ಡೆಂಘೀ ನಿಯಂತ್ರಣಕ್ಕೆ ಶಕ್ತಿಮೀರಿ ಯತ್ನ

| Published : Jul 26 2024, 01:37 AM IST

ಸಾರಾಂಶ

ಸುರಪುರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ನಿಮಿತ್ತ ನಡೆದ ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ. ನಾಯಕ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸುರಪುರತಾಲೂಕಿನಲ್ಲಿ 11 ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಶಕ್ತಿಮೀರಿ ಯತ್ನಿಸುತ್ತಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ವಿ.ನಾಯಕ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತ ವತಿಯಿಂದ ನಡೆದ ಡೆಂಘೀ ವಿರೋಧಿ ಮಾಸಾಚರಣೆ ಮತ್ತು ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಸೊಳ್ಳೆ ಕಚ್ಚುವುದರಿಂದ ಡೆಂಘೀ ಬರುತ್ತಿದೆ. ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಆದ್ದರಿಂದ ಎಲ್ಲಿಯೂ ನೀರು ನಿಲ್ಲದೆ ನೋಡಿಕೊಳ್ಳಬೇಕು ಎಂದರು.

ಕುಷ್ಠರೋಗವನ್ನು ಇಂದಿನ ಕಾಲದಲ್ಲಿ ಸುಲಭವಾಗಿ ಪತ್ತೆ ಹಚ್ಚಬಹುದು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕಾಣಿಸಿಕೊಳ್ಳುತ್ತದೆ. ತಿಳಿ, ಬಿಳಿ ತಾಮ್ರವರ್ಣದ ಸ್ಪರ್ಷ ಜ್ಞಾನವಿಲ್ಲದ ಮಚ್ಚೆ ಇದ್ದಲ್ಲಿ ಅದೊಂದು ಕುಷ್ಠರೋಗ ಇರಬಹುದು. ಇದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತೆ. ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಪರೀಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು.

ತಹಸೀಲ್ದಾರ್ ಕೆ.ವಿಜಯ ಕುಮಾರ್ ಮಾತನಾಡಿ, ಡೆಂಘೀ ರೋಗವು ಜೀವಕ್ಕೆ ಹಾನಿಕಾರಕವಾಗಿದ್ದು, ಸಾಧ್ಯವಾದಷ್ಟು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಎಲ್ಲಿಯೂ ನೀರು ನಿಲ್ಲದಂತೆ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಚ್ಚರಿಕೆ ನೀಡಿದರು.

ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳಾದ ಅನಿಲ್ ಕಾಂಬ್ಳೆ, ಪಂಡಿತ್ ನಿಂಬೂರೆ, ನಗರಸಭೆ ಆರೋಗ್ಯ ಅಧಿಕಾರಿ ಹಣಮಂತ ಯಾದವ್, ನಗರಸಭೆ ಎಂಜಿನಿಯರ್ ಮಹೇಶ್ ಚಹ್ವಾಣ ಸೇರಿ ಇತರರಿದ್ದರು.