ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಪ್ರತಿಯೊಬ್ಬ ಕ್ರೀಡಾಪಟು ಮುಂದಿನ ಪಂದ್ಯ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದೊಂದಿಗೆ ಆಟದಲ್ಲಿ ತೊಡಗಬೇಕು ಎಂದು ಮಾಜಿ ಶಾಸಕ ಬಿ.ಪ್ರಕಾಶ್ ಸಲಹೆ ನೀಡಿದರು.ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಶ್ರೀಲಕ್ಷ್ಮೀದೇವಿ ವಾಲಿಬಾಲ್ ಪ್ರೀಮಿಯರ್ ಲೀಗ್ ಯುವಕರ ಸಂಘವು ಆಯೋಜಿಸಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಕ್ರೀಡಾ ತಂಡಗಳನ್ನು ಪರಿಚಯ ಮಾಡಿಕೊಂಡು ಪಂದ್ಯಾಗಳಿಗೆ ಚಾಲನೆ ನೀಡಿ ಮಾತನಾಡಿದರು.
ಒಬ್ಬ ಆಟಗಾರನಿಗೆ ಒಂದು ಪಂದ್ಯವನ್ನು ಸೋತರೆ ಮತ್ತೊಂದು ಪಂದ್ಯ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿರುತ್ತದೆ. ಜೀವನದಲ್ಲಿ ಕೂಡ ಹಾಗೆ ಆತ್ಮ ವಿಶ್ವಾಸವನ್ನು ನಾವು ಎಲ್ಲೇ ಸೋತರೂ ಕೂಡ ಮತ್ತೊಂದು ಸಾರಿ ನಾವು ಗೆಲ್ಲುತ್ತೇವೆಂಬ ಛಲವನ್ನು ಬೆಳೆಸಿಕೊಳ್ಳಬೇಕು ಎಂದರು.ಯುವಕರು ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಲು ಕ್ರೀಡೆ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಕ್ರೀಡೆಗೆ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದರು.
ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಐಪಿಎಲ್ ಮಾದರಿಯಲ್ಲಿ ಭಾಗವಹಿಸಿದ್ದವು. ಈ ಪೈಕಿ ಮಹೇಂದ್ರಕುಮಾರ್ ಮಾಲೀಕತ್ವದ ಡಿ.ಎಂ.ಫ್ರೆಂಡ್ಸ್ ಪ್ರಥಮ ಸ್ಥಾನ (30 ಸಾವಿರ ಮತ್ತು ಟ್ರೋಪಿ), ಡಿ.ಎಂ.ಕಿರಣ್ ಮಾಲೀಕತ್ವದ ಬಜಾ ಕಿರಣ್ ಫ್ರೆಂಡ್ಸ್ ದ್ವಿತೀಯ ಸ್ಥಾನ (20 ಸಾವಿರ ಮತ್ತು ಟ್ರೋಪಿ), ಲಕ್ಷ್ಮೀಪುರದ ಸರ್ವೇವರ್ಸ್- ತೃತೀಯ ಸ್ಥಾನ (15 ಸಾವಿರ ಮತ್ತು ಟ್ರೋಪಿ), ಶ್ಯಾಂಪ್ರಸಾದ್ ಮಾಲೀಕತ್ವದ ಏರಿಯಲ್ ಆಸಲ್ಟ್ ಸ್ಕ್ವಾಡ್ 4ನೇ ಸ್ಥಾನ (10 ಸಾವಿರ ಮತ್ತು ಟ್ರೋಪಿ) ನೀಡಿ ಗೌರವಿಸಲಾಯಿತು.ಈ ವೇಳೆ ಶಾಸಕ ಎಚ್.ಟಿ.ಮಂಜು ಸಹೋದರ ಎಚ್.ಟಿ.ಲೋಕೇಶ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ತಾಲೂಕು ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಯುವ ಮುಖಂಡರಾದ ಶ್ಯಾಂಪ್ರಸಾದ್, ಮಹೇಂದ್ರಕುಮಾರ್, ಡಿ.ಎಂ.ಕಿರಣ್, ಗ್ರಾಪಂ ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಸೇರಿದಂತೆ ಲಕ್ಷ್ಮಿಪುರ ಗ್ರಾಮದ ಅನೇಕ ಮುಖಂಡರು, ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.