ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ಯಾವುದೇ ಸರ್ಕಾರವಿರಲಿ, ಜನರಿಗೆ ತೊಂದರೆಯಾಗುವ ಕಾನೂನು ಯಾರೂ ಕೂಡ ಜಾರಿಗೆ ತರಬಾರದು. ಜನರ ಹಿತಾಸಕ್ತಿ ಬಿಟ್ಟು, ತಮಗೆ ಬೇಕಾಗಿರುವ ಕಾನೂನು ರಚನೆ ಮಾಡುವುದು ಶೋಭೆ ತರುವಂತದ್ದಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ದೂರದೃಷ್ಟಿಯ ಬಜೆಟ್ ಆಗಿದೆ. 2047ರ ವಿಕಸಿತ ಭಾರತದ ಭದ್ರ ಬುನಾದಿಯ ಬಜೆಟ್ ಇದಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಹೇಳಿದ್ದ ಮಹಾತ್ಮಾ ಗಾಂಧೀಜಿ ಕನಸು ಹಳ್ಳಿಗಳ ಅಭಿವೃದ್ಧಿಯಾಗಿತ್ತು. ಆ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ. ₹53.50 ಲಕ್ಷ ಕೋಟಿ ಬಜೆಟ್ ಮಂಡಿಸಲಾಗಿದೆ. ಸ್ವಾತಂತ್ರ್ಯ ಭಾರತದ ನಂತರ ಮೊದಲ ಬಾರಿಗೆ ಇಷ್ಟು ದೊಡ್ಡ ಬಜೆಟ್ ಮಂಡಿಸಲಾಗಿದೆ. ಈ ಮೂಲಕ ಉದ್ಯೋಗ ಸೃಷ್ಟಿ ಮಾಡುವುದು, ಆರ್ಥಿಕತೆಗೆ ಪ್ರಮುಖ ಮಹತ್ವ ನೀಡಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬುದನ್ನು ಮೋದಿ ಸಾಬೀತುಪಡಿಸಿದ್ದಾರೆ. ದೀರ್ಘ ಕಾಲದ ಸ್ಥಿರತೆ ಹಾಗೂ ಖಚಿತತೆ ಕೊಡುವ ಬಜೆಟ್ ಇದಾಗಿದೆ ಎಂದರು.
ಕ್ಯಾನ್ಸರ್, ಡಯಾಬಿಟೀಸ್ ಸೇರಿದಂತೆ ಗಂಭೀರ ಕಾಯಿಲೆಗಳ ಔಷಧಗಳ ಮೇಲಿನ ಸಂಪೂರ್ಣ ತೆರಿಗೆ ತೆಗೆದಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಲ್ಲಿ ಬಡವರಿಗೆ ₹2 ಲಕ್ಷ ಇದ್ದ ಚಿಕಿತ್ಸಾ ಸೌಲಭ್ಯ ಇದೀಗ ₹5 ಲಕ್ಷದವರೆಗೆ ಕೊಟ್ಟಿದ್ದಾರೆ. ಜೊತೆಗೆ 15 ಸಾವಿರ ಹೈಸ್ಕೂಲ್ ಹಾಗೂ 500 ಕಾಲೇಜುಗಳಲ್ಲಿ ಕ್ರಿಯೇಷನ್ ಲ್ಯಾಬ್ ಘೋಷಿಸಿದ್ದಾರೆ. ಇದು ಉದ್ಯೋಗ ಸೃಷ್ಠಿಗೆ ಕಾರಣವಾಗಲಿದೆ. ಇನ್ನುಳಿದಂತೆ ರೈತರ ಆದಾಯ ಹೆಚ್ಚಿಸಲು ಕೃಷಿಗೆ, ನೀರಾವರಿ ಸೇರಿದಂತೆ ರೈತರಿಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ಕೊಟ್ಟಿದ್ದಾರೆ ಎಂದು ಹೇಳಿದರು.ನಕಲಿ ಗಾಂಧಿಗಳ ಹೆಸರಿನಲ್ಲಿ ಸಿದ್ದು ಕೆಲಸ:
