ಸಾರಾಂಶ
ರಸ್ತೆಗೆ ಸಚಿವ ಎನ್.ಎಸ್.ಬೋಸರಾಜು ಹೆಸರಿಟ್ಟಿದ್ದಕ್ಕೆ ತಕರಾರು । ಕಾಂಗ್ರೆಸ್-ಬಿಜೆಪಿ ಕಿತ್ತಾಟ । ಸಾರ್ವಜನಿಕರಿಗೆ ಪ್ರಾಣ ಸಂಕಟ
ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 980ನೇ ದಿನ ಪೂರೈಸಿದೆ. 800 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣಂ ಸೌತ್ ಕೋಸ್ಟಲ್ ರೈಲ್ವೆ ವಲಯಕ್ಕೆ ರಾಯಚೂರು- ಯಾದಗಿರಿ ಸೇರ್ಪಡೆ ಮಾಡಲಾಗಿದೆ. ತುಂಗಭದ್ರಾ ಕೆಳಭಾಗದ ರೈತರಿಗೆ ಸಮರ್ಪಕ ನೀರು ಹರಿಸಲು ಸಾಧ್ಯವಾಗುತ್ತಿಲ್ಲ, ಕುಡಿಯುವ ನೀರಿನ ಅಸಮರ್ಪಕ ಸರಬರಾಜು, ಕಂಡಲ್ಲಿ ಕಾಣುವ ಘನತ್ಯಾಜ್ಯ, ಬೆಳಗದ ಬೀದಿದೀಪಗಳು, ರಿಪೇರಿ ಅರಿಯದ ರಸ್ತೆಗಳು, ಹಗಲು ರಾತ್ರಿ ಎನ್ನದೇ ಕಾಡುತ್ತಿರುವ ಬೀಡಾಡಿ ದನಗಳು, ಬೀದಿ ನಾಯಿಗಳ ಉಪಟಳ ಹೀಗೆ ಸಾಲು ಸಾಲು ಸಮಸ್ಯೆಗಳಿರುವ ರಾಯಚೂರು ನಗರದಲ್ಲಿ ಇದೀಗ ರಸ್ತೆ ರಾಜಕೀಯ ಶುರುವಾಗಿದ್ದು, ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಪರಿಶ್ರಮಿಸಬೇಕಾಗಿದ್ದ ಆಡಳಿತ ಹಾಗೂ ಪ್ರತಿಪಕ್ಷಗಳು ರಸ್ತೆ ರಂಪಾಟದಲ್ಲಿ ಮುಳುಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಮುಖ್ಯಕಾರಣ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ ಮೊದಲ ಸಭೆಯಲ್ಲಿ ಸ್ಥಳೀಯ ರಾಜೇಂದ್ರ ಗಂಜ್ ವೃತ್ತದಿಂದ ಚಂದ್ರಮೌಳೇಶ್ವರ ವೃತ್ತದ ಮಾರ್ಗದಲ್ಲಿ ಬರುವ ಗೋಶಾಲೆ ರಸ್ತೆಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರ ಹೆಸರನ್ನಿಡುವುದಕ್ಕೆ ತೀರ್ಮಾನಿಸಿರುವುದಕ್ಕೆ, ಪ್ರತಿಪಕ್ಷ ಬಿಜೆಪಿ ಆಕ್ಷೇಪಿಸಿದ್ದು, ಮಾಡಲು ಸಾಕಷ್ಟು ಕೆಲಸಗಳಿದ್ದರು ರಸ್ತೆಗೆ ಹೆಸರಿಡುವ ವಿಚಾರಕ್ಕಾಗಿ ಎದ್ದಿರುವ ತಕರಾರು ಎಲ್ಲೆಡೆ ಚರ್ಚೆಗೆ ಕ್ರಾಸಗೊಳಿಸಿದೆ.ಬೇಸರ:
