ತೋಂಟದಾರ್ಯ ಮದರ್ಧನಾರೀಶ್ವರರ ಕರ್ತೃಗದ್ದುಗೆ ಪ್ರಾಂಗಣಕ್ಕೆ ಕಲ್ಲಿನ ಮಂಟಪ

| Published : Jun 28 2024, 12:51 AM IST

ತೋಂಟದಾರ್ಯ ಮದರ್ಧನಾರೀಶ್ವರರ ಕರ್ತೃಗದ್ದುಗೆ ಪ್ರಾಂಗಣಕ್ಕೆ ಕಲ್ಲಿನ ಮಂಟಪ
Share this Article
  • FB
  • TW
  • Linkdin
  • Email

ಸಾರಾಂಶ

ಡಂಬಳ ಗ್ರಾಮದ ಐತಿಹಾಸಿಕ ದೇವಾಲಯ, ಗ್ರಾಮದ ಆರಾಧ್ಯದೇವರು, ಜಗದ್ಗುರು ತೋಂಟದಾರ್ಯ ಮದರ್ಧನಾರೀಶ್ವರರ ಕರ್ತೃಗದ್ದುಗೆಯ ಮಠದ ಆವರಣದಲ್ಲಿ ವಿನೂತನ ಮಾದರಿಯಲ್ಲಿ ಕಲ್ಲಿನ ಪ್ರಾಂಗಣ ಕಟ್ಟುವ ಕಾರ್ಯ ಭರದಿಂದ ನಡೆಯುತ್ತಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಗ್ರಾಮದ ಐತಿಹಾಸಿಕ ದೇವಾಲಯ, ಗ್ರಾಮದ ಆರಾಧ್ಯದೇವರು, ಜಗದ್ಗುರು ತೋಂಟದಾರ್ಯ ಮದರ್ಧನಾರೀಶ್ವರರ ಕರ್ತೃಗದ್ದುಗೆಯ ಮಠದ ಆವರಣದಲ್ಲಿ ವಿನೂತನ ಮಾದರಿಯಲ್ಲಿ ಕಲ್ಲಿನ ಪ್ರಾಂಗಣ ಕಟ್ಟುವ ಕಾರ್ಯ ಭರದಿಂದ ನಡೆಯುತ್ತಿದೆ.

ಈ ಕಾರ್ಯಕ್ಕೆ ಹೊಸಕೋಟೆಯ ಭಾಗದ ವಿಶೇಷ ಮಾದರಿ ಕಲ್ಲು ತರಿಸಲಾಗಿದ್ದು, ₹6 ಕೋಟಿ ವೆಚ್ಚದ ನೀಲನಕ್ಷೆ ರೂಪಿಸಲಾಗಿದೆ. ಅದರಂತೆ ಕಾಮಗಾರಿ ನಡೆಯುತ್ತಿದೆ.

ದೇಗುಲಕ್ಕೆ ಕಲ್ಲಿನ ಮಂಟಪ ನಿರ್ಮಿಸಬೇಕು ಎಂಬುದು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಆಶಯವಾಗಿತ್ತು. ಅದನ್ನು ಕಾರ್ಯರೂಪಕ್ಕೆ ತರಲು ಡಾ. ತೋಂಟದ ಸಿದ್ದರಾಮ ಶ್ರೀಗಳು ಮುಂದಡಿ ಇಟ್ಟಿದ್ದಾರೆ.

ತೋಂಟದ ಮದರ್ಧನಾರೀಶ್ವರರು: ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಮಠಕ್ಕೆ 900 ವರ್ಷಗಳ ಇತಿಹಾಸವಿದೆ. ಇದು ಕೋಮಸೌಹಾರ್ದದ ಮಠ ಎಂದು ಹೆಸರಾಗಿದೆ.

ಶ್ರೀಮಠಕ್ಕೆ ಅಲ್ಲಮಪ್ರಭುಗಳ ನೇರ ವಾರಸುದಾರರಾಗಿ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಬಂದರು. ಈ ಪರಂಪರೆಯಲ್ಲಿ ಅನಾದಿ ಸಿದ್ದಲಿಂಗೇಶ್ವರರ ತರುವಾಯ ದ್ವಿತೀಯ ಸಿದ್ಧಲಿಂಗೇಶ್ವರರೆಂದು ಹೆಸರುವಾಸಿಯಾಗಿದ್ದ ಡಂಬಳ ಮಠದಲ್ಲಿ ಶಿವಯೋಗಿ ಸಮಾಧಿಸ್ಥರಾದ ತೋಂಟದ ಮದರ್ಧನಾರೀಶ್ವರರ ಕರ್ತೃಗದ್ದುಗೆ ಇದೆ.

