ರೈತರ ಸಮಸ್ಯೆಗಳ ಪರಿಹಾರಕ್ಕೆ ಬಲಿಷ್ಠ ಸಂಘಟನೆ ಅನಿವಾರ್ಯ
KannadaprabhaNewsNetwork | Published : Oct 23 2023, 12:16 AM IST
ರೈತರ ಸಮಸ್ಯೆಗಳ ಪರಿಹಾರಕ್ಕೆ ಬಲಿಷ್ಠ ಸಂಘಟನೆ ಅನಿವಾರ್ಯ
ಸಾರಾಂಶ
ರೈತರು ಸಂಘಟಿತರಾದಲ್ಲಿ ಸರ್ಕಾರ ಉಳಿಯಲು ಸಾಧ್ಯವಿಲ್ಲ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ಪ್ರಸ್ತುತ ರೈತರು ಹಲವು ಸಮಸ್ಯೆಯಿಂದ ಹೈರಾಣಾಗಿದ್ದು, ಪರಿಹಾರಗಳಿಗೆ ಬಲಿಷ್ಠ ಸಂಘಟನೆಯಿಂದ ಮಾತ್ರ ಸಾಧ್ಯ. ಈ ದಿಸೆಯಲ್ಲಿ ರೈತರು ಪ್ರತಿ ಗ್ರಾಮದಲ್ಲಿ ಸಂಘಟನೆಗಳನ್ನು ಆರಂಭಿಸಿ, ಸಾಮೂಹಿಕವಾಗಿ ಹೋರಾಟ ಕೈಗೊಳ್ಳಬೇಕಾಗಿದೆ ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು. ತಾಲೂಕಿನ ಬೆಂಡೆಕಟ್ಟೆ ಗ್ರಾಮದಲ್ಲಿ ರೈತ ಸಂಘದ ಸ್ಥಳೀಯ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬರಗಾಲದಿಂದಾಗಿ ರೈತ ಸಮುದಾಯ ತತ್ತರಿಸಿದೆ. ಬೆಳೆ ಸಂಪೂರ್ಣ ನಾಶವಾಗಿದೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೈತರು ಹೋರಾಡುತ್ತಿದ್ದಾರೆ. ವಿದ್ಯುತ್ ಸಮಸ್ಯೆ ರೈತರನ್ನು ಕಿತ್ತು ತಿನ್ನುತ್ತಿದೆ. ರಾಜಕಾರಣಿಗಳು ಅಧಿಕಾರ ಗಳಿಸಿದ ನಂತರ ರೈತರನ್ನು ಮರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಳೆ ಕೊರತೆಯಿಂದ ಮೆಕ್ಕೆಜೋಳ ಇಳುವರಿ ತೀವ್ರ ಕುಂಠಿತವಾಗಿದ್ದು, ಭತ್ತದ ಬೆಳೆ ಒಣಗುತ್ತಿದೆ. ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ಮಾತ್ರ ಜಾಣಗುರುಡು ಪ್ರದರ್ಶಿಸುತ್ತಿದೆ. ರೈತಶಕ್ತಿ ಬಗ್ಗೆ ಸರ್ಕಾರಕ್ಕೆ ಅರಿವಿಲ್ಲ. ರೈತರು ಸಂಘಟಿತರಾದಲ್ಲಿ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕೂಡಲೇ ಸರ್ಕಾರ ಮಧ್ಯಂತರ ವಿಮಾ ಪರಿಹಾರ ನೀಡಿ, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ಸಂಘಟನಾತ್ಮಕ ಹೋರಾಟದಿಂದ ಮಾತ್ರ ಸೌಲಭ್ಯ ಪಡೆಯಲು ಸಾಧ್ಯ. ಈ ದಿಸೆಯಲ್ಲಿ ರೈತರು ಪ್ರತಿ ಗ್ರಾಮದಲ್ಲಿ ಸಂಘಟನೆ ಮೂಲಕ ಸದೃಢರಾಗಬೇಕು. ಸಂಘಟನೆಯಿಂದ ಮಾತ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಸಾಧ್ಯ ಎಂದು ತಿಳಿಸಿದರು. ಸಂಘದ ಜಿಲ್ಲಾಧ್ಯಕ್ಷ ಶಿವಮೂರ್ತಿ, ಜಿಲ್ಲಾ ಕಾರ್ಯದರ್ಶಿ ಬಲೀಂದ್ರಪ್ಪ ಕವಲಿ, ತಾಲೂಕು ಅಧ್ಯಕ್ಷ ಶಿವಮೂರ್ತ್ಯಪ್ಪ, ಉಪಾಧ್ಯಕ್ಷ ಬೇಗೂರು ಶಿವಪ್ಪ ಈಸೂರು, ಅಬ್ದುಲ್ ಮುನಾಫ್, ಕಾರ್ಯದರ್ಶಿ ಪರಮೇಶ್ವರಪ್ಪ, ವೆಂಕಟೇಶಮೂರ್ತಿ, ಚನ್ನೇಶ್, ಪರಸಪ್ಪ, ವೀರಬಸಯ್ಯ, ಕೃಷ್ಣೋಜಿ ರಾವ್ ಬೆಂಡೆಕಟ್ಟೆ, ಪರಮೇಶ್ವರಪ್ಪ ಮಳವಳ್ಳಿ, ದೇವೇಂದ್ರಪ್ಪ ಗ್ರಾಪಂ ಸದಸ್ಯ ಲಕ್ಷ್ಮಣ್ ಬೆಂಡೆಕಟ್ಟೆ ಮತ್ತಿತರರು ಹಾಜರಿದ್ದರು. - - - ಕೋಟ್ ರೈತ ಸಮುದಾಯ ಪಕ್ಷ ಜಾತಿ ಬೇದ ಮರೆತು ಸಂಘಟಿತರಾದಲ್ಲಿ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ. ಸಮಸ್ಯೆಗಳ ಪರಿಹಾರಕ್ಕೆ ಸಂಘ ಪೂರಕವಾಗಿ ಸ್ಪಂದಿಸಲಿದೆ. ಈ ದಿಸೆಯಲ್ಲಿ ಗ್ರಾಮದಲ್ಲಿ ನೂತನ ರೈತ ಸಂಘ ಅಸ್ಥಿತ್ವ ಗಳಿಸಿದೆ - ಎಸ್.ಎಂ. ಶಿವಾಜಿ ರಾವ್, ಅಧ್ಯಕ್ಷ, ಬೆಂಡೆಕಟ್ಟೆ ಘಟಕ - - - -22ಕೆಎಸ್.ಕೆಪಿ1: ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆಯಲ್ಲಿ ರೈತ ಸಂಘ ನೂತನ ಶಾಖೆಯನ್ನು ರಾಜ್ಯ ರೈತ ಸಂಘ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಉದ್ಘಾಟಿಸಿದರು.