ಮಹಾನಗರ ಪಾಲಿಕೆ ಮೊದಲ ಸಭೆಯಲ್ಲಿ ಅಜೆಂಡಾದಲ್ಲಿ ಈ ಪ್ರಸ್ತಾವನೆ ಇಲ್ಲದಿದ್ದರೂ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಿಗೆ ಮನವಿ ಸಲ್ಲಿಸಿ, ರಸ್ತೆಗೆ ಬೋಸರಾಜು ಅವರ ಹೆಸರಿಡುವುದಾಗಿ ತಿಳಿಸುತ್ತಿದ್ದಂತೆ ಇದಕ್ಕೆ ಬಿಜೆಪಿ ಸದಸ್ಯರು ಸಮ್ಮತಿಸಿದ್ದರು. ಆದರೆ ಸಭೆ ನಂತರ ಅದೇ ಬಿಜೆಪಿ ಸದಸ್ಯರು ತಿರುಗಿ ಬಿದ್ದಿದ್ದು, ಆಡಳಿತ ರೂಢ ಪಕ್ಷದವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಹೆಸರಿಡುವುದು ಸರಿಯಲ್ಲ ಎಂದು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಲು ಆರಂಭಿಸಿದರು.ಅದೇ ರಸ್ತೆಗೆ ಭಗವಾನ್ ಗೌತಮ ಬುದ್ಧರ ಹೆಸರಿಡಬೇಕು ಎಂದು ಕೆಲ ಸಂಘಟನೆಗಳು ನಗರಸಭೆಗೆ ಮನವಿ ಸಲ್ಲಿಸಿದ್ದರು ಸಹ ಅದನ್ನು ಪರಿಗಣಿಸದೇ ರಾಜಕೀಯ ವ್ಯಕ್ತಿಯ ಹೆಸರನ್ನು ರಸ್ತೆಗೆ ಘೋಷಣೆ ಮಾಡಿರುವುದಕ್ಕೆ ಆಡಳಿತರೂಢ ಕಾಂಗ್ರೆಸ್ಸಿಗರ ತೀರ್ಮಾನ ಸಂಘಟನೆಗಳ ಮುಖಂಡರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
ಕಿತ್ತಾಟ:ಸಚಿವರ ಹೆಸರನ್ನು ರಸ್ತೆಗಿಟ್ಟಿರುವ ತೀರ್ಮಾನದ ಪರ-ವಿರೋಧವು ವ್ಯಕ್ತವಾಗುತ್ತಿರುವಾಗಲೇ, ಕಾಂಗ್ರೆಸ್-ಬಿಜೆಪಿ ಕಿತ್ತಾಟ ದಿನೇ ದಿನೆ ಹೆಚ್ಚಾಗುತ್ತಿದೆ. ಸಭೆಯಲ್ಲಿ ಬಿಜೆಪಿ ಸದಸ್ಯರ ಗಮನಕ್ಕೆ ತಂದೇ ಈ ನಿರ್ಧಾರಕ್ಕೆ ಬಂದಿದ್ದು, ಈ ವಿಷಯದ ಪ್ರಸ್ತಾವನೆಯ ಮನವಿ ಸಲ್ಲಿಸುವ ಸಮಯದಲ್ಲಿಯೂ ಸಹ ಬಿಜೆಪಿ ಕೆಲ ಸದಸ್ಯರು ಜೊತೆಗಿದ್ದರು. ಇದೀಗ ಅವರು ರಾಜಕೀಯ ಮಾಡುತ್ತಿರುವುದಾಗಿ ಕಾಂಗ್ರೆಸ್ ಸದಸ್ಯರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ಆಡಳಿತ ನಡೆಸುತ್ತಿರುವವರೇ ಈ ರೀತಿಯಾಗಿ ಮಾಡಿದರೇ ಹೇಗೆ ಎಂದು ಬಿಜೆಪಿಗರು ವಿರೋಧದ ನುಡಿಗಳನ್ನಾಡುತ್ತಿದ್ದಾರೆ.ಈ ನಡುವೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಜಿಲ್ಲಾಧಿಕಾರಿ ನಿತೀಶ್ ಕೆ. ಅವರನ್ನು ಭೇಟಿಯಾಗಿ ಈ ವಿಷಯದ ಕುರಿತು ಸಮಾಲೋಚನೆ ನಡೆಸಿದ್ದು ತಕ್ಷಣ ಮಹಾನಗರ ಪಾಲಿಕೆಯ ತೀರ್ಮಾನ ಕೈಬಿಟ್ಟು ರಸ್ತೆಗೆ ಭಗವಾನ್ ಗೌತಮ ಬುದ್ಧರ ಹೆಸರನ್ನಿಡಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.