ಸಾರಾಂಶ
ಉತ್ತಮ ಸಮಾಜದ ಬೆಳವಣಿಗೆಗೆ ಮತ್ತು ಸದೃಢ ಪ್ರಜಾಪ್ರಭುತ್ವಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯಗಳು ಅವಶ್ಯಕ.
ಧಾರವಾಡ:
ಉತ್ತಮ ಸಮಾಜದ ಬೆಳವಣಿಗೆಗೆ ಮತ್ತು ಸದೃಢ ಪ್ರಜಾಪ್ರಭುತ್ವಕ್ಕೆ ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯಗಳು ಅವಶ್ಯಕ ಎಂದು ಕವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎಂ. ರತ್ನಾಕರ್ ಅಭಿಪ್ರಾಯಪಟ್ಟರು. ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಷಯದ ಕಾಲೇಜು ಅಧ್ಯಾಪಕರ ವೇದಿಕೆ, ಕವಿವಿ ರಾಜ್ಯಶಾಸ್ತ್ರ ವಿಭಾಗ ಜಂಟಿಯಾಗಿ ಕರ್ನಾಟಕ ಕಾಲೇಜು ಬಿಬಿಎ ಸಭಾಂಗಣದಲ್ಲಿ ‘ಪ್ರಜಾಸತ್ತಾತ್ಮಕ ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯಗಳು ಕುರಿತು ಆಯೋಜಿಸಿದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ. ಸಂವಿಧಾನ ರಾಜಕೀಯಕ್ಕೆ ತಳಹದಿಯಾಗಿದೆ. ಶಿಕ್ಷಕರ ವೇದಿಕೆಗಳು ಕಾರ್ಯಾಗಾರ, ವಿಚಾರ ಗೋಷ್ಠಿಗಳ ಜತೆಗೆ ಶಿಕ್ಷಕರ ಸಲುವಾಗಿ ಆರೋಗ್ಯ ಶಿಬಿರ ಆಯೋಜಿಸುವುದು ಸೂಕ್ತ ಎಂದರು.ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಧಾರವಾಡ ಶಾಖೆಯ ಚೇರಮನ್ ಡಾ. ಎಸ್.ಎಸ್. ಪಟಗುಂದಿ, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯು ದೇಶದಲ್ಲಿ ಅನೇಕ ಶಾಖೆಗಳನ್ನು ಹೊಂದಿವೆ. ಇವುಗಳ ಉದ್ದೇಶ ಸಂಶೋಧನೆ ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ತರಬೇತಿ ನೀಡುವುದು ಎಂದು ತಿಳಿಸಿದರು. ಭಾರತೀಯ ಆಡಳಿತ ಸೇವೆಯ ಪರೀಕ್ಷೆಗಳಿಗೆ ರಾಜ್ಯಶಾಸ್ತ್ರ ವಿಷಯವನ್ನು ವಿದ್ಯಾರ್ಥಿಗಳಿಗೆ ಓದಲು ಪ್ರೇರೇಪಿಸಬೇಕು. ಸಾಧ್ಯವಾದರೆ ಯುಪಿಎಸ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಯೋಚಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.ಕವಿವಿ ರಾಜ್ಯಶಾಸ್ತ್ರ ವಿಭಾಗದ ಸಂಯೋಜಕ ಪ್ರಾಧ್ಯಾಪಕ ಡಾ. ಎಂ.ಜಿ. ಖಾನ್, ಸಮಾಜದ ಅಭಿವೃದ್ಧಿಯಲ್ಲಿ ಸಾಮಾಜಿಕ ತಜ್ಞರ ಪಾತ್ರ ಬಹಳ ಇದೆ. ಬಹುಶಿಸ್ತಿಯ ಸಾಮಾಜಿಕ ವಿಜ್ಞಾನಗಳು ಸಮಾಜದಲ್ಲಿನ ವಾಸ್ತವಿಕ ಪ್ರಾಯೋಗಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಹಳ ಮಹತ್ವದ ಪಾತ್ರ ವಹಿಸಿವೆ ಎಂದ ಅವರು, ಸಮಾಜ ವಿಜ್ಞಾನಗಳು ಜ್ಞಾನವನ್ನು ನೀಡುವ ಬಹಳ ಸಹಕಾರಿಯಾಗಿದೆ ಎಂದರು.ಡಾ. ಎಚ್.ಸಿ. ಕಲ್ಲೊಳಕರ್ ಮಾತನಾಡಿ, ವಿಚಾರ ಸಂಕಿರಣ, ಕಾರ್ಯಾಗಾರಗಳು ಶಿಕ್ಷಕರ ಬೌದ್ಧಿಕ ಮಟ್ಟ ಹೆಚ್ಚಿಸುವ ಜತೆಗೆ ಪ್ರಸಕ್ತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ ವಿದ್ಯಮಾನ ಅರಿಯಲು ಸಹಾಯಕವಾಗುತ್ತದೆ ಎಂದರು. ಪ್ರಾಧ್ಯಾಪಕ ಡಾ. ವಿಜಯಕುಮಾರ್ ಬೇಟಗಾರ, ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಡಾ. ಎಸ್.ವಿ. ವಸ್ತ್ರದ ಮಾತನಾಡಿದರು. ರಾಜ್ಯಶಾಸ್ತ್ರ ಶಿಕ್ಷಕ ವೇದಿಕೆ ಅಧ್ಯಕ್ಷ ಪ್ರೊ. ಬಸವರಾಜ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಡಾ. ಐ.ಆರ್. ಕಾಜಗಾರ, ಎನ್.ಆರ್. ಬಾಳಿಕಾಯಿ, ಪ್ರೊ. ಬಸವರಾಜ ಪೂಜಾರ, ಡಾ. ಎಂ.ಬಿ. ದಳಪತಿ, ಡಾ. ಎನ್.ಎಂ. ಜಂಗುಭಾಯಿ, ಡಾ. ಎಸ್.ಎಸ್. ಹಿರೇಮಠ, ಡಾ. ಸಂಗೀತಾ ಕಟ್ಟಿಮನಿ, ನಾಗೇಶ ಶೆಟ್ಟಿ ಇದ್ದರು.