ಬಾಡಗಂಡಿಯಲ್ಲಿ ಸನ್ನದ್ಧಗೊಂಡ ವೇದಿಕೆ

| Published : Jul 26 2025, 02:00 AM IST

ಸಾರಾಂಶ

ವೈದ್ಯಕೀಯ ಸಂಶೋಧನಾ ಕಾಲೇಜನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸುವ ಮೂಲಕ ಎಲ್ಲರ ಕಣ್ಣರಳಿಸುವಂತೆ ಮಾಡಿದ್ದ ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಅವರು ಈಗ ಅದೇ ಜಾಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದಾರೆ.

ಆನಂದ ಜಡಿಮಠ

ಕನ್ನಡಪ್ರಭ ವಾರ್ತೆ ಬೀಳಗಿ

ವೈದ್ಯಕೀಯ ಸಂಶೋಧನಾ ಕಾಲೇಜನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸುವ ಮೂಲಕ ಎಲ್ಲರ ಕಣ್ಣರಳಿಸುವಂತೆ ಮಾಡಿದ್ದ ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಅವರು ಈಗ ಅದೇ ಜಾಗದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದಾರೆ.

ಎಸ್.ಆರ್.ಪಾಟೀಲ ಸಮೂಹ ಸಂಸ್ಥೆಗಳ ಅಡಿಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್‌ ರಜತ ಮಹೋತ್ಸವ ನಿಮಿತ್ತ ಬ್ಯಾಂಕಿನ ನವೀಕೃತ ಕಟ್ಟಡ, ಶಾಲಾ ನೂತನ ಕಟ್ಟಡ ಮತ್ತು ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಸಮಾರಂಭಕ್ಕೆ ವೇದಿಕೆ ಸನ್ನದ್ಧಗೊಂಡಿದೆ. ಆಯುರ್ವೇದಿಕ್‌ ವೈದ್ಯಕೀಯ ವಿದ್ಯಾಲಯ, ನರ್ಸಿಂಗ್‌, ಅಲೈಡ್‌ ಹೆಲ್ತ್‌ ಸೈನ್ಸ್‌ನಂತಹ ಪ್ರಮುಖ ಕಾಲೇಜುಗಳನ್ನು ಕೂಡ ತರುತ್ತಿದ್ದಾರೆ.

ಬಾಡಗಂಡಿಯಲ್ಲಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿಯೇ ಕಾರ್ಯಕ್ರಮಕ್ಕಾಗಿಯೇ ಬೃಹತ್‌ ವೇದಿಕೆ ನಿರ್ಮಾಣಗೊಂಡಿದೆ. ಈ ವೇದಿ 145 ಅಡಿ ಅಗಲ, 300 ಅಡಿ ಉದ್ದವಾಗಿದೆ. ಮಾತ್ರವಲ್ಲ, ಹತ್ತು ಸಾವಿರ ಜನರು ಪಾಲ್ಗೊಳ್ಳುವಂತೆ ಜರ್ಮನ್‌ ಟೆಂಟ್‌ ಅನ್ನು ಕೂಡ ನಿರ್ಮಾಣ ಮಾಡಲಾಗಿದೆ. ಮಳೆ ಸ್ವಲ್ಪ ಜೋರಾಗಿರುವುದರಿಂದ ಮಳೆಯಿಂದ ಪ್ರೇಕ್ಷಕರಿಗೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸುವ ಸಚಿವರು, ಶಾಸಕರು, ಅತಿಥಿಗಳಿಗೆ ರಕ್ಷಣೆಗೆ ಈ ಟೆಂಟ್‌ ತುಂಬಾ ಸಹಕಾರಿ. ಹೀಗಾಗಿ ಮಳೆ ಬಂದರೂ ತೊಂದರೆಯಾಗದಂತೆ ವಾಟರ್‌ಪ್ರೂಫ್‌ ಟೆಂಟ್‌ ರಕ್ಷಣೆ ನೀಡಲಿದೆ.

ಒಂದೇ ವೇದಿಕೆಯಲ್ಲಿ ರಿಮೋಟ್‌ ಮೂಲಕ ಉದ್ಘಾಟನೆ:

ಕಾರ್ಯಕ್ರಮ ಬೆಳಗ್ಗೆ 10.30 ರಿಂದ 2.30 ವರೆಗೆ ನಡೆಯಲಿದೆ ಎಂದು ಎಸ್‌.ಆರ್‌.ಪಾಟೀಲ ತಿಳಿಸಿದ್ದಾರೆ. ಜತೆಗೆ ಐವರು ರಾಜ್ಯ ಸರ್ಕಾರದ ಸಚಿವರು ಮತ್ತು ಓರ್ವ ಕೇಂದ್ರ ರಾಜ್ಯ ಸಚಿವರು ನಾನಾ ಕಟ್ಟಡಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೀಗಾಗಿ ಒಂದೇ ಜಾಗದಲ್ಲಿ ರಿಮೋಟ್‌ ಮೂಲಕ ಲೋಕಾರ್ಪಣೆ ಮಾಡಲು ಕೂಡ ಸಕಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಪಾಲ್ಗೊಳ್ಳುತ್ತಿರುವ ಸಚಿವರು, ಶಾಸಕರು, ಸಂಸದರು, ಅತಿಥಿ ಗಣ್ಯರಿಗೆ ವೇದಿಕೆಯಲ್ಲಿಯೇ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದಾಜು ₹10 ಸಾವಿರದವರೆಗೆ ಜನ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಟ್ರಾಫಿಕ್‌ ಜಾಮ್‌ ಆಗದಂತೆ ಎಚ್ಚರಿಕೆ:

ಕಾರ್ಯಕ್ರಮ ನಡೆಯುವ ವೈದ್ಯಕೀಯ ಕಾಲೇಜು ಮುಂದೆಯೇ ರಾಷ್ಟ್ರೀಯ ಹೆದ್ದಾರಿ ಇದೆ. ಹೀಗಾಗಿ ಎಸ್‌.ಆರ್‌. ಪಾಟೀಲ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕಾರ್ಯಕ್ರಮ ನೋಡಲು ಬರುವವರಿಗಾಗಿಯೇ ಸಕಲ ರೀತಿಯಲ್ಲಿಯೂ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಕಷ್ಟು ಜಾಗ ಕೂಡ ಇರುವುದರಿಂದ ಅತಿಥಿಗಳು ಸುಲಭವಾಗಿ ವೇದಿಕೆಗೆ ಬರಲು ಮತ್ತು ಹೋಗಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.