ವಿಬಿ ಜಿ ರಾಮ್ ಜಿ ಯೋಜನೆಗೆ ಕಾಂಗ್ರೆಸ್ ಆಕ್ಷೇಪ ವಿಚಾರಕ್ಕೆ ಮಾತನಾಡಿದ ಅವರು, ಮನರೇಗಾ ಅಂತ ಇದ್ದ ಹೆಸರು ಬದಲಾಯಿಸುವ ಮೂಲಕ ಬಿಜೆಪಿಯವರು ಮಹಾತ್ಮಾ ಗಾಂಧೀಜಿ ಹೆಸರು ತೆಗೆದು ಹಾಕಿದ್ದಾರೆ ಎಂದು ಕಾಂಗ್ರೆಸ್‌ನವರು ಆಕ್ಷೇಪಿಸಿ ವಿಶೇಷ ಅಧಿವೇಶನ ಕರೆದಿದ್ದಾರೆ. ಆದರೆ ಮೊದಲು ಅವರು ಈ ಯೋಜನೆ ಆರಂಭಿಸಿದಾಗ ಜವಾಹಾರ ರೋಜಗಾರ ಯೋಜನೆ ಎಂದು ಇಟ್ಟಿದ್ದರು. ಗಾಂಧೀಜಿ ಮೇಲೆ ಕಾಂಗ್ರೆಸ್‌ನವರಿಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಅವಾಗಲೇ ಗಾಂಧೀಜಿ ಹೆಸರು ಇಡಬೇಕಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಗಾಂಧೀಜಿ ಕಳೆದು ಹೋಗಿದ್ದರು. ಸಾಬರಮತಿ ಅಭಿವೃದ್ಧಿ ಮಾಡಿದ್ದೇ ಮೋದಿ. ರಾಜ್ಯದಲ್ಲಿ ಸಿದ್ದರಾಮಯ್ಯನರು 2ನೇ ಅವಧಿಗೆ ಸಿಎಂ ಆಗಿ 7.5 ವರ್ಷ ಪೂರೈಸಿದ್ದಾರೆ. ಅವರು ಗಾಂಧೀಜಿ ಹೆಸರಿನಲ್ಲಿ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ?. ರಾಜೀವಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಎಂದು ಕೇವಲ ನಕಲಿ ಗಾಂಧಿಗಳ ಹೆಸರಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.ಗಾಂಧೀಜಿ ಹೆಸರು ತೆಗೆದು ಮೋದಿಜಿ ಹೆಸರು ಇಟ್ಟಿಲ್ಲ:
ಮಾತು ಮಾತಿಗೂ ಯೋಜನೆಯಲ್ಲಿದ್ದ ಗಾಂಧೀಜಿ ಹೆಸರು ಕಳೆದೋಯ್ತು ಎನ್ನುವ ಕಾಂಗ್ರೆಸ್ಸಿಗರೇ ಪ್ರಧಾನಿಯವರು ಗಾಂಧೀಜಿ ಹೆಸರು ತೆಗೆದು ಅವರೇನು ಮೋದಿಜಿ ಎಂದು ತಮ್ಮ ಹೆಸರು ಇಟ್ಟುಕೊಂಡಿದ್ದಾರೆಯೇ?, ಬಡವರ ಕಲ್ಯಾಣಕ್ಕಾಗಿ ಮಾರ್ಪಾಡು ಮಾಡಿ ಅದಕ್ಕೆ ತಕ್ಕಂತೆ ಹೆಸರು ಇಟ್ಟಿದ್ದಾರೆ. ಇದರಲ್ಲೇನು ತಪ್ಪಾಗಿದೆ ಎಂಬುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಬೇಕು. ಹಲವು ಕಠಿಣ ನಿಯಮಗಳ ಮೂಲಕ ಕಾಂಗ್ರೆಸ್‌ನವರು ಮಾಡುತ್ತಿದ್ದ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿದ್ದರಿಂದ ಅದನ್ನು ಸಹಿಸದೆ ಹೀಗೆ ಸುಳ್ಳು ಹೇಳಿ ಜನರ ಮನಸು ಕದಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ, ರವೀಂದ್ರ ಲೋಣಿ, ರಾಜುಗೌಡ ಪಾಟೀಲ, ವಿಜಯ ಜೋಶಿ ಇದ್ದರು.