ರೀಡಾದಿನ ಆಚರಿಸುತ್ತಿರುವುದು ಕ್ರೀಡಾಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸಲ್ಲಿಸುತ್ತಿರುವ ಗೌರವವಾಗಿದೆ ಎಂದರು.ಧ್ಯಾನಸಿಂಗ್ ಹೆಸರು ಬದಲಾವಣೆ: ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಮಾತನಾಡಿ, ಬಹುತೇಕ ಕ್ರೀಡಾಪಟುಗಳು ನಿಕ್ ನೇಮ್ ಇಟ್ಟುಕೊಳ್ಳುತ್ತಾರೆ, ಆದರೆ ಚಂದ್ರನ ಬೆಳಕಿನಲ್ಲಿ ಆಭ್ಯಾಸ ನಡೆಸಿ ಖ್ಯಾತಿ ಗಳಿಸಿದ ಪರಿಣಾಮ ಧ್ಯಾನಸಿಂಗ್ ಎಂಬ ಹೆಸರು ಧ್ಯಾನಚಂದ್ ಆಗಿ ಪರಿವರ್ತನೆಗೊಂಡಿತು, ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ 400 ಗೋಲು ಗಳಿಸಿ ಭಾರತಕ್ಕೆ ಚಿನ್ನದ ಪದಕ ಕೊಡಿಸುವಲ್ಲಿ ಧ್ಯಾನಚಂದ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಕಬಡ್ಡಿ ಆಟಕ್ಕೆ ಬೇಡಿಕೆ ಹೆಚ್ಚಾಗಿದೆ: ಪುರಸಭೆ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಸುಭಾಸ ಮಾಳಗಿ ಮಾತನಾಡಿ, ಪ್ರೊಕಬಡ್ಡಿ ಪರಿಚಯವಾದ ಬಳಿಕ ವಿಶ್ವದೆಲ್ಲೆಡೆ ಕಬಡ್ಡಿ ಆಟಕ್ಕೆ ಬೇಡಿಕೆ ಹೆಚ್ಚಾಗಿದೆ. ಒಟ್ಟು 23 ದೇಶಗಳಲ್ಲಿ ಕಬಡ್ಡಿ ಆಟ ಪರಿಚಯಿಸಲಾಗಿದೆ, ಆದರೆ ಅನುದಾನದ ಕೊರತೆಯಿಂದ ಗ್ರಾಮೀಣ ಪ್ರದೇಶದ ಕ್ರಿಡಾಪಟುಗಳಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ ಎಂದು ಅರೋಪಿಸಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಈಗಿರುವ ಶೇ.2 ಅನುದಾನವನ್ನು ಶೇ.20ಕ್ಕೆ ಹೆಚ್ಚಿಸುವ ಮೂಲಕ ಕ್ರೀಡಾಕ್ಷೇತ್ರವನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದರು.ಇದಕ್ಕೂ ಮುನ್ನ ಧ್ಯಾನಚಂದ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಲಾಯಿತು. ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಗಂಗಣ್ಣ ಎಲಿ, ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ, ನಿರ್ದೇಶಕರಾದ ಎಂ.ಆರ್. ಕೋಡಿಹಳ್ಳಿ, ಎ.ಟಿ. ಪೀಠದ, ಮಂಜುಳಾ ಭಜಂತ್ರಿ, ಹಿರಿಯ ಆಟಗಾರರಾದ ಶೇಖರ ಪಾಟೀಲ, ಜಿ.ಎಸ್. ಶಿರಗಂಬಿ, ಎಸ್.ಎನ್. ಯಮನಕ್ಕನವರ, ಈರಣ್ಣ ಬಣಕಾರ, ಶಿವಯೋಗಿ ಶಿರೂರ, ನಾಗರಾಜ ಹಾವನೂರ, ಮಂಜುನಾಥ, ಪ್ರಕಾಶ ತಾವರಗಿ, ಮಾಲತೇಶ, ದುರ್ಗೇಶ ಸೇರಿದಂತೆ ಕಬಡ್ಡಿ, ಖೋಖೋ, ವಾಲಿಬಾಲ್ ಕ್ರೀಡಾಪಟುಗಳು ಉಪಸ್ಥಿತರಿದ್ದರು.