ಬಸವತತ್ವದ ಬೆಳಕು: ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪಟ್ಟಕ್ಕೆ ಬಂದ ಆನಂತರ ಬಸವತತ್ವದಂತೆ, 1975ರಲ್ಲಿ ಮನುಷ್ಯ ಮನುಷ್ಯರನ್ನು ಹೊರುವುದು ಯಾವ ನ್ಯಾಯ? ಎಂದು ಅಡ್ಡಪಲ್ಲಕ್ಕಿಯನ್ನು ನಿರಾಕರಿಸಿದರು. ಅಡ್ಡಪಲ್ಲಕ್ಕಿಯಲ್ಲಿ ಷಟ್‌ಸ್ಥಲ ಜ್ಞಾನ ಸಾರಾಮೃತ ವಚನ ಕಟ್ಟುಗಳ ಮೆರವಣಿಗೆ ನಡೆಸಿದರು. ಶ್ರೀಗಳು ಇಂತಹ ನೂರಾರು ಸಾಮಾಜಿಕ ಕಾರ್ಯಗಳಿಗೆ ನಾಂದಿ ಹಾಡಿದರು. ಸಾಮಾಜಿಕ, ಶೈಕ್ಷಣಿಕ, ಪರಿಸರ ಕ್ರಾಂತಿಯ ಮೂಲಕ ಬದಲಾವಣೆ ತಂದು ಭಕ್ತರ ಪ್ರೀತಿಗೆ ಪಾತ್ರರಾದರು.

ಸಾಮಾಜಿಕ ಜಾಡ್ಯದ ನಿವಾರಣೆ: ಸಾಮಾಜಿಕ ಜಾಢ್ಯ, ಅನಿಷ್ಟ ಆಚರಣೆ ಹೊಡೆದೋಡಿಸಲು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಶ್ರಮಿಸಿದರು. ಬಸವಣ್ಣನವರ ವಚನಗಳಂತೆ ತಮ್ಮ ನಡೆಯನ್ನಾಗಿಸಿಕೊಂಡು, ಬಸವತತ್ವ ಸಾರಿದ ಶ್ರೇಯಸ್ಸು ಅವರದಾಗಿದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಅವರಿಂದ ಕೋಮಸೌಹಾರ್ದತಾ ಪ್ರಶಸ್ತಿ ಸ್ವೀಕರಿದರು. ಡಂಬಳ ಮಠಕ್ಕೆ ಈ ಪ್ರಶಸ್ತಿ ಕಳಸಪ್ರಾಯವಾಗಿದೆ.

ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಹಾಕಿಕೊಟ್ಟ ದಾರಿಯಲ್ಲಿ ಡಾ. ತೋಂಟದ ಸಿದ್ದರಾಮ ಶ್ರೀಗಳು ನಡೆಯುತ್ತಿದ್ದು, ಮಠದ ಆವರಣ ಕಟ್ಟಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ಮೂಲಕ ಗುರು-ಶಿಷ್ಯರ ನಡುವಿನ ಸಂಬಂಧ ದೊಡ್ಡದು ಎಂದು ಸಾರಿದ್ದಾರೆ.ಡಾ. ತೋಂಟದ ಶ್ರೀಗಳ ಆಶಯದಂತೆ ಡಾ. ತೋಂಟದ ಸಿದ್ಧರಾಮ ಶ್ರೀಗಳು ಡಂಬಳ ಮಠದ ಆವರಣ ಅಭಿವೃದ್ಧಿಪಡಿಸುತ್ತಿರುವುದು ಸಂತಸ ತಂದಿದೆ ಎಂದು ಗೋಣಿಬಸಪ್ಪ ಎಸ್. ಕೋರ್ಲಹಳ್ಳಿ ಹೇಳುತ್ತಾರೆ.